ADVERTISEMENT

ಒಂದೇ ಸೂತ್ರದಲ್ಲಿ ಸಾವಿರ ಗಾಳಿಪಟ!

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 7:40 IST
Last Updated 22 ಅಕ್ಟೋಬರ್ 2012, 7:40 IST

ಮೈಸೂರು: ಆಕಾಶದಲ್ಲಿ ಹರಿದಾಡಿದ ಹಾವು, ಗಾಳಿಯಲ್ಲಿ ತೇಲಿದ ದೋಣಿ, ಹಾರಾಡಿದ ಮೀನು, ಬಾನಂಗಳದಲ್ಲಿ ಘರ್ಜಿಸಿದ ಹುಲಿ!

ದಸರಾ ಉಪ ಸಮಿತಿ ನಗರದ ಲಲಿತ ಮಹಲ್ ಹೆಲಿಪ್ಯಾಡ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಗಾಳಿಪಟ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯ ಇದು. ನೀರು, ಭೂಮಿಯನ್ನು ಬಿಟ್ಟು ವಿವಿಧ ಜೀವಿಗಳು ಅಲ್ಲಿ ಆಕಾಶಕ್ಕೆ ಏರಿದ್ದವು. ವಿಶ್ವೇಶ್ವರಯ್ಯ, ಅಮೀರ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಬಾನಂಗಳದಲ್ಲಿ ಹಾರಾಡಿ ಅಚ್ಚರಿ ಮೂಡಿಸಿದರು.

ಮಹಾರಾಷ್ಟ್ರ, ಗುಜರಾತ್, ಬೆಂಗಳೂರು, ಚಿಕ್ಕ ಬಳ್ಳಾಪುರ, ತುಮಕೂರು, ಮಂಡ್ಯದಿಂದ ಆಗಮಿಸಿದ್ದ ಸ್ಪರ್ಧಾಳುಗಳು ನೂರಾರು ಗಾಳಿಪಟಗಳನ್ನು ಆಗಸದ ಅಂಗಳದಲ್ಲಿ ತೇಲಿ ಬಿಟ್ಟರು. ಮಕ್ಕಳು ಪಟ ಪಟ ಹಾರೋ ಗಾಳಿ ಪಟ ಎಂದು ಹಾಡು ಹೇಳಿ ಸಂಭ್ರಮಿಸಿದರು. ಬಣ್ಣ ಬಣ್ಣದ, ಬಾಲಗೋಚಿ ಇಲ್ಲದ ಪಟಗಳೂ ಗಮನ ಸೆಳೆದವು. 12 ವರ್ಷದ ಒಳಗಿನ ಮಕ್ಕಳು, 12 ರಿಂದ 23ರ ವರೆಗಿನ ವಯೋಮಾನದವರು, 23 ವರ್ಷ ಮೇಲ್ಪಟ್ಟವರು ಹಾಗೂ ಸಾಮೂಹಿಕ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು.

ಪಟ ಪಟ ಗಾಳಿಪಟ: ಕೈಯಲ್ಲಿ ಸೂತ್ರ ಹಿಡಿದು ಸ್ಪರ್ಧೆಗೆ ನಿಂತಿದ್ದ ಸ್ಪರ್ಧಾಳುಗಳು ಇಡೀ ಮೈದಾನವನ್ನು ಆವರಿಸಿದ್ದರು. ಸ್ಪರ್ಧೆ ಆರಂಭವಾಗುತ್ತಿದ್ದಂತೆ ದಾರವನ್ನು ಬಿಡುತ್ತಾ ಪಟವನ್ನು ಆಕಾಶದೆತ್ತರಕ್ಕೆ ಹಾರಿಬಿಟ್ಟರು. ಕೆಲವು ಗಾಳಿಯ ವೇಗದಲ್ಲಿ ಬಾನೆತ್ತರಕ್ಕೆ ಚಿಮ್ಮಿದರೆ ಮತ್ತೆ ಕೆಲ ಪಟಗಳು ಭೂಮಿಯತ್ತ ಮುಖ ಮಾಡುತ್ತಿದ್ದವು.

15 ನಿಮಿಷಗಳ ಕಾಲಾವಕಾಶದಲ್ಲಿ ಅತಿ ಎತ್ತರಕ್ಕೆ ಹಾರಿದ ಗಾಳಿಪಟಗಳು ಬಹುಮಾನಕ್ಕೆ ಪಾತ್ರವಾದವು.
ಮಹಾರಾಷ್ಟ್ರದಿಂದ ಆಗಮಿಸಿದ್ದ ಅಶೋಕ್ ಷಾ, ಆರತಿ ಷಾ ದೋಣಿಯನ್ನು ಆಕಾಶದಲ್ಲಿ ತೇಲಿಸಿದರು. ಹಾಯಿ ದೋಣಿಯ ಮೇಲ್ಭಾಗದಲ್ಲಿ ಭಾರತದ ತ್ರಿವರ್ಣ ಧ್ವಜ ರಾರಾಜಿಸುತ್ತಿತ್ತು. ಘರ್ಜನೆ ಮಾಡುತ್ತಿದ್ದ ಹುಲಿಯ ಗಾಳಿಪಟ ಗಮನ ಸೆಳೆಯಿತು.

ಮಂಡ್ಯದ ಅರ್ಜುನಗೌಡ ಅವರು ವಿಶ್ವೇಶ್ವರಯ್ಯ ಅವರ ಗಾಳಿಪಟವನ್ನು ತೇಲಿಬಿಟ್ಟರು. ಬೆಂಗಳೂರಿನ ಅಭಿನಂದನ್ ಒಂದೇ ಸೂತ್ರದಲ್ಲಿದ್ದ ಸಾವಿರ ಪಟಗಳನ್ನು ಹಾರಿಬಿಟ್ಟರು. ಮೈಸೂರಿನ ರಾಜೀವ ನಗರದ ಶಿರೋಣಿ ಅವರು ಸಲ್ಮಾನ್‌ಖಾನ್ ಭಾವಚಿತ್ರ ಇರುವ ಗಾಳಿಪಟ ಹಾರಿಸಿದರು. ಡ್ರ್ಯಾಗನ್, ಮೀನು, ತ್ರಿವರ್ಣ ಧ್ವಜಗಳೂ ಆಕಾಶದಲ್ಲಿ ಹಾರಾಡಿದವು.

ಫಲಿತಾಂಶ: ವಿಶೇಷ ಬಹುಮಾನ- ಎಸ್.ಇಂದು ಜಾ-1, ಹರಿಪ್ರೀತ್‌ಗೌಡ-2, ವಿನಯ-3.
ಸಾಮೂಹಿಕ: ಸಂಜಯ್-1, ನಂಜು-2, ಪ್ರಭು-3.

ವೈಯಕ್ತಿಕ: 12 ವರ್ಷ ಒಳಗಿನವರು: ಜಿ.ಆರ್. ರವಿಚಂದ್ರ-1, ಚಂದನ-2, ಕಿರಣ್ ತೇಜ-3.
12ರಿಂದ 23 ವರ್ಷ: ಪ್ರದೀಪ್-1, ಸಿದ್ಧಾರ್ಥ-2, ಎ.ಎಂ.ರವಿ-3.
23 ವರ್ಷ ಮೇಲ್ಪಟ್ಟವರು: ರಾಜು-1, ಮಾರುತಿ-2, ಪರಮೇಶ್-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.