ADVERTISEMENT

ಕೆಆರ್‌ಎಸ್‌ ಉಳಿಸಿ: ಜನಾಂದೋಲನಕ್ಕೆ ಚಾಲನೆ

ಗಣಿಗಾರಿಕೆ ನಿಷೇಧಿಸಲು, ಡಿಸ್ನಿಲ್ಯಾಂಡ್‌ ಯೋಜನೆಯನ್ನು ಕೈಬಿಡಲು ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 11:09 IST
Last Updated 18 ಡಿಸೆಂಬರ್ 2018, 11:09 IST
ಕೆಆರ್‌ಎಸ್ ಉಳಿಸಿ ಜನಾಂದೋಲನಕ್ಕೆ ಗಾಂಧಿವಾದಿ ಎಚ್‌.ಎಸ್.ದೊರೆಸ್ವಾಮಿ ಚಾಲನೆ ನೀಡಿದರು
ಕೆಆರ್‌ಎಸ್ ಉಳಿಸಿ ಜನಾಂದೋಲನಕ್ಕೆ ಗಾಂಧಿವಾದಿ ಎಚ್‌.ಎಸ್.ದೊರೆಸ್ವಾಮಿ ಚಾಲನೆ ನೀಡಿದರು   

ಪಾಂಡವಪುರ: ‘ಪ್ರಕೃತಿ ಸಂಪತ್ತಿನ ಲೂಟಿಕೋರರು ಬೇಬಿಬೆಟ್ಟವನ್ನು ನುಣ್ಣಗೆ ಮಾಡುತ್ತಿದ್ದಾರೆ. ಕೆಆರ್‌ಎಸ್‌ ಗಿಂತ ಅವರ ಹಿತವೇ ಮುಖ್ಯವಾಗಿದೆ. ಇನ್ನೊಂದೆಡೆ ಸರ್ಕಾರ ಡಿಸ್ನಿಲ್ಯಾಂಡ್‌ ಯೋಜನೆ ಕೈಗೆತ್ತಿಕೊಂಡಿದೆ. ಈ ಸ್ಥಿತಿಯಲ್ಲಿ ರೈತರು, ಜನರು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು’ ಎಂದು ಹಿರಿಯ ಗಾಂಧಿವಾದಿ ಎಚ್‌.ಎಸ್.ದೊರೆಸ್ವಾಮಿ ಹೇಳಿದರು.

ಕೆಆರ್‌ಎಸ್‌ನ ನಾರ್ತ್ ಬ್ಯಾಂಕ್‌ನಲ್ಲಿ ಸೋಮವಾರ ‘ಕಾವೇರಿ–ಕೆಆರ್‌ಎಸ್‌ ಉಳಿವಿಗಾಗಿ ಜನಾಂದೋಲನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆಲವರಿಗೆ ‌ಜನಸಮುದಾಯದ ಹಿತಕ್ಕಿಂತ ತಮ್ಮ ಹಿತವೇ ಮುಖ್ಯವಾಗಿದೆ. ಭಾರಿ ಸ್ಫೋಟ ಬಳಸಿ ಗಣಿಗಾರಿಕೆ ನಡೆದಿದೆ. ಕೆಆರ್‌ಎಸ್ ಅಣೆಕಟ್ಟು ಸೂಕ್ಷ್ಮ ಪ್ರದೇಶ. ಸುತ್ತಮುತ್ತಲಿನ ಗಣಿಗಾರಿಕೆ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಗಣಿ ಧೂಳಿನಿಂದ ರೋಗ ‌ಹರಡುತ್ತದೆ. ಕೃಷಿ ಹಾಳಾಗಲಿದೆ. ನೀರು ಮಲಿನವಾಗುತ್ತದೆ. ಈ ಎಲ್ಲವೂ ಪರಿಸರಕ್ಕೆ ಮಾರಕ ಎಂದು ಅರಿಯಬೇಕಿದೆ. ನಾಳೆ ಜಲಾಶಯಕ್ಕೆ ಅಪಾಯವಾದರೆ ಕೆಲವು ಹಳ್ಳಿಗಳು ನಗರಗಳು ಮುಳುಗಲಿವೆ. ಜನರ ಬದುಕು ಮೂರಾಬಟ್ಟೆಯಾಗಲಿದೆ. ಕೃಷಿ, ಕುಡಿಯುವ ನೀರಿಗೂ ತತ್ಪಾರ ಉಂಟಾಗಲಿದೆ ಎಂದು ಅರಿಯಬೇಕಿದೆ’ ಎಂದರು.

‘ಪ್ರಕೃತಿ ಸಂಪತ್ತು ಜನರದ್ದು, ಸರ್ಕಾರ ಬೇರೆ ಅಲ್ಲ. ಜನರು ಬೇರೆ ಅಲ್ಲ. ಜನರಿಂದ ಸರ್ಕಾರ. ಹಾಗಾಗಿ ಜನರ ಒಳಿತು ಕಾಪಾಡಬೇಕಿದೆ. ಬಳ್ಳಾರಿಯಲ್ಲಿ ಗಣಿಲೂಟಿಯ ಅನಾಹುತವನ್ನು ನಾವು ನೋಡಿದ್ದೇವೆ. ಸರ್ಕಾರ ಇನ್ನಾದರೂ ಜಾಗೃತಗೊಳ್ಳಲಿ. ಇಲ್ಲಿನ ಗಣಿಗಾರಿಕೆಗೆ ಶಾಶ್ವತ ನಿಷೇಧ ಹೇರಲಿ’ ಎಂದು ಅವರು ಒತ್ತಾಯಿಸಿದರು.

ಹೊಟ್ಟೆಗೆ ಇಟ್ಟಿಲ್ಲ, ಜುಟ್ಟಿಗೆ ಹೂ ಎಂಬಂತೆ ಸಾವಿರಾರು ಕೋಟಿ ವೆಚ್ಚದಲ್ಲಿ ಡಿಸ್ನಿಲ್ಯಾಂಡ್ ಯೋಜನೆಗೆ ಸರ್ಕಾರ ಮುಂದಾಗಿದೆ. ರೈತರ ಹಿತಕ್ಕಿಂತ ಉಳ್ಳವರ ಮೋಜುಮಸ್ತಿ ಮುಖ್ಯವೆ? ಡಿಸ್ನಿಲ್ಯಾಂಡ್‌ಗೆ ರೈತರ ಜಮೀನು ಬೇಕಾಗಿಲ್ಲ. ಸರ್ಕಾರಿ ಜಾಗವಿದೆ ಎಂದು ಹೇಳುತ್ತಿದ್ದಾರೆ. ಡಿಸ್ನಿಲ್ಯಾಂಡ್‌ನಿಂದ ರೈತರು, ಜನರಿಗೆ ಆಗುವ ಪ್ರಯೋಜನವೇನು?’ ಎಂದರು.

ಸಮಾಜವಾದಿ ಪ.ಮಲ್ಲೇಶ್ ಅವರು, ಕೆಆರ್‌ಎಸ್‌ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆಗೆ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ. ಆದರೆ ಯಾವ ಗಳಿಗೆಯಲ್ಲಾದರೂ ಪ್ರಾರಂಭವಾಗಬಹುದು. ಇದರ ಹಿಂದೆ ಹಣಬಲ, ಅಧಿಕಾರದ ಬಲವಿದೆ. ಸಚಿವರು–ಶಾಸಕರಿದ್ದಾರೆ. ಇಂಥ ಬಲಾಢ್ಯರ ಜೊತೆ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ಹೇಳಿದರು.

‘ಡಿಸ್ನಿಲ್ಯಾಂಡ್‌ ಎಂಬುದು ಮಂತ್ರಿ ಶಾಸಕರ ಜೇಬು ತುಂಬಿಕೊಳ್ಳುವ ಯೋಜನೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ಯೋಜನೆಗೆ ಬಂಡವಾಳ ಹಾಕುವವರು ರಾಜಕೀಯ ಪಕ್ಷಗಳಿಗೆ ಚುನಾವಣೆ ವೆಚ್ಚಕ್ಕೂ ದೇಣಿಗೆ ನೀಡಲಿದ್ದಾರೆ. ಈ ಸ್ಥಿತಿಯಲ್ಲಿ ರೈತ, ದಲಿತ ಮತ್ತು ಭಾಷಾ ಚಳವಳಿಗಳು ಒಂದಾದರೆ ಮಾತ್ರ ನಾಡು ಉಳಿಸಲು ಸಾಧ್ಯ’ ಎಂದರು.

* ಕೆಆರ್‌ಎಸ್‌ ಅಣೆಕಟ್ಟೆ ನಿರ್ಮಿಸುವಾಗ ಮುಳುಗಡೆಯಾದ ಗ್ರಾಮಗಳಿಗೆ ಪುನರ್ ವಸತಿ, ಮೂಲಸೌಕರ್ಯ ಕಲ್ಪಿಸಬೇಕು
‘ಹಿಂದೆ ಕೈಕುಳಿ ಮತ್ತು ಸಣ್ಣ ಸಿಡಿಮದ್ದಿನಿಂದ ಗಣಿಗಾರಿಕೆ ನಡೆಯುತ್ತಿತ್ತು. ಅಪಾಯ ಇರಲಿಲ್ಲ. ಈಗ ಮೆಗಾಬ್ಲಾಸ್ಟ್‌ ನಡೆದಿದೆ. ಜಲಾಶಯಕ್ಕೆ ಅಪಾಯವಿದೆ.

-ಸುನೀತಾ ಪುಟ್ಟಣ್ಣಯ್ಯ

* ನಮಗೆ ಈಗಿರುವ ಕಾವೇರಿ ಪ್ರತಿಮೆ ಸಾಕು. ಬೃಹತ್ ಪ್ರತಿಮೆ ಬೇಡ, ಮೋಜು ಮಸ್ತಿಯ ಡಿಸ್ನಿಲ್ಯಾಂಡ್‌ ಬೇಡ

-ಸುನಂದಾ ಜಯರಾಂ,ರೈತ ಹೋರಾಟಗಾರು

ಒತ್ತಾಯಗಳು

* ಕೆಆರ್‌ಎಸ್ ಸುತ್ತಮುತ್ತಲಿನ 20 ಕಿ.ಮೀ.ವ್ಯಾಪ್ತಿಯಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಷೇಧಿಸಬೇಕು.

* ಅಣೆಕಟ್ಟೆಯ ಪಾರಂಪರಿಕ ಸ್ವರೂಪ ಹಾಗೂ ಭದ್ರತೆಗೆ ಹಾನಿಯುಂಟು ಮಾಡುವ ಬೃಹತ್‌ ಪ್ರತಿಮೆ, ‌ಎತ್ತರದ ಗೋಪುರ ಮತ್ತು ಡಿಸ್ನಿಲ್ಯಾಂಡ್‌ ಯೋಜನೆ ಕೈಬಿಡಬೇಕು.

* ಕಾಡು ಮೀಸಲು ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ಚಟುವಟಿಕೆಗಳನ್ನು ಕೂಡಲೇ ನಿಲ್ಲಿಸಬೇಕು.

* ಗಣಿಗಾರಿಕೆ ನಡೆಸುತ್ತಿರುವ ಕಡೆ ಕೆರೆ, ಕಾಲುವೆ, ಹಳ್ಳ ಸಮತಟ್ಟುಗೊಳಿಸಿ ವಿರೂಪಗೊಳಿಸಲಾಗಿದೆ. ಸದರಿ ಸ್ಥಳಗಳನ್ನು ಪುನಶ್ಚೇತನ ಕೈಗೊಳ್ಳಬೇಕು.

* ಜಲಮೂಲಗಳ ರಕ್ಷಣೆಗಾಗಿ ತುರ್ತುನಿಗಾ ಘಟಕಗಳನ್ನು ಎಲ್ಲ ಕಡೆ ಸ್ಥಾಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.