ADVERTISEMENT

ಕಪಿಲಾ ನದಿ ತೀರದಲ್ಲಿ ಸ್ವಚ್ಛತಾ ಕಾರ್ಯ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 10:03 IST
Last Updated 13 ಜೂನ್ 2018, 10:03 IST

ನಂಜನಗೂಡು: ನಗರದ ಕಪಿಲಾ ನದಿ ತೀರದ ಸ್ನಾನ ಘಟ್ಟದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಶ್ರಮದಾನಕ್ಕೆ ಚಾಲನೆ ನೀಡಿದ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಚ್.ವಿನಯಕುಮಾರ್ ಮಾತನಾಡಿ, ದೇಶದಲ್ಲಿ ಪ್ರತಿ ನಿಮಿಷಕ್ಕೆ ಹತ್ತು ಲಕ್ಷ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಎಸೆಯಲಾಗುತ್ತಿದೆ. ವರ್ಷಕ್ಕೆ 400 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದನೆ ಯಾಗುತ್ತಿದೆ. ಅದರಲ್ಲಿ  ಶೇ 10ರಷ್ಟು ಮಾತ್ರ ಪುನರ್ಬಳಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನದಿಯಲ್ಲಿರುವ ಜಲಚರಗಳ ರಕ್ಷಣೆಗಾಗಿ ನದಿ ಪಾತ್ರದ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಬೇಕಾದ ಅಗತ್ಯವಿದೆ. ಈ ವರ್ಷ ‘ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸಿ’ ಎಂಬ ಘೋಷವಾಕ್ಯದೊಂದಿಗೆ ರಾಜ್ಯವ್ಯಾಪಿ ಮಿನಿ ಮ್ಯಾರಾಥಾನ್ ಆಯೋಜಿಸುವ ಮೂಲಕ ಪ್ಲಾಸ್ಟಿಕ್ ನಿಂದ ಉಂಟಾಗುವ ದುಷ್ಪರಿಣಾಮ ಕುರಿತು ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಸ್ವಚ್ಛತಾ ಕಾರ್ಯದಲ್ಲಿ ಅರಣ್ಯ ಇಲಾಖೆ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಶಿಕ್ಷಣ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಭಾಗವಹಿಸಿದ್ದರು. ತಾಲೂಕಿನ ಹೆಗ್ಗಡಹಳ್ಳಿ, ತಾಂಡವಪುರ, ಕಳಲೆ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಬಾಲಕ ಹಾಗೂ ಬಾಲಕಿಯರ ಪದವಿ ಕಾಲೇಜು, ಸರ್ಕಾರಿ ದಳವಾಯಿ ಶಾಲೆಯ 200 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಆಯುಕ್ತ ಡಾ.ಯತೀಶ್,  ಸಂಸ್ಥೆಯ ಯೋಜನಾಧಿಕಾರಿ ರಮೇಶ್, ಮುಖ್ಯ ತರಬೇತುದಾರ ಬಿ.ಬಸವರಾಜು, ನಗರಸಭೆ ಎಇಇ ಭಾಸ್ಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.