ADVERTISEMENT

ಕಾವೇರಿದ ವಾತಾವರಣದಲ್ಲಿ ಅಥ್ಲೆಟಿಕ್ಸ್‌ಗೆ ಸಜ್ಜು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 9:05 IST
Last Updated 4 ಅಕ್ಟೋಬರ್ 2012, 9:05 IST

ಮೈಸೂರು: `ಕಾವೇರಿ~ ಹೋರಾಟದ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದರೂ ಮೈಸೂರು ವಿಶ್ವವಿದ್ಯಾಲಯದ ಕ್ರೀಡಾಪಟುಗಳ ಉತ್ಸಾಹ ಮಾತ್ರ ಕುಗ್ಗಿಲ್ಲ!

ಗುರುವಾರದಿಂದ ಆರಂಭವಾಗಲಿರುವ 84ನೇ ಮೈಸೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ಕೂಟದಲ್ಲಿ ಭಾಗವಹಿಸಲು ಬೇರೆ ಜಿಲ್ಲೆಗಳ ಅಥ್ಲೀಟ್‌ಗಳು ಬುಧವಾರ ಸಂಜೆಯೇ ಆಗಮಿಸಿದ್ದಾರೆ.

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳ ಪದವಿ ಕಾಲೇಜುಗಳಿಂದ ಪುರುಷ ಮತ್ತು ಮಹಿಳಾ ಅಥ್ಲೀಟ್‌ಗಳು ಆಗಮಿಸುತ್ತಿದ್ದಾರೆ. ಸಂಜೆ ಮತ್ತು ರಾತ್ರಿ ಹೊತ್ತು ಪ್ರತಿಭಟನೆಗಳು, ರಸ್ತೆ ತಡೆಗಳು ಕಡಿಮೆ ಇರುವ ಸಮಯದಲ್ಲಿಯೇ ವಿದ್ಯಾರ್ಥಿಗಳು ಮೈಸೂರಿಗೆ ಬರುತ್ತಿದ್ದಾರೆ. ಆದರೆ ಮಂಡ್ಯ ಜಿಲ್ಲೆಯ ಕ್ರೀಡಾಪಟುಗಳು ಕಡಿಮೆ ಸಂಖ್ಯೆಯಲ್ಲಿ ಬರುವ ಆತಂಕ ಸಂಘಟಕರನ್ನು ಕಾಡುತ್ತಿದೆ.

ಒಟ್ಟು 1200 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ಓವೆಲ್ ಮೈದಾನದಲ್ಲಿ ಶನಿವಾರ ದವರೆಗೆ (ಅ. 6) ನಡೆಯಲಿರುವ ಅಥ್ಲೆಟಿಕ್ ಕೂಟದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲಿದ್ದಾರೆ.

`ಮೊದಲೇ ದಿನಾಂಕಗಳು ನಿರ್ಧಾರವಾಗಿದ್ದು ಎಲ್ಲ ಸಿದ್ಧತೆಗಳು ನಡೆದಿವೆ. ಡಿಸೆಂಬರ್‌ನಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ ಕೂಟವು ಪಶ್ಚಿಮ ಬಂಗಾಳದ ಕಲ್ಯಾಣಿ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಅದಕ್ಕಾಗಿ ವಿಶ್ವವಿದ್ಯಾಲಯ ತಂಡವನ್ನೂ ಇದೇ ಕೂಟದಲ್ಲಿ ಆಯ್ಕೆ ಮಾಡಬೇಕು. ಆದ್ದರಿಂದ ಎಲ್ಲ ರೀತಿಯ ಮುಂಜಾಗ್ರತೆ ಕ್ರಮ ಕೈಗೊಂಡು ಅಥ್ಲೆಟಿಕ್ ಕೂಟವನ್ನು ಸುರಕ್ಷಿತವಾಗಿ ನಡೆಸುತ್ತೇವೆ. ಅ.6ರಂದು ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ ಬೇಗನೆ ಎಲ್ಲವನ್ನೂ ಮುಗಿಲಾಗುವುದು ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ಕೃಷ್ಣ `ಪ್ರಜಾವಾಣಿ~ಗೆ ತಿಳಿಸಿದರು.


ಸುಮಾರು 84 ವರ್ಷಗಳ ಇತಿಹಾಸವಿರುವ ಮೈಸೂರು ವಿವಿ ಅಥ್ಲೆಟಿಕ್ಸ್ ಕೂಟದಲ್ಲಿ ಸಾಧನೆ ಮಾಡಿದ ಹಲವು ಪ್ರತಿಭಾವಂತರು ನಾಡಿನ ಕೀರ್ತಿಯನ್ನು ಬೆಳಗಿದ್ದಾರೆ. ಒಲಿಂಪಿಯನ್ ಜೆ.ಜೆ. ಶೋಭಾ, ಸುನಂದಾ, ಕಾಂತಮ್ಮ, ಇತ್ತೀಚಿನ ವರ್ಷಗಳಲ್ಲಿ ತಿಪ್ಪವ್ವ ಸಣ್ಣಕ್ಕಿ, ಶಹಜಹಾನಿ, ಬೀಬಿ ಸುಮಯಾ, ಶ್ರದ್ಧಾರಾಣಿ ದೇಸಾಯಿ,  ಅಂತರರಾಷ್ಟ್ರೀಯ ಅಥ್ಲೀಟ್ ರೀತ್ ಅಬ್ರಹಾಂ, ಅಂತರರಾಷ್ಟ್ರೀಯ ಅಥ್ಲೀಟ್ ಕೆ. ಸೋಮಶೇಖರ್, ಗಂಗಾಧರ್, ಭರತ್ ಇಲ್ಲಿಯ ಹೆಮ್ಮೆಯ ಅಥ್ಲೀಟ್‌ಗಳು.

ಇದೀಗ ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಕಾವೇರಿ ನದಿ ನೀರಿನ ಹೋರಾಟದ ಬಿಸಿ ಮುಗಿಲುಮುಟ್ಟಿದೆ. ಈ ನಡುವೆಯೇ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲು ವಿವಿ ಅಥ್ಲೀಟ್‌ಗಳು ಸಿದ್ಧರಾಗಿದ್ದಾರೆ.

ಹಾಫ್ ಮ್ಯಾರಥಾನ್ ಮುಂದೂಡಿಕೆ

 ಮೈಸೂರು
: `ಅರಮನೆ ನಗರಿ~ಯ ಕ್ರೀಡಾಚಟುವಟಿಕೆಗಳ ಮೇಲೆಯೂ  ಕಾವೇರಿ ನದಿ ನೀರು ವಿವಾದದ ಕಾರ್ಮೋಡ ಆವರಿಸಿದೆ.

ಲೈಫ್ ಈಸ್ ಕಾಲಿಂಗ್ ಸ್ಪೋರ್ಟ್ಸ್ ಸಂಸ್ಥೆಯು ಅಕ್ಟೋಬರ್ 7ರಂದು ನಡೆಸಲು ಉದ್ದೇಶಿಸಿದ್ದ `ಹಾಫ್ ಮ್ಯಾರಥಾನ್ ಉತ್ಸವ~ವವನ್ನು ಮುಂದೂಡಿದೆ. ಅಕ್ಟೋಬರ್ 28ರಂದು ಈ ಸ್ಪರ್ಧೆಯು ನಡೆಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಎಸ್.ಕೆ. ಮಿತ್ರಾ ತಿಳಿಸಿದ್ದಾರೆ.

21 ಕಿ.ಮೀ ಹಾಫ್ ಮ್ಯಾರಥಾನ್, 10 ಕಿ.ಮೀ ಮತ್ತು 5 ಕಿ.ಮೀ ರಸ್ತೆ ಓಟದ ಸ್ಪರ್ಧೆಗಳು ಅ. 7ರಂದು ನಡೆಯಬೇಕಿತ್ತು. ಆದರೆ ಪ್ರತಿಭಟನೆಗಳು, ರಸ್ತೆ, ರೈಲು ತಡೆಗಳು ನಡೆಯುತ್ತಿದ್ದು ಬೇರೆ ಊರುಗಳಿಂದ ಬರುವ ಓಟಗಾರರಿಗೆ ಅನಾನುಕೂಲವಾಗುವ ಸಂಭವವಿದೆ. 6ರಂದು ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ 7ರಂದು ಸ್ಪರ್ಧೆ ನಡೆಸುವುದು ಅನಾನುಕೂಲವಾಗುತ್ತದೆ. ಆದ್ದರಿಂದ ದಸರಾ ಉತ್ಸವದ ನಂತರವೇ ಸ್ಪರ್ಧೆಯನ್ನು ಆಯೋಜಿಸಲಾಗುವುದು. ಈ ಕುರಿತು ಎಲ್ಲ ಅಥ್ಲೀಟ್‌ಗಳಿಗೆ ಸಂದೇಶ ಕಳುಹಿಸಲಾಗಿದೆ~ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.