ADVERTISEMENT

ಪಾಳು ಮನೆಯಾದ ಪೊಲೀಸ್‌ ಉಪಠಾಣೆ!

ಎರಡು ವರ್ಷಗಳಿಂದ ಪಾಳುಬಿದ್ದಿರುವ ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಕಟ್ಟಡ

ಗಣಂಗೂರು ನಂಜೇಗೌಡ
Published 23 ಡಿಸೆಂಬರ್ 2020, 4:03 IST
Last Updated 23 ಡಿಸೆಂಬರ್ 2020, 4:03 IST
ಶ್ರೀರಂಗಪಟ್ಟಣ ಟೌನ್‌ ಗಂಜಾಂನ ಗುಂಬಸ್‌ ರಸ್ತೆಯಲ್ಲಿರುವ ಪೊಲೀಸ್‌ ಉಪ ಠಾಣೆಯ ಬಾಗಿಲು ಮರಿದಿರುವುದು
ಶ್ರೀರಂಗಪಟ್ಟಣ ಟೌನ್‌ ಗಂಜಾಂನ ಗುಂಬಸ್‌ ರಸ್ತೆಯಲ್ಲಿರುವ ಪೊಲೀಸ್‌ ಉಪ ಠಾಣೆಯ ಬಾಗಿಲು ಮರಿದಿರುವುದು   

ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ಗಂಜಾಂನಲ್ಲಿರುವ ಪೊಲೀಸ್‌ ಉಪ ಠಾಣೆ ಕಳೆದ ಎರಡು ವರ್ಷಗಳಿಂದ ಪಾಳು ಬಿದ್ದಿದೆ.

ಠಾಣೆಯ ಮುಖ್ಯ ದ್ವಾರದ ಬೀಗ ವನ್ನು ದುಷ್ಕರ್ಮಿಗಳು ಮುರಿದು ಹಾಕಿದ್ದಾರೆ. ಒಳ ಕೊಠಡಿಗಳ ಬಾಗಿಲುಗಳ ಬೀಗಗಳನ್ನೂ ಮುರಿಯ ಲಾಗಿದೆ. ಠಾಣೆಯ ಒಳಗೆ ಕಾಲಿಟ್ಟರೆ ಧೂಳು ಮೆತ್ತಿಕೊಳ್ಳುತ್ತದೆ. ಕಸ, ಕಡ್ಡಿ ಎರಚಾಡುತ್ತಿವೆ. ಕೊಠಡಿಗಳ ಒಳಗೆ ಹಳೆಯ ಬಟ್ಟೆಗಳು, ಪೊರಕೆ ಕಡ್ಡಿಗಳು ಬಿದ್ದಿವೆ. ಶೌಚಾಲಯ, ಸ್ನಾನದ ಮನೆಗಳು ಗಬ್ಬು ನಾರುತ್ತಿವೆ. ಲಂಟಾನ, ಉಗಣಿ ಗಿಡ ಇತರ ಗಿಡಗಳು ಕೊಠಡಿಗಳ ಸುತ್ತ ಹಬ್ಬಿ ನಿಂತಿವೆ. ವಿದ್ಯುತ್‌ ವೈರ್‌ಗಳು ಕಿತ್ತು ಬಂದಿವೆ. ಪೊಲೀಸ್‌ ಠಾಣೆಯ ಮುಂದೆ ಸಗಣಿ ಬಿದ್ದಿದ್ದು, ದನದ ದೊಡ್ಡಿಯಂತಾಗಿದೆ.

ಎರಡು ವರ್ಷಗಳ ಹಿಂದೆ ಈ ಉಪ ಪೊಲೀಸ್‌ ಠಾಣೆಯಲ್ಲಿ ಪ್ರತಿ ದಿನ ಇಬ್ಬರು ಪೊಲೀಸರು ಇರುತ್ತಿದ್ದರು. ಗಂಜಾಂನಲ್ಲಿ ಗುಂಬಸ್‌, ದೊಡ್ಡ ಗೋಸಾಯಿಘಾಟ್‌, ಚಿಕ್ಕ ಗೋಸಾಯಿಘಾಟ್‌, ಕಾವೇರಿ ಸಂಗಮ, ಅಬ್ಬೆ ದುಬ್ವಾ ಚರ್ಚ್‌, ನಿಮಿಷಾಂಬಾ ದೇಗುಲ ಇತರ ಮಹತ್ವದ ಸ್ಥಳಗಳಿದ್ದು, ಸಹಸ್ರಾರು ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಆ ಕಾರಣಕ್ಕೆ ಇಲ್ಲಿ ಉಪ ಪೊಲೀಸ್‌ ಠಾಣೆ ಆರಂಭಿಸಲಾಗಿತ್ತು. ಈಚಿನ ದಿನಗಳಲ್ಲಿ ಇಲ್ಲಿಗೆ ಯಾರೂ ಬಾರದ ಕಾರಣ ದೆವ್ವದ ಮನೆಯಂತಾಗಿದೆ.

ADVERTISEMENT

‘ಯಾವುದಾದ್ರೂ ಗದ್ಲ, ಗಲಾಟೆ ನಡೆದರೆ ಇಲ್ಲಿಗೆ ಪೊಲೀಸ್ರನ್ನು ತಂದು ಇರಿಸುತ್ತಾರೆ. ಜೋರು ಚಳವಳಿ, ಪ್ರತಿಭಟನೆಗಳು ನಡೆದರೆ ಮಾತ್ರ ಈ ಕಟ್ಟಡದಲ್ಲಿ ಒಬ್ಬಿಬ್ಬರು ಪೊಲೀಸರು ಕಾಣಿಸಿಕೊಳ್ತಾರೆ. ಅದು ಬಿಟ್ಟರೆ ಯಾರೂ ಇತ್ತ ಸುಳಿಯುವುದಿಲ್ಲ’ ಎಂದು ಗಂಜಾಂ ನಿವಾಸಿ ರಮೇಶ್‌ ಹೇಳುತ್ತಾರೆ.

‘ಸದ್ಯ ಗ್ರಾ.ಪಂ. ಚುನಾವಣೆ ನಡೆಯುತ್ತಿದ್ದು, ಸಿಬ್ಬಂದಿಯನ್ನು ಬೇರೆ ಊರುಗಳಿಗೆ ನಿಯೋಜಿಸಲಾಗಿದೆ. ಚುನಾವಣೆ ಮುಗಿದ ಬಳಿಕ ಗಂಜಾಂ ಉಪ ಠಾಣೆಯನ್ನು ಸ್ವಚ್ಛಗೊಳಿಸಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು’ ಎಂದು ಸಿಪಿಐ ಡಿ.ಯೋಗೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.