ADVERTISEMENT

ಕತ್ತಲೆಯಲ್ಲಿ ಕೊಳೆವ ಗ್ರಾಮ!

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2012, 19:30 IST
Last Updated 15 ನವೆಂಬರ್ 2012, 19:30 IST
ಕತ್ತಲೆಯಲ್ಲಿ ಕೊಳೆವ ಗ್ರಾಮ!
ಕತ್ತಲೆಯಲ್ಲಿ ಕೊಳೆವ ಗ್ರಾಮ!   

ಮೈಸೂರು:` ನಕ್ಸಲ್ ಗ್ರಾಮ~ ಹಣೆಪಟ್ಟಿ ಹಚ್ಚಿಕೊಂಡ ನಂತರ ಮೆಣಸಿನಹಾಡ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಜೋರಾಗಿ ನಡೆದಿವೆಯಾ ಎಂದು ಕೇಳಿದರೆ `ಹೌದು~ ಎನ್ನುವ ಉತ್ತರ ಬರುತ್ತದೆ. ಈ ಅಭಿವೃದ್ಧಿ ಕಾರ್ಯಗಳು ಗುಣಮಟ್ಟದಿಂದ ಕೂಡಿವೆಯಾ? ಜನರಿಗೆ ಇದರಿಂದ ಅನುಕೂಲ ಆಗಿದೆಯಾ ಎಂದು ಕೇಳಿದರೆ `ಇಲ್ಲ~ ಎನ್ನುವ ಉತ್ತರ ಬರುತ್ತದೆ.

ಮೆಣಸಿನಹಾಡ್ಯದಲ್ಲಿ ಮೊದಲು ಒಂದರಿಂದ 7ನೇ ತರಗತಿವರೆಗಿನ ಶಾಲೆ ಇತ್ತು. ಈಗ ಅಲ್ಲಿ ಆಶ್ರಮ ಶಾಲೆ ತೆರೆಯಲಾಗಿದೆ. ಆಶ್ರಮ ಶಾಲೆಯ ಕಟ್ಟಡ ಭವ್ಯವಾಗಿದೆ. ದೂರದಿಂದ ನೋಡಿದರೆ ರೆಸಾರ್ಟ್ ರೀತಿ ಇದೆ. ಎಲ್ಲ ರೀತಿಯ ಸೌಲಭ್ಯಗಳೂ ಇವೆ. ಸರಿಯಾದ ಶಿಕ್ಷಕರೇ ಇಲ್ಲಿ ಇಲ್ಲ. `ಇದು ಆಶ್ರಮ ಶಾಲೆಯಲ್ಲ. ಅನಾಥ ಶಾಲೆ` ಎಂದು ಗ್ರಾಮದ ದೇವೇಂದ್ರ ದುಃಖಿಸುತ್ತಾರೆ.

`ಶಾಲೆಯಲ್ಲಿ ಸುಮಾರು 50 ಮಕ್ಕಳಿದ್ದಾರೆ. ಊಟೋಪಚಾರಕ್ಕೆ ಕೊರತೆ ಇಲ್ಲ. ಶಿಕ್ಷಕರು ಇಲ್ಲದೇ ಇರುವುದರಿಂದ ಮಕ್ಕಳಿಗೆ ಅಕ್ಷರಾಭ್ಯಾಸವಾಗುತ್ತಿಲ್ಲ. 5ನೇ ತರಗತಿಯ ಮಕ್ಕಳಿಗೂ ಓದಲು ಬರೆಯಲು ಬರುವುದಿಲ್ಲ. ಇದರಿಂದ ಈ ಮಕ್ಕಳು 6ನೇ ತರಗತಿಗೆ ಹೊರಗೆ ಹೋದಾಗ ಅಲ್ಲಿ ಪರದಾಡುತ್ತಾರೆ. ಕಲಿಕೆ ಸಾಧ್ಯವಾಗದೇ ಹಿಂದಿರುಗುತ್ತಾರೆ. ಶಾಲೆ ಎಂದರೆ ಕೇವಲ ಕಟ್ಟಡ ಮಾತ್ರ ಅಲ್ಲವಲ್ಲ~ ಎಂದು ಕೆಂಪೇಗೌಡ ಹೇಳುತ್ತಾರೆ.

ವಿದ್ಯುತ್, ಟಿವಿ ಸಂಪರ್ಕ ರಹಿತ ಗ್ರಾಮ:ಆಶ್ರಮ ಶಾಲೆಗೆ ವಿದ್ಯುತ್ ಸಂಪರ್ಕ ಇದೆ. ಗ್ರಾಮದ ಇತರ ಯಾವುದೇ ಮನೆಗೆ ವಿದ್ಯುತ್ ಸೌಲಭ್ಯ ಕಲ್ಪಿಸಿಲ್ಲ. ಮನೆಯ ಮುಂದೆಯೇ ವಿದ್ಯುತ್ ತಂತಿ ಹಾದು ಹೋಗಿದೆ. ಮನೆಯ ಪಕ್ಕದಲ್ಲಿಯೇ ವಿದ್ಯುತ್ ಕಂಬ ಇದೆ. ಆದರೂ ಮನೆಗಳಿಗೆ ವಿದ್ಯುತ್ ನೀಡಿಲ್ಲ. ಹೊಸದಾಗಿ ತಂತಿ ಎಳೆಯಬೇಕಾಗಿಲ್ಲ. ಕಂಬ ಹಾಕಬೇಕಿಲ್ಲ. ಆದರೂ ನಮ್ಮ ಮನೆಗೆ ವಿದ್ಯುತ್ ಕೊಡುತ್ತಿಲ್ಲ ಯಾಕೆ? ಎನ್ನುವುದು ಗ್ರಾಮಸ್ಥರಿಗೆ ಬಿಡಿಸಲಾಗದ ಒಗಟಾಗಿದೆ.

ಮೆಣಸಿನಹಾಡ್ಯದಲ್ಲಿ 60ಕ್ಕೂ ಹೆಚ್ಚು ಮನೆಗಳಿವೆ. ಹಲವು ಮನೆಗಳಲ್ಲಿ ಸೋಲಾರ್ ಸೌಲಭ್ಯವಿದೆ. ಇಲ್ಲಿಗೆ ಯಾವುದೇ ವೃತ್ತ ಪತ್ರಿಕೆ ಬರುವುದಿಲ್ಲ. ಟಿವಿ ಇಲ್ಲ. ಹಾಗಾಗಿ ಹೊರ ಜಗತ್ತಿನ ವಿಷಯಗಳನ್ನು ತಿಳಿಯಲು ರೇಡಿಯೊ ಒಂದೇ ಸಾಧನ. ಅದೂ ಎಲ್ಲರ ಮನೆಯಲ್ಲಿ ಇಲ್ಲ. ಇತ್ತೀಚೆಗೆ ಮೆಣಿಸಿನಹಾಡ್ಯಕ್ಕೆ ನಕ್ಸಲರ ಭೇಟಿ ಎಂಬ ಸುದ್ದಿ ಎಲ್ಲ ಪತ್ರಿಕೆಗಳಲ್ಲಿ ಬಂದಿತ್ತು. ಈ ವಿಷಯ ಮೆಣಸಿನಹಾಡ್ಯದ ಜನರಿಗೆ ತಿಳಿದಿದ್ದು 2 ದಿನ ತಡವಾಗಿ.

ಮೆಣಸಿನಹಾಡ್ಯದ ಆಶ್ರಮ ಶಾಲೆಯ ಈಗಿನ ಸ್ಥಿತಿ ಹೇಗೇ ಇರಲಿ. ಈ ಗ್ರಾಮದಲ್ಲಿ ಸಾಕಷ್ಟು ಮಂದಿ ಪದವೀಧರರಿದ್ದಾರೆ. ಐಟಿಐ, ಎಂಜಿನಿಯರಿಂಗ್ ಓದಿದವರೂ ಇದ್ದಾರೆ. ಬಿಎಡ್ ಮಾಡಿದವರಿದ್ದಾರೆ. ಆದರೆ ಬಹುತೇಕರು ಇನ್ನೂ ನಿರುದ್ಯೋಗಿಗಳಾಗಿದ್ದಾರೆ. ಉದ್ಯೋಗ ಪಡೆಯಲೂ ಕೂಡ `ಮೆಣಸಿನಹಾಡ್ಯದ ಖ್ಯಾತಿ~ ತೊಂದರೆ ಕೊಡುತ್ತಿದೆ.

ಗ್ರಾಮದಲ್ಲಿರುವ ಯುವಕರಿಗೆ ವಿವಿಧ ವೃತ್ತಿ ತರಬೇತಿ ನೀಡುವ ಯೋಜನೆ ಕೂಡ ಹಳ್ಳ ಹಿಡಿದಿದೆ. ಗ್ರಾಮದ ರಸ್ತೆ ಗುಣಮಟ್ಟ ಕೂಡ ಚೆನ್ನಾಗಿಲ್ಲ. ಅದಕ್ಕೇ ಇಲ್ಲಿನ ಜನರು ಭ್ರಮನಿರಸನಗೊಂಡಿದ್ದಾರೆ.

ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ!: ನಕ್ಸಲರಾಗಿದ್ದು ಈಗ ಶರಣಾದರೆ ಅವರಿಗೆ ಎಲ್ಲ ಸೌಲಭ್ಯಗಳನ್ನು ನೀಡುವುದಾಗಿ ಸರ್ಕಾರ ಹೇಳುತ್ತದೆ. ಅವರಿಗೆ ಜಮೀನು ಕೊಡುತ್ತದೆ. ಒಂದು ಲಕ್ಷ ರೂಪಾಯಿ ಸಹಾಯ ನೀಡಲಾಗುತ್ತದೆ. ಒಂದು ಲಕ್ಷ ರೂಪಾಯಿ ಸಾಲವನ್ನೂ ಕೊಡಿಸಲಾಗುತ್ತದೆ. ಮನೆ ಕಟ್ಟಿಕೊಳ್ಳಲು ನೆರವು ನೀಡಲಾಗುತ್ತದೆ. ಆದರೆ ನಕ್ಸಲೀಯರಿಂದ ಹತನಾದ ವ್ಯಕ್ತಿಯ ಕುಟುಂಬಕ್ಕೆ ಯಾವುದೇ ಸೌಲಭ್ಯವನ್ನೂ ನೀಡುವುದಿಲ್ಲ. ನಕ್ಸಲರು ಸರ್ಕಾರದ ವಿರುದ್ಧ ಹೋರಾಟ ನಡೆಸಿದವರು. ಅವರು ಶರಣಾದರೆ ಸೌಲಭ್ಯ. ಯಾವ ತಪ್ಪನ್ನೂ ಮಾಡದ ವ್ಯಕ್ತಿಯನ್ನು ನಕ್ಸಲರು ಕೊಂದು ಹಾಕಿದರೆ ಆ ವ್ಯಕ್ತಿಯ ಕುಟುಂಬಕ್ಕೆ ಯಾವ ಸೌಲಭ್ಯವೂ ಸಿಗುವುದಿಲ್ಲ. ಇದು ಯಾವ ನ್ಯಾಯ ಎಂದು ಮೆಣಸಿನಹಾಡ್ಯ ಗ್ರಾಮಸ್ಥರು ಪ್ರಶ್ನೆ ಮಾಡುತ್ತಾರೆ.

ಮೆಣಸಿನಹಾಡ್ಯದ ಶೇಷಯ್ಯ ಅವರು ಅತ್ತಿಕುಡಿಗೆ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದರು. ಶೇಷಯ್ಯ ಅವರ ಮನೆಗೆ 3 ಬಾರಿ ನಕ್ಸಲೀಯರು ಭೇಟಿ ನೀಡಿದ್ದರು. ಯಾವುದೇ ತೊಂದರೆ ಮಾಡಿರಲಿಲ್ಲ. ಆದರೆ ಸಾಕೇತ್‌ರಾಜನ್ ಹತ್ಯೆಯಾದ ನಂತರ ನಕ್ಸಲರಿಗೆ ಶೇಷಯ್ಯ ಅವರ ಬಗ್ಗೆ ಅನುಮಾನ ಬಂತು. ಪೊಲೀಸರಿಗೆ ಮಾಹಿತಿ ನೀಡುವವರು ಇವರೇ ಎಂದು ಅವರು ಭಾವಿಸಿದರು. 2005ರ ಮೇ 17ರಂದು ರಾತ್ರಿ 9ಕ್ಕೆ ಶೇಷಯ್ಯ ಅವರ ಮನೆ ಮೇಲೆ ದಾಳಿ ಮಾಡಿದ ನಕ್ಸಲರು ಶೇಷಯ್ಯ ಅವರನ್ನು ಹತ್ಯೆ ಮಾಡಿದರು.

ಅಂದಿನ ಘಟನೆಯನ್ನು ನೆನಪಿಸಿಕೊಂಡು ಶೇಷಯ್ಯ ಅವರ ಪತ್ನಿ ಕನ್ನಮ್ಮ ಕಣ್ಣೀರು ಹಾಕುತ್ತಾರೆ. `ಅಂದು ನಮ್ಮ ಯಜಮಾನರು ಊಟಕ್ಕೆ ಕುಳಿತಿದ್ದರು. ಮಗಳು ಊಟ ಬಡಿಸುತ್ತಿದ್ದಳು. ಆಗ 4 ಮಂದಿ ಸಶಸ್ತ್ರ ನಕ್ಸಲೀಯ ತಂಡ ಮನೆಯೊಳಕ್ಕೆ ನುಗ್ಗಿತು. ನಮ್ಮ ಯಜಮಾನರನ್ನು ದರದರನೆ ಎಳೆದುಕೊಂಡು ಮನೆಯ ಹೊರಕ್ಕೆ ಹೋದರು.

ಮನೆಯ ಬಾಗಿಲುಗಳನ್ನು ಮುಚ್ಚಿದರು. ನಾನು ಮತ್ತು ನನ್ನ ಮೂವರು ಮಕ್ಕಳಿಗೆ ಏನು ಮಾಡಬೇಕು ಎನ್ನುವುದು ತಿಳಿಯಲಿಲ್ಲ. ಅವರಿಗೆ ಹೊಡೆಯಬೇಡಿ. ಬಿಟ್ಟು ಬಿಡಿ ಎಂದು ನಾವು ಕೂಗಿಕೊಳ್ಳುತ್ತಿದ್ದೆವು. ನಮ್ಮ ಕೂಗು ಚೀರಾಟ ಅವರ ಕಿವಿಗೆ ಬೀಳಲೇ ಇಲ್ಲ. ಮನೆಯ ಅಂಗಳದಲ್ಲಿಯೇ ಅವರನ್ನು ಹೊಡೆದು ಹೊಡೆದು ಸಾಯಿಸಿದರು. ಅವರ ಜೀವ ಹೋಗಿದೆ ಎನ್ನುವುದು ಗೊತ್ತಾದ ನಂತರವೇ ಅವರು ಅಲ್ಲಿಂದ ಕಾಲ್‌ಕಿತ್ತರು.

ನಕ್ಸಲರು ನಮ್ಮ ಯಜಮಾನರನ್ನು ಕೊಂದು ಹಾಕಿದ್ದು ಗೊತ್ತಾದ ನಂತರ ಪೊಲೀಸರು, ರಾಜಕಾರಣಿಗಳು ಎಲ್ಲಾ ಬಂದರು. ನಮಗೆ ಪರಿಹಾರ ನೀಡುವುದಾಗಿ ಪ್ರಕಟಿಸಿದರು. ಸಾಲ ಮನ್ನಾ ಮಾಡುವುದಾಗಿ ಹೇಳಿದರು. ಬಿಎಡ್ ಓದಿರುವ ನನ್ನ ಮಗನಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದರು. ಆದರೆ ಈವರೆಗೆ ಯಾವುದೇ ಭರವಸೆ ಈಡೇರಿಲ್ಲ.`

`ನನ್ನ ಮಗ ಬಿಎಬಿಎಡ್ ಮಾಡಿಕೊಂಡಿದ್ದಾನೆ. ಇಲ್ಲಿರುವ ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದ. 5ನೇ ತರಗತಿಯ ಮಕ್ಕಳಿಗೆ ಕಲಿಸಲು ಬಿಎಡ್ ಮಾಡಿದವರು ಬೇಡ ಎಂದು ಬಿಡಿಸಿಬಿಟ್ಟರು. ಈಗ ಆತನಿಗೆ ಕೆಲಸ ಇಲ್ಲ. ನನಗೆ ವಿಧವಾ ವೇತನವನ್ನಾದರೂ ಕೊಡಿ ಎಂದು ಅರ್ಜಿ ಸಲ್ಲಿಸಿ ಸಾಕಾಗಿದೆ. ಇನ್ನೂ ಅದು ಕೂಡ ಬಂದಿಲ್ಲ` ಎಂದು ಅವರು ಗೋಳಿಡುತ್ತಾರೆ.

ಕನ್ನಮ್ಮ ಅವರ ಮಗಳಿಗೆ ಮದುವೆಯಾಗಿದೆ. ಇಬ್ಬರು ಮಕ್ಕಳ ಪೈಕಿ ಪ್ರವೀಣ್‌ಕುಮಾರ್ ಬಿಎಡ್ ಮಾಡಿದ್ದರೂ ಉದ್ಯೋಗ ಸಿಕ್ಕಿಲ್ಲ. ಇನ್ನೊಬ್ಬ ರವಿಚಂದ್ರ 8ನೇ ತರಗತಿಯವರೆಗೆ ಓದಿದ್ದಾನೆ. ಗ್ರಾಮದಲ್ಲಿಯೇ ಅದು ಇದು ಕೆಲಸ ಮಾಡಿಕೊಂಡಿದ್ದಾರೆ. ಒಂದಿಷ್ಟು ಜಮೀನು ಇದೆ. ಅದು ವರ್ಷದ ಕೂಲಿಗೆ ಸಾಕಾಗುವುದಿಲ್ಲ. ಸರ್ಕಾರ ತಮ್ಮ ಕಡೆಗೂ ಒಮ್ಮೆ ನೋಡಲಿ ಎಂದು ಅವರು ಕಳೆದ 7 ವರ್ಷದಿಂದ ಕಾಯುತ್ತಲೇ ಇದ್ದಾರೆ. 

(ನಾಳಿನ ಸಂಚಿಕೆಯಲ್ಲಿ ಕೊನೆಯ ಕಂತು-ನಕ್ಸಲರು ನಾಡಿಗೂ ಬರ್ತಾರೆ)
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT