ADVERTISEMENT

ಅಂಗವಿಕಲರಿಗೆ ಸಾಮಾಜಿಕ ಪ್ರಾತಿನಿಧ್ಯ ಅಗತ್ಯ: ರಾಜಣ್ಣ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 10:10 IST
Last Updated 15 ಸೆಪ್ಟೆಂಬರ್ 2011, 10:10 IST

ಮೈಸೂರು: ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ತಿನವರೆಗೆ ಅಂಗವಿಕಲರ ವಿಚಾರಗಳು ಒಂದು ಬಾರಿಯೂ ಈವರೆಗೆ ಚರ್ಚೆಯಾಗಿಲ್ಲ. ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದು 1994 ರಲ್ಲಿ ಅಂಗವಿಕಲರ ಅಧಿನಿಯಮ ರೂಪಿಸಲಾಯಿತು ಎಂದು ಅಂಗವಿಕಲರ ಅಧಿನಿಯಮ ಆಯಕ್ತ ಕೆ.ವಿ.ರಾಜಣ್ಣ ಹೇಳಿದರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜ ವಿಧಾನಸಭಾ ಘಟಕ, ಮಾತೃ ಮಂಡಲಿ ವಿದ್ಯಾಸಂಸ್ಥೆ ಸಹಯೋಗದಲ್ಲಿ ಬುಧವಾರ ನಗರದಲ್ಲಿ ನಡೆದ ವಿಶೇಷ ಮಕ್ಕಳ ಪೋಷಕರ ಜತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶೇಷ ಮಕ್ಕಳ ಪರವಾಗಿ ಅವರ ಪೋಷಕರಿಗಿಂತ ಬೇರೆಯವರು, ಬುದ್ಧಿಜೀವಿಗಳು ಮಾತನಾಡುವುದೇ ಹೆಚ್ಚು. ಅಂಗವಿಕಲರ ಅಧಿನಿಯಮದ ಬಗ್ಗೆ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಈ ಕಾನೂನು ಶೇ 10 ರಷ್ಟು ಜಾರಿಯಾಗಿಲ್ಲ. ಬಸ್ಸು-ರೈಲು ಪಾಸ್, ಮಾಸಾಶನ ಇಷ್ಟಕ್ಕೇ ಅಂಗವಿಕಲರನ್ನು ಮೀಸಲುಗೊಳಿಸುತ್ತಿದ್ದೇವೆಯೇ ಹೊರತು ಅವರನ್ನು ಜಗತ್ತಿಗೆ ತೆರೆದುಕೊಳ್ಳಲು ಸೂಕ್ತ ಪ್ರಾತಿನಿಧ್ಯ ಕಲ್ಪಿಸುತ್ತಿಲ್ಲ ಎಂದು ವಿಷಾದಿಸಿದರು.

ಅಂಗವಿಕಲತೆ ಪ್ರಮಾಣ ಪತ್ರದಲ್ಲಿ ವೈದ್ಯರು ವಿಕಲತೆಯ ಪ್ರಮಾಣವನ್ನಷ್ಟೇ ದೃಢೀಕರಿಸಬೇಕು. ಈ ವ್ಯಕ್ತಿ ಈ ಕೆಲಸ ಮಾಡಲು ಅರ್ಹತೆ ಹೊಂದಿಲ್ಲ ಎಂದು ನಮೂದಿಸುವಂತಿಲ್ಲ. ಅಂಗವಿಕಲರ ಅಭಿವೃದ್ಧಿಗೆ ಪಾಲಿಕೆಯಲ್ಲಿ ರೂ.1.75 ಕೋಟಿ ಮೀಸಲಿಡಲಾಗಿದೆ. ವರ್ಷದಲ್ಲಿ ಈ ಮೀಸಲು ಧನ ಖರ್ಚಾಗದಿದ್ದರೆ ಸರ್ಕಾರಕ್ಕೆ ವಾಪಸ್ಸು ಹೋಗುವುದಿಲ್ಲ. ಮುಂದಿನ ವರ್ಷಕ್ಕೆ ಬಳಸಿಕೊಳ್ಳಬಹುದಾಗಿದೆ ಎಂದರು.

ವಿಶ್ವ ಆರೋಗ್ಯ ಸಂಸ್ಥೆಯ ಆದೇಶದಂತೆ ವಿಶೇಷ ಅವಶ್ಯಕತೆಯುಳ್ಳವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಬಲವರ್ಧಕ, ವೈದ್ಯಕೀಯ ಪುನಃಶ್ಚೇತನಕ್ಕೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ವಿಶೇಷ ಮಕ್ಕಳ ಪೋಷಕರಿಗೆ ಕೌಶಲ ತರಬೇತಿ ನೀಡಿದಾಗ ಈ ಮಕ್ಕಳಿಗೆ ಮುಖ್ಯವಾಹಿನಿಯಲ್ಲಿ ಬದುಕು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ.
 
ಕೆಲವೇ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಅಂಗವಿಕಲರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿವೆ. ಈ ಮಕ್ಕಳ ಪ್ರಗತಿ ಸರ್ಕಾರ ಮತ್ತು ಸಮುದಾಯದ ಹೊಣೆಗಾರಿಕೆಯಾಗಿದ್ದು, ಸಮುದಾಯ ಆಧಾರಿತ ಪುನಃಶ್ಚೇತನಕ್ಕೆ ಒತ್ತು ನೀಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮೈತ್ರಿ ಬುದ್ಧಿಮಾಂದ್ಯರ ಶಾಲೆ ಸಂಸ್ಥಾಪಕ ವೆಂಕೋಬರಾವ್ ಮಾತನಾಡಿ, ಸೌಲಭ್ಯ ಪಡೆಯಲು ಸರ್ಕಾರ ನಿಗದಿಪಡಿಸಿರುವ ವಿವಿಧ ದಾಖಲೆ (ಆಧಾರ್ ಕಾರ್ಡ್, ಗುರುತಿನ ಚೀಟಿ, ಆದಾಯ ಪತ್ರ, ಪಾಸ್‌ಪೋರ್ಟ್, ಸ್ಟಾಂಪ್ ಸೈಜ್ ಫೋಟೊ...) ಒದಗಿಸಲು ಸಾಧ್ಯವಾಗದೇ ಎಷ್ಟೋ ಅಂಗವಿಕಲರ ಪೋಷಕರು ಸರ್ಕಾರದ ಸವಲತ್ತುಗಳ ಸಹವಾಸವೇ ಬೇಡ ಎನ್ನುವಷ್ಟರ ಮಟ್ಟಿಗೆ ಬೇಸತ್ತಿದ್ದಾರೆ. ಗ್ರಾಮೀಣರು, ಬಡವರು ಈ ದೃಢೀಕರಣ ಪತ್ರಗಳ ಉಸಾಬರಿಗೆ ಹೋಗುವುದೆಂದರೆ ಹೆದರುವ ಸ್ಥಿತಿ ಇದೆ.
 
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನ ಪಡೆದು ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದ `ಮೈತ್ರಿ~ ಸಂಸ್ಥೆಯ ಇಬ್ಬರು ಮಕ್ಕಳು ರಾಜಕೀಯದ ಕೂಪ ದಾಟಲಾರದೇ ಸ್ಪರ್ಧೆಯಿಂದ ವಾಪಸ್ ಬಂದಿದ್ದು ಸರ್ಕಾರ ನಿರ್ಲಕ್ಷ್ಯ ನೀತಿಗೆ ಹಿಡಿದ ಕನ್ನಡಿಯಾಗಿದೆ. ಸಾವಿರ ರೂಪಾಯಿ ಮಾಸಾಶನ ಪಡೆಯಲು 2 ಸಾವಿರ ಲಂಚ ನೀಡುವ ಅನಿವಾರ್ಯತೆ ಇದೆ ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ  ಕೆ.ಎಸ್.ಶಿವರಾಮು ಪ್ರಾಸ್ತವಿಕವಾಗಿ ಮಾತನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಂ.ಚಂದ್ರಶೇಖರ್ ಸ್ವಾಗತಿಸಿದರು. ಬರಹಗಾರ ಸುಧಾಕರ್ ಹೊಸಳ್ಳಿ ನಿರೂಪಿಸಿದರು.

ಮೈಸೂರು ಜಿಲ್ಲೆ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಾತೃಮಂಡಳಿ ಸಂಸ್ಥೆ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಅರಸ್, ಗೌರವ ಕಾರ್ಯದರ್ಶಿ ವಾಣಿ ಪ್ರಸಾದ್, ಪತ್ರಕರ್ತ ರವೀಂದ್ರ ಭಟ್ಟ, ದೀಪಾ ಭಟ್ಟ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.