ADVERTISEMENT

ಅಮ್ಮನ ಆಲಿಂಗನ: ಭಕ್ತರುಧನ್ಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 7:10 IST
Last Updated 21 ಫೆಬ್ರುವರಿ 2011, 7:10 IST

ಮೈಸೂರು: ಅಮ್ಮ..ಅಮ್ಮ..ಅಮ್ಮ.. ಸ್ವದೇಶಿ-ವಿದೇಶಿ ಭಕ್ತರಿಂದ ಒಂದೇ ಸಮನೆ ಉದ್ಘಾರ. ಸಾವಿರಾರು ಸಂಖ್ಯೆಯಲ್ಲಿದ್ದ ಭಕ್ತರು ಅಮ್ಮ ಆಶೀರ್ವಾದಕ್ಕಾಗಿ, ಆಲಿಂಗನಕ್ಕಾಗಿ ಕಾದು ಕುಳಿತಿದ್ದರು. ಅಮ್ಮನ  ದರ್ಶನ ಪಡೆದು ಧನ್ಯರಾಗಲು ಹಾತೊರೆಯುತ್ತಿದ್ದರು.-ಇದು ಬೋಗಾದಿಯ ಮಾತಾ ಅಮೃತಾನಂದಮಯಿ ಮಠದಲ್ಲಿ ಭಾನುವಾರ ಕಂಡು ಬಂದ ದೃಶ್ಯ. ಮಾತಾ ಅಮೃತಾನಂದಮಯಿ ನಗರದ ಮಠಕ್ಕೆ ಭೇಟಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ಅಮ್ಮನ ಭಕ್ತರು ಅಲ್ಲಿ  ನೆರೆದಿದ್ದರು. ಅಮ್ಮನವರು ವೇದಿಕೆಗೆ ಬಂದಾಗ ಇಡೀ ಸಭಾಂಗಣ ಭಕ್ತಿ, ಭಾವಪರವಶತೆಗೆ ಸಾಕ್ಷಿಯಾಯಿತು.

ಮಾತಾ ಅಮೃತಾನಂದಮಯಿ ಭಕ್ತರ ಪಾಲಿಗೆ ಅಮ್ಮ. ವಿದೇಶಿಗರು, ವಿದ್ಯಾರ್ಥಿಗಳು, ವಯೋವೃದ್ಧರು  ಹೀಗೆ ಕಿರಿಯರು-ಹಿರಿಯರು ಎಂಬ ಭೇದ ಭಾವವಿಲ್ಲದೇ ಎಲ್ಲರೂ ಸಾಲು ಸಾಲಾಗಿ ಅಮ್ಮನ ದರ್ಶನ  ಪಡೆದುಕೊಂಡರು. ಅಮ್ಮನ ಆಲಿಂಗನ ಮತ್ತು ಆಶೀರ್ವಾದಿಂದ ಪುನೀತರಾದರು.

ಅಮಲ ಭಾರತ’ ಯೋಜನೆಗೆ ಚಾಲನೆ: ಇದೇ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ದುರಭ್ಯಾಸಗಳ ಬಗ್ಗೆ ಅರಿವು ಮೂಡಿಸಿ, ಉತ್ತಮ ಪರಿಸರ ನಿರ್ಮಾಣ ಮಾಡುವ ಉದ್ದೇಶದಿಂದ ಸಿದ್ಧವಾಗಿರುವ ‘ಅಮಲ ಭಾರತ’ ಯೋಜನೆಗೆ ಮಾತಾ ಅಮೃತಾನಂದಮಯಿ ಚಾಲನೆ ನೀಡಿದರು.ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಉಗುಳಬಾರದು, ಮೂತ್ರ ವಿಸರ್ಜನೆ ಮಾಡಬಾರದು ಎಂಬ  ಉದ್ದೇಶದಿಂದ ಈ ಯೋಜನೆಯನ್ನು ಅಮ್ಮ ಆರಂಭಿಸಿದ್ದಾರೆ. ಇಡೀ ದೇಶದಾದ್ಯಂತ ಈ ಯೋಜನೆಯನ್ನು  ಜಾರಿಗೆ ತರುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ವಿದೇಶಿಗರು ಭಾರತಕ್ಕೆ ಭೇಟಿ ನೀಡಿ, ಇಲ್ಲಿನ   ಜನರ ದುರಭ್ಯಾಸಗಳಿಂದ ಬೇಸತ್ತಿರುವುದರಿಂದ ‘ಅಮಲ ಭಾರತ’ ಯೋಜನೆ ಜಾರಿಗೆ ತಂದಿದ್ದಾರೆ.

ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ‘ವಿದ್ಯಾಮೃತ’ ವಿದ್ಯಾರ್ಥಿ ವೇತನವನ್ನು  ಮೈಸೂರು ಹಾಗೂ ಸುತ್ತಮುತ್ತಲಿನ ಸಾವಿರಾರು ವಿದ್ಯಾರ್ಥಿಗಳನ್ನು ಅಮ್ಮ ಆಯ್ಕೆ ಮಾಡಿದ್ದಾರೆ. ಆ ಪೈಕಿ  ಸಾಂಕೇತಿಕವಾಗಿ 10 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದರು. ಜೊತೆಗೆ ‘ಅಮಲ ಭಾರತ’ ಯೋಜನೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಕೈವಸ್ತ್ರಗಳನ್ನು ವಿತರಿಸಿದರು. ಅಲ್ಲದೆ, ‘ಅಮೃತಂ ಸ್ವಸಹಾಯ ಗುಂಪು ಯೋಜನೆ’ಯಡಿಯಲ್ಲಿ ಬಡ ಮಹಿಳೆಯರಿಗೆ ಹಣಕಾಸು ಸಹಾಯವನ್ನು ಮಾಡಿದರು.

ಬಳಿಕ ಅಮ್ಮನವರ ನೇತೃತ್ವದಲ್ಲಿ ಸಾಮೂಹಿಕ ಲಲಿತ ಸಹಸ್ರನಾಮ, ಸತ್ಸಂಗ, ಧ್ಯಾನ, ಭಜನಾ  ಕಾರ್ಯಕ್ರಮಗಳು ಜರುಗಿದವು. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಅಮ್ಮನ ಆಲಿಂಗನದಿಂದ ಆಶೀರ್ವಾದ ಪಡೆದರು.ಅಮ್ಮನವರ ಸತ್ಸಂಗ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್, ಸಂಸದ ಎಚ್.ವಿಶ್ವನಾಥ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರಾಮದಾಸ್, ‘ಭಾರತದ ಏಕತೆ, ಸಂಸ್ಕೃತಿಯನ್ನು ಕಾಪಾಡುವ ಕೆಲಸವನ್ನು ಅಮ್ಮ ಮಾಡುತ್ತಿದ್ದಾರೆ. ಪ್ರಪಂಚದಲ್ಲಿ ಇರುವುದು ಮನುಷ್ಯ  ಜಾತಿ ಮಾತ್ರ ಎಂಬುದನ್ನು ಇಡೀ ಜಗತ್ತಿಗೆ ಸಾರಿ ಹೇಳಿದ್ದಾರೆ’ ಎಂದರು.

‘ಏಪ್ರಿಲ್ 1ರಿಂದ ಮೈಸೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಆರೋಗ್ಯ ನಗರವಾಗಿ ಘೋಷಣೆ  ಮಾಡಲಾಗುವುದು. ಈ ಕುರಿತು ಸರ್ಕಾರದಿಂದ ಆದೇಶ ಹೊರಡಿಸಲಾಗುತ್ತದೆ. ಆದೇಶದಲ್ಲಿ ಅಮ್ಮನವರ  ಅಮಲ ಭಾರತ ಯೋಜನೆ ಕುರಿತು ಪ್ರಸ್ತಾಪಿಸಲಾಗುವುದು’ ಎಂದು ಭರವಸೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.