ADVERTISEMENT

ಅನನ್ಯ ಕೃಷ್ಣ ಭಕ್ತ ಅಮೆರಿಕದ ಜಾಕ್ ಹೆಬ್ನರ್

ಭಕ್ತಿ ವೇದಾಂತ ಪ್ರಭುಪಾದರಿಂದ ಸನ್ಯಾಸ ದೀಕ್ಷೆ, ಗೀತೆಯ ಸಾರ ಪ್ರಚಾರ

ಗಣಂಗೂರು ನಂಜೇಗೌಡ
Published 18 ಆಗಸ್ಟ್ 2019, 5:47 IST
Last Updated 18 ಆಗಸ್ಟ್ 2019, 5:47 IST
ಗೋವಿಂದ ವನದಲ್ಲಿ ಸುದರ್ಶನ ಹೋಮ ನಡೆಸುತ್ತಿರುವ ಜಾಕ್ ಹೆಬ್ನರ್ (ಎಡದಿಂದ ನಾಲ್ಕನೆಯವರು)
ಗೋವಿಂದ ವನದಲ್ಲಿ ಸುದರ್ಶನ ಹೋಮ ನಡೆಸುತ್ತಿರುವ ಜಾಕ್ ಹೆಬ್ನರ್ (ಎಡದಿಂದ ನಾಲ್ಕನೆಯವರು)   

ಶ್ರೀರಂಗಪಟ್ಟಣ: ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಎತ್ತಣಿಂದೆತ್ತ ಸಂಬಂಧ ಎಂಬ ಮಾತು ಅಮೆರಿಕ ಮೂಲದ ಜಾಕ್ ಹೆಬ್ನರ್ (ಭಕ್ತಿ ಗೌರವ ನರಸಿಂಘ ಮಹಾರಾಜ್) ಅವರಿಗೂ ಅನ್ವಯಿಸುತ್ತದೆ.

ಕ್ರೈಸ್ತ ಧರ್ಮಕ್ಕೆ ಸೇರಿದ ಜಾಕ್ ಹೆಬ್ನರ್ ಕೃಷ್ಣನ ಭಕ್ತಿ ಮಾರ್ಗಕ್ಕೆ ಮನಸೋತು 40 ವರ್ಷಗಳಿಂದ ಭಗವದ್ಗೀತೆಯ ತತ್ವಗಳನ್ನು ದೇಶ, ವಿದೇಶಗಳಲ್ಲಿ ಪ್ರಚುರಪಡಿಸುತ್ತಿರುವುದು ಸೋಜಿಗ ಎನಿಸುತ್ತದೆ. ಭಗವದ್ಗೀತೆಯ ತತ್ವಗಳು, ಆಸ್ತಿಕತೆಯ ವಿಕಾಸ ಸೇರಿದಂತೆ 15ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಜಾಕ್ ಹೆಬ್ನರ್, ಇಲ್ಲಿನ ಕಾವೇರಿ ನದಿ ತೀರದ ದೊಡ್ಡ ಗೋಸಾಯಿಘಾಟ್ ಬಳಿ ನರಸಿಂಘ ಚೈತನ್ಯ ಮಠವನ್ನು ಸ್ಥಾಪಿಸಿ, ತಮ್ಮ ಅನುಯಾಯಿಗಳ ಜತೆಗೂಡಿ ಭಗವದ್ಗೀತೆಯ ಪರಮ ತತ್ವಗಳ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಅಂತರರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ (ಇಸ್ಕಾನ್) ಸಂಸ್ಥಾಪಕ ಭಕ್ತಿ ವೇದಾಂತ ಪ್ರಭುಪಾದರ ಬಳಿ 1976ರಲ್ಲಿ ಸನ್ಯಾಸ ದೀಕ್ಷೆ ಪಡೆದಿರುವ ಜಾಕ್ ಹೆಬ್ನರ್, ಶ್ರೀಪಾದ ನರಸಿಂಘ ಮಹಾರಾಜ್ ಎಂದು ಪ್ರಸಿದ್ಧರಾಗಿದ್ದಾರೆ. 1994ರಲ್ಲಿ ಗೋಸಾಯಿಘಾಟ್ ಬಳಿ ನರಸಿಂಘ ಚೈತನ್ಯ ಮಠ ಸ್ಥಾಪಿಸಿ ಅದಕ್ಕೆ ಗೋವಿಂದ ವನ ಎಂದು
ಹೆಸರಿಟ್ಟಿದ್ದಾರೆ.

ADVERTISEMENT

ಕೃಷ್ಣನ ಅವತಾರ ಎಂದೇ ನಂಬಲಾಗಿರುವ ಬಂಗಾಳದ ಚೈತನ್ಯ ಮಹಾಪ್ರಭುಗಳ ಗೌಡೀಯ ವೈಷ್ಣವ ಸಂಪ್ರದಾಯದ ಪರಂಪರೆಯಂತೆ ನರಸಿಂಘ ಚೈತನ್ಯ ಮಠದಲ್ಲಿ ಕೃಷ್ಣನ ಆರಾಧನೆ ನಡೆಯುತ್ತದೆ. ಭಕ್ತಿ ಗೌರವ ನರಸಿಂಘ ಮಹಾರಾಜ್ ಮತ್ತು ಭಕ್ತಿ ಭಾವ ವಿಷ್ಣು ಮಹಾರಾಜ್ ನಿರ್ದೇಶನದಲ್ಲಿ ಧಾರ್ಮಿಕ ಕೈಂಕರ್ಯಗಳು ಜರುಗುತ್ತಿದ್ದು, ಭಕ್ತಿ ಮಾರ್ಗದ ಮೂಲಕ ದೈವತ್ವ ಪಡೆಯುವ ಮಾರ್ಗವನ್ನು ಬೋಧಿಸಲಾಗುತ್ತದೆ.

ವಿದೇಶಿ ಭಕ್ತರು: ಅಮೆರಿಕ, ಜೆಕ್ ಗಣರಾಜ್ಯ, ಜರ್ಮನಿ, ಪೋಲೆಂಡ್ ಇತರ ದೇಶಗಳ ಕೃಷ್ಣನ ಭಕ್ತರು ನರಸಿಂಘ ಚೈತನ್ಯ ಮಠಕ್ಕೆ ಆಗಾಗ್ಗೆ ಭೇಟಿ ನೀಡುತ್ತಾರೆ. ಬೆಂಗಳೂರು, ಮೈಸೂರು, ಉತ್ತರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಈ ಮಠದ ಅನುಯಾಯಿಗಳಿದ್ದಾರೆ.

ಪ್ರಕಾಶನ: ಭಾರತೀಯ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ಪುಸ್ತಕ, ಆಡಿಯೊ ಮತ್ತು ವಿಡಿಯೊಗಳನ್ನು ಗೋಸಾಯಿ ಪ್ರಕಾಶನದ ಹೆಸರಿನಲ್ಲಿ ಮುದ್ರಿಸಲಾಗುತ್ತದೆ. ಜನಸಾಮಾನ್ಯರಿಗೆ ಕೃಷ್ಣನ ಭಕ್ತಿ ಮಾರ್ಗವನ್ನು ಪರಿಚಯಿಸಲು ಪ್ರವಚನ, ಕೀರ್ತನೆ ಆಯೋಜಿಸಲಾಗುತ್ತದೆ. ನದಿ ಶುದ್ಧೀಕರಣ, ಪ್ಲಾಸ್ಟಿಕ್ ನಿಷೇಧದಂತಹ ಪರಿಸರ ಸಂಬಂಧಿ ಕಾರ್ಯಕ್ರಮಗಳನ್ನೂ ನರಸಿಂಘ ಚೈತನ್ಯ ಮಠ ಮಾಡುತ್ತಿದೆ.

ಕೃಷ್ಣ ಜನ್ಮಾಷ್ಟಮಿ

ಕೃಷ್ಣ ಜನ್ಮಾಷ್ಟಮಿಯಂದು ನರಸಿಂಘ ಚೈತನ್ಯ ಮಠದಲ್ಲಿ ಹಬ್ಬದ ಸಂಭ್ರಮ ಮನೆ ಮಾಡುತ್ತದೆ. ಮಥುರಾ ಮತ್ತು ಬೃಂದಾವನ ಪದ್ಧತಿಯಲ್ಲಿ ಇಲ್ಲಿ ಆ.24ರಂದು ಜನ್ಮಾಷ್ಟಮಿ ನಡೆಯುತ್ತದೆ. ಕೊಳಲು ಮತ್ತು ನಾದಸ್ವರ ವಾದನ, ಕೃಷ್ಣನಿಗೆ ಅಭಿಷೇಕ, ಮಹಾಆರತಿ, ರಥೋತ್ಸವ, ಭಜನೆ, ಕೀರ್ತನೆ ಮಹಾ ಪ್ರಸಾದ ವಿನಿಯೋಗ ನಡೆಯುತ್ತವೆ. ಮೇ ತಿಂಗಳಲ್ಲಿ ನರಸಿಂಹ ಜಯಂತಿ, ಜುಲೈ ಮಾಸದಲ್ಲಿ ಜಗನ್ನಾಥ ರಥೋತ್ಸವ ಹಾಗೂ ಚೈತನ್ಯ ಮಹಾಪ್ರಭು ಜಯಂತಿಯನ್ನೂ ಇಲ್ಲಿ ಆಚರಿಸಲಾಗುತ್ತದೆ.

‘ಕೃಷ್ಣ ಜನ್ಮಾಷ್ಟಮಿಯಂದು ನರಸಿಂಘ ಚೈತನ್ಯ ಮಠದಲ್ಲಿ 5ರಿಂದ 6 ಸಾವಿರ ಜನರು ಸೇರುತ್ತಾರೆ. ಮಧ್ಯಾಹ್ನ 3 ಗಂಟೆಯಿಂದ ತಡರಾತ್ರಿ 11.30ರವರೆಗೆ ಸಂಗೀತ, ಭಜನೆ, ಪ್ರವಚನ, ಕೀರ್ತನೆ, ರಥೋತ್ಸವಗಳು ನಡೆಯುತ್ತವೆ. ಮಹಾ ಪ್ರಸಾದ ವಿತರಣೆಗೆ ನಮ್ಮ ಮಠ ಪ್ರಸಿದ್ಧಿ ಪಡೆದಿದೆ’ ಎಂದು ಮಠದ ವ್ಯವಸ್ಥಾಪಕ ಶ್ಯಾಮಸುಂದರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.