ADVERTISEMENT

ನಾಲೆ ಒಡೆದವರು ಯಾರು?

ವಾರದ ಹಿಂದೆ ದೇವಲಾಪುರ ಕಾಲುವೆ ಒಡೆದು ನೀರು ವ್ಯರ್ಥ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 6:31 IST
Last Updated 20 ಸೆಪ್ಟೆಂಬರ್ 2019, 6:31 IST
ನಾಗಮಂಗಲ ತಾಲ್ಲೂಕಿನ ದೇವಲಾಪುರ ಬಳಿ ಕಾಲುವೆ ಒಡೆದು ನೀರು ಹರಿದಿದೆ
ನಾಗಮಂಗಲ ತಾಲ್ಲೂಕಿನ ದೇವಲಾಪುರ ಬಳಿ ಕಾಲುವೆ ಒಡೆದು ನೀರು ಹರಿದಿದೆ   

ನಾಗಮಂಗಲ: ತಾಲ್ಲೂಕಿನ ದೇವಲಾಪುರ ಗ್ರಾಮದ ಬಳಿ ವಾರದ ಹಿಂದೆ ಹೇಮಾವತಿ ನಾಲೆ ಒಡೆದಿದ್ದು ಅಪಾರ ಪ್ರಮಾಣದ ನೀರು ಹರಿದು ಹೋಗಿದೆ. ಸ್ಥಳೀಯರೇ ನಾಲೆ ಒಡೆದು ಹಾಕಿದ್ದಾರೆ ಎಂದು ಹೇಮಾವತಿ ಎಡದಂಡೆ ನಾಲೆ ವಿಭಾಗದ ಅಧಿಕಾರಿಗಳು ಆರೋಪಿಸಿದ್ದಾರೆ.

ಹಾಸನ ಜಿಲ್ಲೆಯ ಹೇಮಾವತಿ ಜಲಾಶಯ ಭರ್ತಿಯಾಗಿದ್ದು, ಕೊನೆಯ ಭಾಗವಾದ ನಾಗಮಂಗಲ ತಾಲ್ಲೂಕಿನ ನಾಲೆಗಳಿಗೂ ನೀರು ಹರಿಸಲಾಗುತ್ತಿದೆ. ದೇವಲಾಪುರದ ಬಳಿ ಅರಣ್ಯ ಪ್ರದೇಶವಿದ್ದು, ಅಲ್ಲಿ ಭೂಮಿ ಕುಸಿತದಿಂದ ನಾಲೆ ಒಡೆದಿದೆ. ಕಳೆದ ವರ್ಷವೂ ಇದೇ ಜಾಗದಲ್ಲಿ ಕಾಲುವೆ ಒಡೆದಿತ್ತು. ನಂತರ ದುರಸ್ತಿ ಪಡಿಸಲಾಗಿತ್ತು. ಆದರೆ, ಕಳಪೆ ಕಾಮಗಾರಿಯಿಂದಾಗಿ ಮತ್ತೆ ನಾಲೆ ಒಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

‘ಈ ಕಾಲುವೆಯನ್ನು ರೈತರೇ ಒಡೆದು ಹಾಕಿದ್ದಾರೆ. ಕಳೆದ ವರ್ಷವೂ ಇದೇ ರೀತಿ ಒಡೆದು ಹಾಕಿದ್ದರು. ಬಳಿಕ, ದುರಸ್ತಿ ಮಾಡಲಾಗಿತ್ತು. ಬಿಂಡೇನಹಳ್ಳಿ ಮತ್ತು ನಾಗನಕೆರೆ ಗ್ರಾಮಗಳ ಕೆರೆಗೆ ನೀರು ತುಂಬಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ. ಈಗ ನಾಲೆಗೆ ಹರಿಯುತ್ತಿದ್ದ ನೀರು ನಿಲ್ಲಿಸಲಾಗಿದೆ’ ಎಂದು ಹೇಮಾವತಿ ಎಡದಂಡೆ ನಾಲೆ ವಿಭಾಗದ ಪ್ರಭಾರಿ ಸಹಾಯಕ ಕಾಯರ್ಪಾಲಕ ಎಂಜಿನಿಯರ್‌ ಮನು ತಿಳಿಸಿದರು.

ADVERTISEMENT

‘15 ವರ್ಷಗಳಿಂದ ದೇವಲಾಪುರ ಕೆರೆ ತುಂಬಿಲ್ಲ. ಈ ಕೆರೆ ಕೋಡಿ ಬಿದ್ದರೆ ಮುಂದಿನ ಸರಣಿ ಕೆರೆಗಳು ತುಂಬುತ್ತವೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ
ದಿಂದಾಗಿ ದೇವಲಾಪುರ ಕೆರೆ ತುಂಬುವ ಲಕ್ಷಣ ಕಾಣುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಜಗದೀಶ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.