ADVERTISEMENT

ಇಂಗ್ಲಿಷ್‌ನಲ್ಲಿ ನಗರದ ಮಕ್ಕಳೇ ಹಿಂದೆ

ಎಸ್ಸೆಸ್ಸೆಲ್ಸಿ: ಭಾಷಾ ವಿಷಯಗಳಲ್ಲಿ ಗ್ರಾಮಾಂತರ ವಿದ್ಯಾರ್ಥಿಗಳ ಮೇಲುಗೈ

ಕೆ.ಓಂಕಾರ ಮೂರ್ತಿ
Published 25 ಮೇ 2018, 3:45 IST
Last Updated 25 ಮೇ 2018, 3:45 IST
ಇಂಗ್ಲಿಷ್‌ನಲ್ಲಿ ನಗರದ ಮಕ್ಕಳೇ ಹಿಂದೆ
ಇಂಗ್ಲಿಷ್‌ನಲ್ಲಿ ನಗರದ ಮಕ್ಕಳೇ ಹಿಂದೆ   

ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಇಂಗ್ಲಿಷ್‌ ಭಾಷೆಯಲ್ಲಿಯೇ ಮೈಸೂರು ನಗರದ ಮಕ್ಕಳು ಹಿಂದೆ ಬಿದ್ದಿರುವುದು ಶಿಕ್ಷಣ ಇಲಾಖೆಯನ್ನು ಚಿಂತೆಗೀಡು ಮಾಡಿದೆ.

ಇಂಗ್ಲಿಷ್‌ ವಾತಾವರಣ ತೀರಾ ಕಡಿಮೆ ಇರುವ, ಟ್ಯೂಷನ್‌ ಸೌಲಭ್ಯವೂ ಇರದ ಗ್ರಾಮಾಂತರ ಶಾಲೆಯ ಮಕ್ಕಳು ನಗರದ ವಿದ್ಯಾರ್ಥಿಗಳಿಗೆ ಸಡ್ಡು ಹೊಡೆದಿದ್ದಾರೆ. ಕನ್ನಡ ಭಾಷೆಯಲ್ಲೂ ನಗರದ ವಿದ್ಯಾರ್ಥಿಗಳು ಕಳಪೆ ಪ್ರದರ್ಶನ ತೋರಿದ್ದಾರೆ.  ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಲ್ಲೂ ಹಿಂದೆ ಬಿದ್ದಿದ್ದಾರೆ.

ಮೈಸೂರು ಉತ್ತರ ವಿಭಾಗದ ಶಾಲೆಗಳಲ್ಲಿ ದ್ವಿತೀಯ ಭಾಷೆ ಇಂಗ್ಲಿಷ್‌ನಲ್ಲಿ ಶೇ 78.93, ಪ್ರಥಮ ಭಾಷೆ ಕನ್ನಡದಲ್ಲಿ ಶೇ 79.48 ಫಲಿತಾಂಶ ಬಂದಿದೆ. ಮೈಸೂರು ದಕ್ಷಿಣ ವಿಭಾಗದ ಶಾಲೆಗಳಲ್ಲಿ ಇಂಗ್ಲಿಷ್‌ನಲ್ಲಿ ಶೇ 77.41 ಹಾಗೂ ಕನ್ನಡದಲ್ಲಿ ಶೇ 74.79 ಫಲಿತಾಂಶ ಬಂದಿದೆ. ಇದಕ್ಕೆ ತದ್ವಿರುದ್ಧವಾಗಿ ಎಚ್‌.ಡಿ.ಕೋಟೆ, ಹುಣಸೂರು, ಮೈಸೂರು ಗ್ರಾಮೀಣ‌, ಪಿರಿಯಾಪಟ್ಟಣ, ಕೆ.ಆರ್‌.ನಗರ, ನಂಜನಗೂಡು ವಿಭಾಗದ ಶಾಲೆಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಶೇ 80ಕ್ಕಿಂತ ಹೆಚ್ಚು ಫಲಿತಾಂಶ ಗಿಟ್ಟಿಸಿವೆ. ಪಿರಿಯಾಪಟ್ಟಣ ವಿಭಾಗದಲ್ಲಿ ಇಂಗ್ಲಿಷ್‌ ಭಾಷೆ ಪರೀಕ್ಷೆ ಬರೆದ 2,907 ವಿದ್ಯಾರ್ಥಿಗಳಲ್ಲಿ 2,682 ಮಂದಿ ಉತ್ತೀರ್ಣರಾಗಿ ಶೇ 92.26 ಸಾಧನೆ ಮಾಡಿದ್ದಾರೆ.

ADVERTISEMENT

‘ಉರ್ದು ಮಾಧ್ಯಮದ ಶಾಲೆಗಳಲ್ಲಿ ಓದಿ ಪ‍್ರೌಢಶಾಲೆಗೆ ಸೇರುವ ಮಕ್ಕಳಲ್ಲಿ ಭಾಷಾ ಸಮಸ್ಯೆ ಇದೆ. ಹೀಗಾಗಿ, ಮೈಸೂರು ಉತ್ತರ, ದಕ್ಷಿಣ ವಿಭಾಗದ ಶಾಲೆಗಳಲ್ಲಿ ಭಾಷಾವಾರು ವಿಷಯಗಳಲ್ಲಿ ಫಲಿತಾಂಶ ಕುಸಿದಿದೆ’ ಎಂದು ಡಿಡಿಪಿಐ ಮಮತಾ ಪ್ರತಿಕ್ರಿಯಿಸಿದರು.

ಮೈಸೂರು ಉತ್ತರ ವಿಭಾಗದಲ್ಲಿ 114 ಹಾಗೂ ಮೈಸೂರು ದಕ್ಷಿಣ ವಿಭಾಗದಲ್ಲಿ 84 ಪ್ರೌಢಶಾಲೆಗಳು ಇವೆ. 122 ಅನುದಾನ ರಹಿತ ಶಾಲೆಗಳಿವೆ. ಈ ವಿಭಾಗದ ಸುಮಾರು 25 ಶಾಲೆಗಳಲ್ಲಿ ಫಲಿತಾಂಶ ಶೇ 50 ದಾಟಿಲ್ಲ.

‘ಕೆಲ ಅನುದಾನಿತ ಶಾಲೆಗಳಲ್ಲಿ ಇಂಗ್ಲಿಷ್‌ ಶಿಕ್ಷಕರ ಕೊರತೆ ಇದೆ. ಕೆಲ ಶಾಲೆಗಳು ಶೇ 90ಕ್ಕೂ ಹೆಚ್ಚು ಫಲಿತಾಂಶ ಪಡೆದಿದೆ. ಆದರೆ, ಭಾಷಾ ವಿಷಯಗಳಲ್ಲಿ ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಫರೂಕಿಯಾ ಬಾಲಕಿಯರ ಪ‍್ರೌಢಶಾಲೆಯಲ್ಲಿ ಕೇವಲ ಶೇ 23 ಫಲಿತಾಂಶ ಬಂದಿದೆ’ ಎಂದು ಶಿಕ್ಷಣಾಧಿಕಾರಿ ಶಿವರಾಂ ಮಾಹಿತಿ ನೀಡಿದರು.

**
ಗಣಿತ, ಸಮಾಜ, ವಿಜ್ಞಾನ ವಿಷಯಗಳ ಶಿಕ್ಷಕರ ಬದ್ಧತೆ ಇಂಗ್ಲಿಷ್‌, ಕನ್ನಡ ಭಾಷೆಗಳ ಶಿಕ್ಷಕರಿಗೆ ಇಲ್ಲ. ಅವರಷ್ಟೇ ಪ್ರಯತ್ನ ಹಾಕಿದರೆ ಖಂಡಿತ ಸುಧಾರಣೆ ಕಾಣಬಹುದು
ಮಮತಾ, ಡಿಡಿಪಿಐ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.