ADVERTISEMENT

ಹಳ್ಳಿಕಾರ ಸಮಾಜ ಪ್ರಾಧಿಕಾರ ಅಗತ್ಯ

ಸಮಾಜದ ಸಂಘಟನೆಗೆ ಯುವಕರು ಮುಂದಾಗಿ: ಹಳ್ಳಿಕಾರ ಮಠ ಟ್ರಸ್ಟ್ ಅಧ್ಯಕ್ಷ ನಾಗಯ್ಯ ಸಲಹೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 1:21 IST
Last Updated 30 ನವೆಂಬರ್ 2020, 1:21 IST
ಕಿಕ್ಕೇರಿ ಹೋಬಳಿಯ ಕಾಳೇನಹಳ್ಳಿ ಗ್ರಾಮದಲ್ಲಿ ಭಾನುವಾರ ಹಳ್ಳಿಕಾರ ಸಮಾಜದ ಯುವ ಘಟಕ ಉದ್ಘಾಟಿಸಲಾಯಿತು
ಕಿಕ್ಕೇರಿ ಹೋಬಳಿಯ ಕಾಳೇನಹಳ್ಳಿ ಗ್ರಾಮದಲ್ಲಿ ಭಾನುವಾರ ಹಳ್ಳಿಕಾರ ಸಮಾಜದ ಯುವ ಘಟಕ ಉದ್ಘಾಟಿಸಲಾಯಿತು   

ಕಿಕ್ಕೇರಿ: ‘ಹಳ್ಳಿಕಾರ ತಳಿಯ ರಾಸುಗಳಿಂದ ಸಮಾಜದ ಆರೋಗ್ಯ ಕಾಪಾಡುವ ಗೋಪಾಲಕರ ಸಮುದಾಯವಾದ ಹಳ್ಳಿಕಾರ ಸಮಾಜದ ಅಭಿವೃದ್ಧಿಗಾಗಿ ಪ್ರಾಧಿಕಾರ ಬೇಕಿದ್ದು ಸರ್ಕಾರಕ್ಕೆ ಶೋಷಿತ ಸಮಾಜದ ಕೂಗು ಮುಟ್ಟಿಸಬೇಕಿದೆ’ ಎಂದು ಹಳ್ಳಿಕಾರ ಮಠ ಟ್ರಸ್ಟ್ ರಾಜ್ಯಾಧ್ಯಕ್ಷ ವಕೀಲ ನಾಗಯ್ಯ ಅಭಿಪ್ರಾಯಪಟ್ಟರು.

ಹೋಬಳಿಯ ಕಾಳೇನಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಹಳ್ಳಿಕಾರ ಯುವಕ ಸಂಘದ ಗ್ರಾಮೀಣ ಘಟಕ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಸುಗಳಲ್ಲಿ ಶುದ್ಧ ತಳಿ ತಮ್ಮ ಸಮಾಜದ ಸಂಕೇತವಾಗಿದೆ. ಕೃಷಿಕರಾಗಿ, ಪಶುಪಾಲಕರಾಗಿ ಸಮುದಾಯದ ಧ್ವನಿ ಎತ್ತಲು ಗುರುಪೀಠ, ರಾಜಕೀಯ ಸ್ಥಾನಮಾನವಿಲ್ಲ. ಮಠವಾದಲ್ಲಿ ಗುರುಗಳ ಹಿಂದೆ ಸಮಾಜದ ಗುರಿ, ಶಕ್ತಿ ಪ್ರದರ್ಶಿಸಬಹುದು. ವಿಧಾನಸೌಧದ ಮೆಟ್ಟಲು ಹತ್ತುವ ಗಟ್ಟಿಧ್ವನಿಯ ನಾಯಕ ಬೇಕಿದ್ದು, ಸಂಘದ ಒಗ್ಗಟ್ಟು, ಸಂಘಟನೆಗೆ ಯುವಶಕ್ತಿ ಮುಂದಾಗಬೇಕಿದೆ’ ಎಂದರು.

ADVERTISEMENT

‘ಸಮುದಾಯದಲ್ಲಿ ಏಳು ಕಟ್ಟೆಮನೆಗಳಿದ್ದು, ಹರಿದು ಹಂಚಿವೆ. ಒಗ್ಗೂಡಿಸಲು ರಾಜ್ಯದಲ್ಲಿಯೇ ಪ್ರಥಮವಾಗಿ ಗ್ರಾಮದಲ್ಲಿ ಯುವಕ ಸಂಘದ ಗ್ರಾಮ ಘಟಕ ಸ್ಥಾಪಿತ ವಾಗಿದೆ. ಇದು ಸಮಾಜದ ಜಾಗೃತಿ ವೇದಿಕೆ ಯಾಗಬೇಕು’ ಎಂದು ಹೇಳಿದರು.

ಗೌರವಾಧ್ಯಕ್ಷ ರಂಗಸ್ವಾಮಿ ಮಾತನಾಡಿ, ‘ಹಳ್ಳಿಕಾರ ರಾಸು ಗೊತ್ತಿರುವ ಜನರಿಗೆ ಹಳ್ಳಿಕಾರ ಜನರ ಶಕ್ತಿ ತೋರಿಸಲು ಶಿಕ್ಷಣ ಶಕ್ತಿಯಾಗಬೇಕಿದೆ. ಉಳ್ಳವರು ಪ್ರತಿಭೆಗಳನ್ನು ಮೇಲೆ ತ್ತುವ ಕೆಲಸಕ್ಕೆ ಮುಂದಾದ್ದಲ್ಲಿ ಸಮಾಜ ಪ್ರವರ್ಧಮಾನವಾಗಲಿದೆ. ಹೊಯ್ಸಳರು, ಗಂಗರು, ವಿಜಯನಗರ, ಮೈಸೂರು ಅರಸರ ಕಾಲದಲ್ಲಿ ನಮ್ಮ ಹಿರಿಯರು ಸೇನಾಧಿಪತಿಗಳಾಗಿ ಅಮರರಾದರು. ವಜ್ರಮುನಿಯಂತಹ ಅಪ್ರತಿಮ ನಟರಿಂದ ಸಮಾಜದ ಹೆಸರು ಹಲವರಿಗೆ ತಿಳಿದಿರುವುದನ್ನು ಬಿಟ್ಟರೆ ಸಂಘಟನೆ ಕಾಣದೆ ಸಮಾಜ ಮೂಲೆ ಗುಂಪಾಗಿದೆ’ ಎಂದು ವಿಷಾದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಸಮಾಜದ ಸಂಕೇತವಾದ ಹಳ್ಳಿಕಾರ ರಾಸುಗಳನ್ನು ಸಿಂಗರಿಸಿ ಗಣ್ಯರನ್ನು ಮೆರವಣಿಗೆ ಮಾಡಲಾಯಿತು. ಸಮಾಜದ ಸಂಘಟನೆಗಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ಸಮಾಜದ ಮುಖಂಡರಾದ ಪ್ರಹ್ಲಾದಪ್ಪ, ಶ್ರೀನಿವಾಸ, ರಾಜಣ್ಣ, ಪಟೇಲ್ ಪಾಂಡು, ಮುನಿಯಪ್ಪ, ಜಾನೇಗೌಡ, ಸಿದ್ಧಾಪುರ ರಂಗೇಗೌಡ, ಕುಮಾರ್, ಮಾರ್ಗೋನಹಳ್ಳಿ ಎಂ.ಡಿ. ಶಿವಣ್ಣ, ನರಸೇಗೌಡ, ಅಜ್ಜೇಗೌಡ, ಕಾಳೇಗೌಡ, ಆನಂದ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.