ADVERTISEMENT

ಮೆಟ್ರೊ ಮಾರ್ಗದ ಗುಣಮಟ್ಟ ಆಡಿಟ್‌

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 19:42 IST
Last Updated 31 ಡಿಸೆಂಬರ್ 2018, 19:42 IST
ಮೆಟ್ರೊ ವಯಡಕ್ಟ್‌ ದುರಸ್ತಿಯ ಕಾರ್ಯ ಭರದಿಂದ ನಡೆದಿದೆ
ಮೆಟ್ರೊ ವಯಡಕ್ಟ್‌ ದುರಸ್ತಿಯ ಕಾರ್ಯ ಭರದಿಂದ ನಡೆದಿದೆ   

ಬೆಂಗಳೂರು: ಮೆಟ್ರೊ ಮೊದಲ ಹಂತದ ಮಾರ್ಗವನ್ನು ಪೂರ್ಣ ಪ್ರಮಾಣದಲ್ಲಿ ಗುಣಮಟ್ಟ ಆಡಿಟ್‌ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ಸೋಮವಾರ ಟ್ರಿನಿಟಿ ನಿಲ್ದಾಣದ ಬಳಿಯ ಪಿಲ್ಲರ್‌ ಸಂಖ್ಯೆ 155ರ ವಯಡಕ್ಟ್‌ನ ದುರಸ್ತಿ ಕಾಮಗಾರಿ‍ಪರಿಶೀಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮಾರ್ಗದ ಸುರಕ್ಷತೆ, ಗುಣಮಟ್ಟ, ಪಿಲ್ಲರ್‌ಗಳ ದೃಢತೆ ಪರಿಶೀಲಿಸುವ ದೃಷ್ಟಿಯಿಂದ ಪೂರ್ಣ ಪ್ರಮಾಣದಲ್ಲಿ ಆಡಿಟ್‌ ಮಾಡಲಾಗುವುದು. ಇದಕ್ಕೆ ಮೂರರಿಂದ ನಾಲ್ಕು ವಾರಗಳ ಕಾಲಾವಕಾಶ ಬೇಕಾಗಲಿದೆ. ಇದರಿಂದ ಯಾವುದೇ ಪ್ರದೇಶದಲ್ಲಿ ದೋಷ ಇದ್ದರೂ ಗೊತ್ತಾಗಲಿದೆ' ಎಂದು ಹೇಳಿದರು.

ADVERTISEMENT

‘ಮಂಗಳವಾರ ಮಧ್ಯಾಹ್ನದ ವೇಳೆಗೆ ವಯಡಕ್ಟ್‌ನ ದುರಸ್ತಿ ಕಾಮಗಾರಿ ಪೂರ್ಣಗೊಳ್ಳಲಿದೆ. ಪರೀಕ್ಷಾರ್ಥ ಸಂಚಾರ ನಡೆಸಿ ಖಾತ್ರಿ ಮಾಡಿಕೊಂಡ ಬಳಿಕ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಎಂದಿನಂತೆ ನಡೆಸಲಾಗುವುದು’ ಎಂದು ಅವರು ಹೇಳಿದರು.

ಕಾಮಗಾರಿ ಬಗೆ

‘ವಯಡಕ್ಟ್‌ನಲ್ಲಿ ಕಾಂಕ್ರಿಟ್‌ ದುರ್ಬಲಗೊಂಡ ಪ್ರದೇಶವನ್ನು ಪರಿಶೀಲಿಸಲಾಗಿದೆ. ಈ ಪರಿಶೀಲನೆಗೆ ವಯಡಕ್ಟ್‌ ವಿನ್ಯಾಸದ ಪ್ರದೇಶವನ್ನು ತೆಗೆದುಹಾಕಲಾಗಿದೆ. ಇಲ್ಲಿರುವ ಬೇರಿಂಗ್‌ ಭಾಗದಲ್ಲಿ ಸ್ಟೀಲ್‌ ಪ್ಲೇಟ್‌ಗಳನ್ನು ಅಳವಡಿಸಲಾಗಿದೆ. ಬೀಮ್‌ ದುರ್ಬಲಗೊಂಡ ಭಾಗಕ್ಕೆ ಕಾಂಕ್ರಿಟ್‌ ತುಂಬಲಾಗಿದೆ. ಹೀಗೆ ನಿರ್ಮಾಣವನ್ನು ಶಾಶ್ವತವಾಗಿ ಬಲಪಡಿಸಲಾಗಿದೆ’ ಎಂದು ಮೆಟ್ರೊ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಸಚಿವರಿಗೆ ವಿವರಿಸಿದರು.

ದುರಸ್ತಿಗೊಂಡ ಪ್ರದೇಶದಲ್ಲಿ ವಿವಿಧ ವೇಗದಲ್ಲಿ ರೈಲು ಓಡಿಸಿ ಪರೀಕ್ಷಿಸಲಾಗುವುದು. ಬಳಿಕವಷ್ಟೇ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಸೇಠ್‌ ಮಾಹಿತಿ ನೀಡಿದರು.

ಪ್ರಯಾಣಿಕರ ಸಂಖ್ಯೆ ಕುಸಿತ:ಮೆಟ್ರೊ ರೈಲು ಸಂಚಾರ ವ್ಯತ್ಯಯದಿಂದಾಗಿ ನೇರಳೆ ಮಾರ್ಗದಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಶೇ 20ರಷ್ಟು ಇಳಿಕೆ ಕಂಡುಬಂದಿದೆ.

ಎಂ.ಜಿ. ರಸ್ತೆ– ಇಂದಿರಾನಗರ ನಡುವಿನ ಸಂಚಾರ ಸ್ಥಗಿತಗೊಂಡಿರುವ ಕಾರಣ ಪ್ರಯಾಣಿಕರು ಪರ್ಯಾಯ ಸಾರಿಗೆ ಮೂಲಕ ಸಂಚರಿಸುತ್ತಿದ್ದಾರೆ. ಹೀಗಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತವಾಗಿದೆ ಎಂದು ಸೇಠ್‌ ತಿಳಿಸಿದರು.

ಅಪರಾಹ್ನದಿಂದ ಮೆಟ್ರೊ ಸಂಚಾರ

ಎಂ.ಜಿ. ರಸ್ತೆ– ಇಂದಿರಾನಗರ ನಡುವಿನ ಮೆಟ್ರೊ ಸಂಚಾರ ಜ. 1ರ ಮಧ್ಯಾಹ್ನದ ನಂತರ ಯಥಾ ಸ್ಥಿತಿಗೆ ಬರಲಿದೆ.ಈ ಮಾರ್ಗದಲ್ಲಿ ಜ. 1ರ ಬೆಳಿಗ್ಗೆಯಿಂದಲೇ ಎಂದಿನಂತೆ ಸಂಚಾರ ಇರುವುದಾಗಿ ಮೆಟ್ರೊ ನಿಗಮ ಹೇಳಿತ್ತು. ಆದರೆ, ಕೊನೆಯ ಹಂತದ ಪರೀಕ್ಷೆಗಳು ಬಾಕಿ ಇರುವ ಕಾರಣ ಮತ್ತೆ ಅರ್ಧ ದಿನ ಕಾಲ ಮುಂದೂಡಬೇಕಾಯಿತು ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.