ADVERTISEMENT

ತೇಜಸ್ವಿ ಸೂರ್ಯ ಹೇಳಿಕೆಗೆ ಸರ್ವೋದಯ ಪಕ್ಷ ಖಂಡನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 15:33 IST
Last Updated 8 ಫೆಬ್ರುವರಿ 2023, 15:33 IST
   

ಮಂಡ್ಯ: ‘ರೈತರ ಸಾಲಮನ್ನಾದಿಂದ ದೇಶಕ್ಕೆ ಯಾವುದೇ ಉಪಯೋಗವಿಲ್ಲವೆಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಕರ್ನಾಟಕ ಸರ್ವೋದಯ ಪಕ್ಷ, ರಾಜ್ಯಘಟಕದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ವೈಜ್ಞಾನಿಕ ಬೆಲೆ ನಿಗದಿ ಮಾಡುವವರೆಗೂ ಸಾಲಮನ್ನಾ ರೈತರ ಹಕ್ಕು, ಸಾಲ ಮನ್ನಾದ ಬಗ್ಗೆ ಮಾತನಾಡುವಷ್ಟು ಧೈರ್ಯ ಎಲ್ಲಿಂದ ಇವರಿಗೆ ಬಂತು? ಹಳ್ಳಿ ಪ್ರಧಾನವಾಗಿರುವ ನಮ್ಮ ದೇಶದ ಆರ್ಥಿಕ ಸ್ಥಿತಿ ನಿಂತಿರುವುದು ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರ ಮೇಲೆ ಎಂಬುದು ಸಂಸದ ತೇಜಸ್ವಿ ಸೂರ್ಯ ಅವರಿಗೆ ತಿಳಿದಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಆರೋಪಿಸಿದರು.

‘ಸಂಸದ ತೇಜಸ್ವಿ ಸೂರ್ಯ ಅವರಿಗೆ ರೈತರ ಬಗ್ಗೆ ಪ್ರೀತಿಯೂ ಇಲ್ಲ, ರೈತರ ಸಮಸ್ಯೆಗಳ ಅರಿವೂ ಇಲ್ಲ. ಅವರು ತಮ್ಮ ಹೇಳಿಕೆ ಹಿಂಪಡೆದು, ಈ ಕೂಡಲೇ ರೈತರ ಕ್ಷಮೆ ಕೇಳಬೇಕು. ಇದೇ ರೀತಿ ವರ್ತನೆ ಮುಂದುವರಿಸಿದರೆ ರಾಜ್ಯದಾದ್ಯಂತ ಅವರ ವಿರುದ್ಧ ಸರ್ವೋದಯ ಪಕ್ಷ ಹಾಗೂ ರೈತ ಸಂಘದ ವತಿಯಿಂದ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್‌.ಸಿ.ಮಧುಚಂದನ್ ಮಾತನಾಡಿ ‘ಬಜೆಟ್‌ನಲ್ಲಿ ರೈತರಿಗೆ ₹20 ಲಕ್ಷ ಕೋಟಿ ನೀಡಿದ್ದಾರೆಂಬ ವರದಿಗಳು ಬರುತ್ತಿವೆ. ₹45 ಲಕ್ಷ ಕೋಟಿ ಬಜೆಟ್‌ನಲ್ಲಿ ₹20 ಲಕ್ಷ ಕೋಟಿಯನ್ನು ರೈತರಿಗೆ ಹೇಗೆ ಕೊಡಲು ಸಾಧ್ಯವಾಗುತ್ತದೆ. ಇದು ರೈತರನ್ನು ದಿಕ್ಕು ತಪ್ಪಿಸುವ ಹುನ್ನಾರವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ 95 ದಿನಗಳಿಂದ ನಡೆಸುತ್ತಿರುವ ಹೋರಾಟದ ಬಗ್ಗೆ ಫೆ.17ಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ಸಮಿತಿ ಸಭೆ ಕರೆದಿದ್ದು, ಶಾಸಕರ ಮನೆ ಮುಂದೆ ಧರಣಿ, ರಸ್ತೆ ತಡೆ, ಅಮರಣಾಂತರ ಉಪವಾಸ ಸತ್ಯಾಗ್ರಹ ನಡೆಸುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಮುಖಂಡರಾದ ತಗ್ಗಹಳ್ಳಿ ಪ್ರಸನ್ನ, ಜಗದೀಶ್ ಬೆಳ್ಳೂಂಡಗೆರೆ, ಕಾಂತರಾಜು, ನಾಗಣ್ಣ ಚಿಕ್ಕಮಂಡ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.