ADVERTISEMENT

ಲೋಕ್ ಅದಾಲತ್: 34,686 ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 13:17 IST
Last Updated 11 ಡಿಸೆಂಬರ್ 2023, 13:17 IST

ಮಂಡ್ಯ: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ 30,348 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು 34,686 ಪ್ರಕರಣಗಳು ಇತ್ಯರ್ಥವಾಗಿದೆ.

ಮಂಡ್ಯ ನಗರದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 25,584 ಪ್ರಕರಣಗಳು, ಮದ್ದೂರಿನ ವಿವಿಧ ನ್ಯಾಯಾಲಯಗಳಲ್ಲಿ 2394, ಶ್ರೀರಂಗಪಟ್ಟಣದಲ್ಲಿ 1967, ಪಾಂಡವಪುರದಲ್ಲಿ 651, ಮಳವಳ್ಳಿಯಲ್ಲಿ 1225, ನಾಗಮಂಗಲದಲ್ಲಿ 576 ಹಾಗೂ ಕೆ.ಆರ್.ಪೇಟೆಯ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 2292 ಪ್ರಕರಣಗಳು ಇತ್ಯರ್ಥಗೊಂಡಿವೆ.

ದಾಂಪತ್ಯದಲ್ಲಿ ಬಿರುಕು ಮೂಡಿ ವಿವಾಹ ವಿಚ್ಚೇದನಕ್ಕೆ ಮಂಡ್ಯ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಕೆಲವು ವರ್ಷಗಳ ದಂಪತಿಯೊಬ್ಬರು ಅದಾಲತ್‌ನಲ್ಲಿ ಒಂದುಗೂಡಿದ್ದು ವಿಶೇಷವಾಗಿತ್ತು. ಈ ದಂಪತಿ ಭಿನ್ನಾಭಿಪ್ರಾಯ ನಿವಾರಣೆಗೆ ನ್ಯಾಯಾಧೀಶರು, ವಕೀಲರು ಹಾಗೂ ಸಂಧಾನಕಾರರು ನಡೆಸಿದ ರಾಜಿ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು, ದಾಂಪತ್ಯದ ತಪ್ಪು ತಿಳುವಳಿಕೆಗಳನ್ನು, ಸರಿಪಡಿಸಿಕೊಂಡು ದಂಪತಿ ಒಂದಾದರು.

ADVERTISEMENT

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಜಿ.ರಮಾ ಮಂಡ್ಯದ ನ್ಯಾಯಾಲಯದಲ್ಲಿ ಒಂದಾದ ಜೋಡಿಗೆ ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.