ADVERTISEMENT

ಕಾವೇರಿ ಕಿಚ್ಚು: ತಮಿಳರಿಂದ ಮೌನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 9:35 IST
Last Updated 4 ಅಕ್ಟೋಬರ್ 2012, 9:35 IST

ಮೈಸೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಯಬಿಟ್ಟಿರುವುದನ್ನು ಖಂಡಿಸಿ ನಡೆಯು ತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ನಗರದಲ್ಲಿ ಬುಧವಾರ ಸಾವಿರಾರು ತಮಿಳರು ರಸ್ತೆಗಿಳಿದು ಮೌನ ಮೆರವಣಿಗೆ ಮಾಡಿದರು. ಸಾಹಿತಿಗಳು ರಸ್ತೆಗಿಳಿದು ಹೋರಾಟ ಮಾಡಿದರು. ಸಹಸ್ರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ತರಗತಿ ಬಹಿ ಷ್ಕರಿಸಿ ಹೋರಾಟದಲ್ಲಿ ಪಾಲ್ಗೊಂಡರು.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರದ ತೀರ್ಮಾನ ಬೆಂಬಲಿಸಿ ಕರ್ನಾಟಕ ತಮಿಳು ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ 13 ತಮಿಳು ಸಂಘಟನೆಗಳು ನಗರದಲ್ಲಿ ಮೌನ ಪ್ರತಿಭಟನೆ ಮಾಡಿದವು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ದಿಂದ ಹೊರಟ ತಮಿಳರು ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿದರು.

ಒಕ್ಕೂಟದ ಅಧ್ಯಕ್ಷ ಕೆ.ಪುಗಳೆಂದಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಫ್ರಾನ್ಸಿಸ್, ಖಜಾಂಚಿ ವಿ.ಬಾಲಕೃಷ್ಣನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್ ಹೋರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು. ರಾಜ್ಯದಲ್ಲಿರುವ ತಮಿಳರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿ ಸಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ನಾಗನಾಯಕ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮೈಸೂರು, ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹುಣಸೂರು, ಎಚ್.ಡಿ.ಕೋಟೆ ತಾಲ್ಲೂಕು, ಕೆ.ಆರ್.ನಗರ, ಮಂಡ್ಯ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಭದ್ರಾವತಿ ತಮಿಳು ಸಂಘಟನೆಗಳು ಮೌನ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಕಸಾಪ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಾವೇರಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಗರದ ನ್ಯಾಯಾಲಯ ಸಂಕೀರ್ಣ ಎದುರಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಸಾಹಿತಿಗಳು ಮತ್ತು ಕನ್ನಡಪರ ಹೋರಾಟಗಾರರು ಪ್ರತಿಭಟನೆ ಮಾಡಿದರು.


ಸಾಹಿತಿಗಳಾದ ಸಾಹಿತಿ ದೇ.ಜವರೇಗೌಡ, ಸಿ.ಪಿ.ಕೃಷ್ಣಕುಮಾರ್, ಮಳಲಿ ವಸಂತ ಕುಮಾರ್, ಲತಾ ರಾಜಶೇಖರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರ ಶೇಖರ್, ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್, ಎಂ.ಬಿ.ವಿಶ್ವ ನಾಥ್, ಜೆಡಿಎಸ್ ನಗರ ಕಾರ್ಯಾಧ್ಯಕ್ಷ ಎಸ್‌ಬಿಎಂ ಮಂಜು, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಮೂಗೂರು ನಂಜುಂಡಸ್ವಾಮಿ ಭಾಗವಹಿಸಿದ್ದರು.

ರಸ್ತೆ ತಡೆ, ಟೈರ್‌ಗೆ ಬೆಂಕಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಅವರ ನೇತೃತ್ವದಲ್ಲಿ ನೂರಾರು ನಾಗರಿಕರು ಕೆಆರ್‌ಎಸ್ ರಸ್ತೆಯಲ್ಲಿ ರಸ್ತೆ ತಡೆ ಮಾಡಿದರು. ನಂತರ ಟೈರ್‌ಗೆ ಬೆಂಕಿ ಹಾಕಿದ್ದರಿಂದ ಈ ಭಾಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಸರ್ಕಾರಿ ಶಾಲೆ ಮಕ್ಕಳು ಸಹ ಹೋರಾಟದಲ್ಲಿ ಭಾಗವಹಿಸಿ ಗಮನ ಸೆಳೆದರು.

ತಮಿಳುನಾಡಿಗೆ ನೀರು ಬಿಡುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ಕಾವೇರಿ ನದಿ ನೀರು ಪ್ರಾಧಿಕಾರ ನಿತ್ಯ 9 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿರುವುದನ್ನು ಪುನರ್ ಪರಿಶೀಲಿಸಬೇಕು ಎಂದು ಮಾದೇಗೌಡರು ಆಗ್ರಹಿಸಿದರು.

ಅರೆ ಬೆತ್ತಲೆ ಮೆರವಣಿಗೆ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಕುಮಾರ್ ಶೆಟ್ಟಿ) ಬಣ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಅರೆ ಬೆತ್ತಲೆ ಮೆರವಣಿಗೆ ಮಾಡಿದರು.  ವೇದಿಕೆ ನಗರ ಘಟಕ ಅಧ್ಯಕ್ಷ ಕೆ.ಮಾದೇಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ವಿದ್ಯಾರ್ಥಿಗಳ ಕೂಗು: ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆ ನೇತೃತ್ವದಲ್ಲಿ ಜೆಎಸ್‌ಎಸ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ರಸ್ತೆಗಿಳಿದು ಹೋರಾಟ ಮಾಡಿದರು. ಪ್ರತಿಭಟನಾ ಮೆರವಣಿಗೆ ಮಾಡಿ ನಂತರ ಜಿಲ್ಲಾಧಿಕಾರಿ ಕಚೇರಿ ತಲುಪಿ ಮನವಿ ಪತ್ರ ಸಲ್ಲಿಸಿದರು. ವೇದಿಕೆ ರಾಜ್ಯಾಧ್ಯಕ್ಷ ಎಂ.ಜೆ.ಸುರೇಶ್‌ಗೌಡ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಲಕ್ಷ್ಮಿಪುರಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಹೋರಾಟ ಮಾಡಿದರು. ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಗಮನ ಸೆಳೆದರು. ತಮಿಳುನಾಡು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಒತ್ತಾಯಿಸಿ ವಿದ್ಯಾವರ್ಧಕ ಪದವಿಪೂರ್ವ, ಪದವಿ, ಸ್ನಾತಕೋತ್ತರ ಮತ್ತು ಕಾನೂನು ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನಾ ಮೆರವಣಿಗೆ ಮಾಡಿದರು. ಜಿಲ್ಲಾಧಿಕಾರಿ ಕಚೇರಿ ತಲುಪಿ ಮನವಿ ಪತ್ರ ಸಲ್ಲಿಸಿದರು.

ಶಾಶ್ವತ ಪರಿಹಾರಕ್ಕೆ ಒತ್ತಾಯ: ಮೈಸೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಸಾಹಿತಿ ಡಿ.ಎನ್.ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರಗಳು ಜಲವಿವಾದನ್ನು ಬಗೆಹರಿಸುವಲ್ಲಿ ವಿಫಲವಾಗಿವೆ ಎಂದು ಪ್ರಕಟಣೆ ತಿಳಿಸಿದೆ.

ಕೃಷ್ಣರಾಜಸಾಗರ ಬಂದ್!
ಮಂಡ್ಯ ಜಿಲ್ಲೆಯ ರೈತರು ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾ ಶಯಕ್ಕೆ ಮುತ್ತಿಗೆ ಹಾಕಲು ಆಗಮಿಸಿದ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಗ್ರಾಮದ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿದ್ದರು. ಕೆಆರ್‌ಎಸ್ ಪೊಲೀಸ್ ಠಾಣೆ ಎದುರು ಹಾಗೂ ರಸ್ತೆ ಮಧ್ಯೆ ಟೈರ್ ಸುಟ್ಟು ರೈತರು ಪ್ರತಿಭಟನೆ ನಡೆಸಿದ್ದರಿಂದ ಕೆಆರ್‌ಎಸ್ ಜಲಾಶಯದ ಮುಖ್ಯ ರಸ್ತೆಯಲ್ಲಿರುವ ಎಲ್ಲ ಅಂಗಡಿಗಳೂ ಮುಚ್ಚಿದ್ದವು.

ಎಟಿಎಂ ಬಾಗಿಲೂ ಬಂದ್
ಕೆಆರ್‌ಎಸ್ ಮುಖ್ಯ ರಸ್ತೆ ಮೂಲಕ ರೈತರು ಬಸ್ಸು, ಲಾರಿ, ಖಾಸಗಿ ವಾಹನ ಹಾಗೂ ಬೈಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಇದೇ ರಸ್ತೆಯಲ್ಲಿರುವ ಎರಡು ಎಟಿಎಂಗಳನ್ನು ಮಧ್ಯಾಹ್ನ 1 ರಿಂದ 5 ಗಂಟೆ ವರೆಗೆ ಬಂದ್ ಮಾಡಲಾಗಿತ್ತು. ಇದರಿಂದಾಗಿ ಹಣ ಪಡೆಯಲು ಹೋದವರು ಬರಿಗೈಲಿ ಮರಳಿದರು. ಮತ್ತೊಂದು ಎಟಿಎಂ ಕೇಂದ್ರದ ಬಾಗಿಲಿಗೆ ಫ್ಲೈವುಡ್ ಅಳವಡಿಸಲಾಗಿತ್ತು.

ರಸ್ತೆ ಬದಿಯಲ್ಲೇ ಅಡುಗೆ, ಊಟ
ಬಸ್ಸು, ಲಾರಿಗಳಲ್ಲಿ ಆಗಮಿಸಿದ್ದ ಪ್ರತಿಭಟನಾಕಾರರಿಗೆ ರಸ್ತೆ ಬದಿಯಲ್ಲೇ ಅಡುಗೆ ತಯಾರಿಸಿ, ಕ್ಯಾರಿ ಬ್ಯಾಗ್‌ನಲ್ಲಿ ನೀಡಲಾಯಿತು. ಬಹುತೇಕ ಹೋಟೆಲ್‌ಗಳು ಮಧ್ಯಾಹ್ನದವರೆಗೆ ತೆರೆದಿದ್ದವು. ಪ್ರತಿಭಟನೆ ಕಾವು ಜೋರಾಗುತ್ತಿದ್ದಂತೆ ಸ್ವಯಂ ಪ್ರೇರಣೆಯಿಂದ ಎಲ್ಲರೂ ಹೋಟೆಲ್ ಬಂದ್ ಮಾಡಿದರು. ರಸ್ತೆ ಬದಿ ಅಡುಗೆ ಮಾಡಿದ್ದರೂ ಕೆಲವರು ಊಟ ಸಿಗದೆ ಪರದಾಡಿದರು.

ಕುತೂಹಲ, ಆತಂಕ ಇಮ್ಮಡಿ
ಮಂಡ್ಯ ಜಿಲ್ಲೆಯ ರೈತರು 12.45 ಗಂಟೆಗೆ ಕೆಆರ್‌ಎಸ್ ಜಲಾಶಯ ತಲುಪಿದರು. ಆಗ ಪೊಲೀಸರು, ರೈತರ ನಡುವೆ ತೀವ್ರ ಮಾತಿನ ಚಕಮಕಿ ಆರಂಭವಾಯಿತು. ದೂರದಲ್ಲೇ ನಿಂತಿದ್ದ ಕೆಲವರು ಕುತೂಹಲದಿಂದ ಘಟನೆಯನ್ನು ವೀಕ್ಷಿಸಿದರು. ಏನಾಗಬಹುದು, ಏನಾದರೂ ಆಯ್ತ? ಎಂದು ಪ್ರಶ್ನಿಸುತ್ತಿದ್ದರು. ಸಮಯ ಸರಿಯುತ್ತಿದ್ದಂತೆ ಕ್ಷಣ ಕ್ಷಣಕ್ಕೂ ಗ್ರಾಮಸ್ಥರ ಕುತೂಹಲ, ಆತಂಕ ಇಮ್ಮಡಿ ಆಗುತ್ತ ಹೋಯಿತು.

ತಲೆ ಸುತ್ತಿ ಬಿದ್ದರು
ಮಾಮೂಲಿಗಿಂತ ಬಿಸಿಲು ಹೆಚ್ಚಾಗಿದ್ದರಿಂದ ಇಬ್ಬರು ಪ್ರತಿಭಟನಾ ಕಾರರು ತಲೆ ಸುತ್ತಿ ಬಿದ್ದರು. ತಕ್ಷಣವೇ ಅವರಿಗೆ ನೀರು ಕೊಟ್ಟು ಉಪಚರಿಸಲಾಯಿತು. ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಬಿಸಿಲಿನ ಪ್ರಖರತೆ ತೀವ್ರವಾಗಿತ್ತು. ಬಹುತೇಕರು ನದಿಗೆ ಇಳಿದು ಕಾವೇರಿ ನೀರನ್ನು ಕುಡಿದು ದಾಹ ತಣಿಸಿಕೊಂಡರು.

ಅಲ್ಲಲ್ಲಿ ಭರ್ಜರಿ ವ್ಯಾಪಾರ
ಬೃಂದಾವನ ಉದ್ಯಾನದ ಸಮೀಪ ವ್ಯಾಪಾರ ಮಾಡುತ್ತಿದ್ದ ಕೆಲವರು ರಸ್ತೆ ಬದಿಯಲ್ಲೇ ಗೂಡಂಗಡಿ ಆರಂಭಿಸಿದ್ದರು. ಇದರಿಂದಾಗಿ ಪುರಿ (ಚುರು ಮುರಿ), ಕಡ್ಲೆಬೀಜ, ಸೌತೆಕಾಯಿ, ಐಸ್‌ಕ್ರೀಂ ವ್ಯಾಪಾರ ಜೋರಾಗಿತ್ತು.

ಕೆಲಸಕ್ಕೆ ಬಂದ ಕಾರ್ಮಿಕರು

ರೈತರು ಜಲಾಶಯದ ದಕ್ಷಿಣ ದ್ವಾರಕ್ಕೂ ಮುತ್ತಿಗೆ ಹಾಕಬಹುದು ಎಂದು ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಮಂಡ್ಯ ಜಿಲ್ಲಾ ರೈತ ಹಿತರಕ್ಷಣ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಉತ್ತರ ದ್ವಾರದಲ್ಲಿ ಪ್ರತಿಭಟನೆ ಆರಂಭಿಸಿದ್ದರಿಂದ ಎಲ್ಲ ರೈತರೂ ಅಲ್ಲಿಗೆ ತೆರಳಿದರು. ಜಲಾಶಯ ಸಮೀಪದ ಉದ್ಯಾನದಲ್ಲಿ ಕೆಲಸ ಮಾಡುವ ಕಾರ್ಮಿಕರು ಮಾತ್ರ ಎಂದಿನಂತೆ ಕೆಲಸಕ್ಕೆ ಬಂದಿದ್ದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.