ADVERTISEMENT

ಕಬ್ಬು ತಳಿ ವಿಜ್ಞಾನಿ ಮಂಡ್ಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ

ಶ್ರೀರಂಗಪಟ್ಟಣದಲ್ಲಿ ಮಾರ್ಚ್‌ 6, 7ಕ್ಕೆ 19ನೇ ಜಿಲ್ಲಾ ಕನ್ನಡ ನುಡಿ ಜಾತ್ರೆ, ಸ್ವಾಮಿಗೌಡ ಆಯ್ಕೆ

ಎಂ.ಎನ್.ಯೋಗೇಶ್‌
Published 25 ಫೆಬ್ರುವರಿ 2023, 19:30 IST
Last Updated 25 ಫೆಬ್ರುವರಿ 2023, 19:30 IST
ಡಾ.ಎಸ್‌.ಎನ್‌.ಸ್ವಾಮಿಗೌಡ
ಡಾ.ಎಸ್‌.ಎನ್‌.ಸ್ವಾಮಿಗೌಡ   

ಮಂಡ್ಯ: ದಕ್ಷಿಣ ಕರ್ನಾಟಕ ಭಾಗದಲ್ಲಿ ರೈತರು ಅತೀ ಹೆಚ್ಚು ಬೆಳೆಯುವ ವಿಸಿಎಫ್‌– 517 ಕಬ್ಬು ತಳಿ ಸಂಶೋಧಿಸಿದ ತಳಿ ವಿಜ್ಞಾನಿ ಡಾ.ಎಸ್‌.ಎನ್‌.ಸ್ವಾಮಿಗೌಡ ಅವರಿಗೆ ಮಂಡ್ಯ ಜಿಲ್ಲಾ 19ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.

ಕೆ.ಆರ್‌.ಪೇಟೆ ತಾಲ್ಲೂಕು ಸೊಳ್ಳೇಪುರ ಗ್ರಾಮದ ಸ್ವಾಮಿಗೌಡರು 8ಕ್ಕೂ ಹೆಚ್ಚು ಕಬ್ಬು ತಳಿ ಸಂಶೋಧಿಸಿದ್ದಾರೆ. ಅದರಲ್ಲಿ ವಿಸಿಎಫ್‌ (ವಿಸಿ ಫಾರಂ) – 517 ತಳಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇದು ಸ್ಥಳೀಯವಾಗಿ ‘ಬಾಹುಬಲಿ’ ಎಂದೇ ಪ್ರಸಿದ್ಧಿ ಪಡೆದಿದೆ. ಅತೀ ಹೆಚ್ಚು ಉದ್ದವಾಗಿ ಬೆಳೆಯುವ ಈ ತಳಿಯಿಂದ ರೈತರು ಪ್ರತಿ ಎಕರೆಗೆ 80–130 ಟನ್‌ ಕಬ್ಬು ಬೆಳೆಯುತ್ತಾರೆ. ಉತ್ತಮ ಸಕ್ಕರೆ ಹಾಗೂ ಬೆಲ್ಲದ ಅಂಶ ಇರುವ ಕಾರಣ ಇದು ರೈತರಿಗೆ ಹೆಚ್ಚು ಆದಾಯ ತಂದು ಕೊಡುತ್ತಿದೆ.

ಮೂರು ತುಂಡು ಬೀಳುವ ಈ ಕಬ್ಬಿನ ತಳಿಯಿಂದ ಇಳುವರಿಯೂ ಚೆನ್ನಾಗಿದೆ. ಪ್ರತಿ ಟನ್‌ಗೆ 110–120 ಟನ್‌ ಬೆಲ್ಲ ಬರುತ್ತದೆ. ಜುಲೈನಿಂದ ನವೆಂಬರ್‌ ತಿಂಗಳಲ್ಲಿ ಮಾತ್ರ ನಾಟಿ ಮಾಡಬೇಕಾದ ಈ ತಳಿಯನ್ನು ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಾಮರಾಜನಗರ ಭಾಗದಲ್ಲಿ ಅತೀ ಹೆಚ್ಚು ಬೆಳೆಯುತ್ತಾರೆ.

ADVERTISEMENT

ಇಂತಹ ಕಬ್ಬು ತಳಿ ವಿಜ್ಞಾನಿಯನ್ನು ಈ ಬಾರಿಯ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಮಾಡಿರುವುದು ಕುತೂಹಲ ಮೂಡಿದೆ. ಕಬ್ಬು ತಳಿ ವಿಜ್ಞಾನದಲ್ಲಿ ಸಾಕಷ್ಟು ಪ್ರಬಂಧ, ಸಂಶೋಧನಾ ಲೇಖನ ಬರೆದಿರುವ ಸ್ವಾಮಿಗೌಡರು ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ರೈತರಿಗೆ ಮಾರ್ಗದರ್ಶನ ಮಾಡುವ ಮೂಲಕ ಕಬ್ಬು ತಳಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಸ್ವಾಮಿಗೌಡರು ಸಾಹಿತ್ಯ ಪ್ರೇಮಿ, ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಅವರು ಕೃಷಿ ಮಾಡಿಲ್ಲ. ರೈತ ವಲಯದಲ್ಲಿ ಅವರು ಚಿರಪರಿಚಿತರಾಗಿರುವ ಕಾರಣಕ್ಕೆ, ರೈತರಿಗೆ ಕೊಡುಗೆ ನೀಡಿರುವ ಕಾರಣಕ್ಕೆ ಸಕ್ಕರೆ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಹಾಗೂ ಇತರರು ಕೂಡ ಸ್ವಾಮಿಗೌಡರ ಆಯ್ಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.

‘ಮಂಡ್ಯ ಜಿಲ್ಲೆಯ ರೈತರು ಆರ್ಥಿಕವಾಗಿ ಬೆಳೆಯಲು ವಿ.ಸಿ ಫಾರಂ ಹಾಗೂ ಸ್ವಾಮಿಗೌಡ ಕೊಡುಗೆ ಬಲು ದೊಡ್ಡದು. ಅವರು ರೈತ ಸಮುದಾಯಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ್‌ ಚಾಮಲಾಪುರ ಹೇಳಿದರು.

ಸ್ವಾಮಿಗೌಡ ಅವರು 7ನೇ ತರಗತಿವರೆಗೆ ಸೊಳ್ಳೇಪುರ ಗ್ರಾಮದಲ್ಲೇ ವಿದ್ಯಾಭ್ಯಾಸ ಮಾಡಿದರು. ಪಾಂಡವಪುರ ತಾಲ್ಲೂಕು ಕ್ಯಾತನಹಳ್ಳಿಯಲ್ಲಿ ಪ್ರೌಢಶಿಕ್ಷಣ, ಮೈಸೂರು ಮರಿಮಲ್ಲಪ್ಪ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿದರು. ಬೆಂಗಳೂರು ಕೃಷಿ ವಿವಿಯಲ್ಲಿ ಕೃಷಿ ಬಿಎಸ್‌ಸಿ, ಎಂಎಸ್‌ಸಿ ಪದವಿ ಪಡೆದರು. ಅಣ್ಣಾಮಲೈ ವಿವಿಗೆ ಸಲ್ಲಿಸಿದ ‘ಅನುವಂಶಿಕತೆ ಮತ್ತು ತಳಿ ವಿಜ್ಞಾನ’ ಪ್ರೌಢಪ್ರಬಂಧಕ್ಕೆ ಪಿಎಚ್‌ಡಿ ಗಳಿಸಿದರು.

1985ರಿಂದ ಮಂಡ್ಯ ವಿ.ಸಿ.ಫಾರಂನಲ್ಲಿ ಕರ್ತವ್ಯ ನಿರ್ವಹಿಸಿರುವ ಅವರು 2022ರಲ್ಲಿ ಪ್ರಾಧ್ಯಾಪಕ, ತಳಿವಿಜ್ಞಾನಿಯಾಗಿ ನಿವೃತ್ತರಾದರು. ಮಾರ್ಚ್‌ 6 ಮತ್ತು 7 ರಂದು ನಡೆಯಲಿರುವ ಜಿಲ್ಲಾ ಸಮ್ಮೇಳನದಲ್ಲಿ ಅವರು ಸರ್ವಾಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.