ADVERTISEMENT

ಕಾವ್ಯ-ಕುಂಚ, ಗೋಲಿ, ಬುಗುರಿ...

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 6:20 IST
Last Updated 23 ಜನವರಿ 2012, 6:20 IST

ಮೈಸೂರು: ಸುಶ್ರಾವ್ಯವಾಗಿ ಕೇಳಿಬರುತ್ತಿದ್ದ ಗಾಯನ, ಮತ್ತೊಂದೆಡೆ ಗಾನಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದ ಚಿಣ್ಣರು; ಇವುಗಳಿಗೆ ತಕ್ಕಂತೆ ಕ್ಯಾನ್ವಸ್ ಮೇಲೆ ಅರಳಿದ ಚಿತ್ರ!

ಸುತ್ತೂರಿನಲ್ಲಿ ಭಾನುವಾರ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಹೀಗೆ ಕಾವ್ಯ-ಕುಂಚದ ಮೂಲಕ ವಿನೂತವಾಗಿ ಉದ್ಘಾಟಿಸಲಾಯಿತು. ಬಸವೇಶ್ವರರ ಶಿವಲಿಂಗು ಆರಾಧನೆ ಯನ್ನು ಮಕ್ಕಳು ನೃತ್ಯದ ಮೂಲಕ ಕಟ್ಟಿ ಕೊಟ್ಟರು. ಹಾಡು ಮುಗಿ ಯುತ್ತಿದ್ದಂತೆ ಕ್ಯಾನ್ವಸ್ ಮೇಲೆ ಅರಳಿದ ಶಿವಲಿಂಗು, ಆನೆ, ಆಗಸದ ಚಿತ್ರ ಕಂಡು ಸೇರಿದ್ದ ಜನತೆ ಪುಳಕಿತರಾದರು!

ಮಧ್ಯಾಹ್ನದ ಬಿಸಿಲು ಏರುತ್ತಿದ್ದಂತೆ ಸುತ್ತೂರಿನಲ್ಲಿ ಜನರ ಸಂಖ್ಯೆಯೂ ಹೆಚ್ಚಾಗುತ್ತಿತ್ತು. ರಜಾ ದಿನವಾದ ಕಾರಣ ಮೈಸೂರು, ನಂಜನಗೂಡು, ಚಾಮರಾಜನಗರ ಸೇರಿದಂತೆ ಅನೇಕ ಕಡೆಗಳಿಂದ ಬಸ್ಸು, ಕಾರು, ಬೈಕ್ ಸೇರಿದಂತೆ ಅನೇಕ ವಾಹನಗಳಲ್ಲಿ ಆಗಮಿಸುತ್ತಿದ್ದರು. ಕಪಿಲೆಯಲ್ಲಿ ಮಿಂದು ಮಠದತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಮಕ್ಕಳು ಕುಂಚ, ಕ್ಯಾನ್ವಸ್ ಹಿಡಿದು ಚಿತ್ರ ಬಿಡಿಸುವಲ್ಲಿ ತಲ್ಲೆನರಾಗಿದ್ದರು. ವೇದಿಕೆಯ ಮೇಲೆ ಗಣ್ಯರು ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡುತ್ತಿದ್ದಂತೆ ಮಕ್ಕಳೊಳಗಿನ ಕಲಾವಿದ ಅರಳತೊಡಗಿದ. ಕ್ಷಣ ಮಾತ್ರದಲ್ಲಿ ಮನೆ, ಪರಿಸರ, ನಗರದ ಗಗನಚುಂಬಿ ಕಟ್ಟಡಗಳು ಕ್ಯಾನ್ವಸ್ ಮೇಲೆ ಮೂಡಿದವು. ಇನ್ನೊಂದು ಭಾಗದಲ್ಲಿ ಮಹಿಳೆಯರು ಮೆಹೆಂದಿಯಿಂದ ಕೈಯಲ್ಲೇ ವಿವಿಧ ಚಿತ್ರ ಅರಳಿಸಿ ತಮ್ಮ ಸೃಜತಶೀಲತೆ ಮೆರೆದರು.

ಗಮನ ಸೆಳೆದ ದೇಸಿ ಆಟ: ಮೊದಲ ಬಾರಿಗೆ ಏರ್ಪಡಿಸಿದ್ದ ದೇಸಿ ಆಟ ಎಲ್ಲರ ಗಮನ ಸೆಳೆಯಿತು. ಆಧುನಿಕ ಜೀವನ ಶೈಲಿಯಿಂದ ಮರೆಯಾಗುತ್ತಿರುವ ಗ್ರಾಮೀಣ ಆಟಗಳನ್ನು ಕಣ್ತುಂಬಿಕೊಳ್ಳಲು ಬಸವೇಶ್ವರ ವಿದ್ಯಾರ್ಥಿ ನಿಲಯದ ಮುಂಭಾಗದ ಮೈದಾನದತ್ತ ಜನತೆ ಆಗಮಿಸುತ್ತಿದ್ದರು. ಪ್ರೌಢಶಾಲಾ ಬಾಲಕರಿಗಾಗಿ ಗೋಲಿ, ಬುಗುರಿ, ಬಾಲಕಿಯರಿಗಾಗಿ ಆಣೆಕಲ್ಲು, ಕುಂಟಾಬಿಲ್ಲೆ ಆಟಗಳನ್ನು ಏರ್ಪಡಿಸಲಾಗಿತ್ತು. ಪ್ರತಿ ಆಟದಲ್ಲೂ ಸುಮಾರು 50 ಸ್ಪರ್ಧಾಳುಗಳು ಭಾಗವಹಿಸಿದ್ದರು.

ನೆಲದ ಮೇಲೆ ಕೂತು ಬೆರಳಿನಲ್ಲಿ ಗೋಲಿ ಹೊಡೆಯುತ್ತಿದ್ದ ಮಕ್ಕಳನ್ನು ಕಂಡು ಅನೇಕರು ಬಾಲ್ಯ ಜೀವನ ನೆನಪುಗಳಿಗೆ ಜಾರಿದ್ದರು. ಗಿರಿಗಿರಿ ತಿರುಗುತ್ತಿದ್ದ ಬುಗುರಿಯನ್ನು ಅಂಗೈಯಲ್ಲಿ ಆಡಿಸುವ ಪರಿಗೆ ಚಿಣ್ಣರು ಮರುಳಾಗಿದ್ದರು. ಬಾಲಕಿಯರ ಕುಂಟಾಬಿಲ್ಲೆ ಆಟವನ್ನು ನಗರದ ಜನ ತಮ್ಮ ಮಕ್ಕಳಿಗೆ ವಿವರಿಸುತ್ತಿದ್ದರು. ಆದರೆ ಗೋಲಿ ಮತ್ತು ಬುಗುರಿಯಲ್ಲಿ ಗ್ರಾಮೀಣರಿಂತ ನಗರದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದರು.

ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿನಿಯರ ಥ್ರೋಬಾಲ್, ಕೊಕ್ಕೊ ಪಂದ್ಯಗಳು ಕೂಡ ರೋಚಕವಾಗಿದ್ದವು.
ಸಭಾ ಕಾರ್ಯಕ್ರಮಕ್ಕಿಂತ ಅತಿ ಹೆಚ್ಚು ಜನ ವಸ್ತುಪ್ರದರ್ಶನ, ಕೃಷಿ ಬ್ರಹ್ಮಾಂಡ, ದನಗಳ ಪರಿಷೆಯನ್ನು ವೀಕ್ಷಿಸುವಲ್ಲಿ ನಿರತರಾಗಿದ್ದರು. ರಸ್ತೆ ಬದಿಯಲ್ಲಿದ್ದ ಬಲೂನು, ರಂಗೋಲಿ ಬಿಡಿಸುವ ಸಿದ್ಧ ಅಚ್ಚು, ಕೊಳಲು ಮತ್ತಿತರ ವಸ್ತುಗಳನ್ನು ಕೊಳ್ಳುವಲ್ಲಿ ತಲ್ಲೆನರಾಗಿದ್ದರು.

ಮಠದ ಅತಿಥಿಗೃಹದ ಬಳಿ ಇರುವ ಮಹಾದಾಸೋಹ ಮಂಟಪದಲ್ಲಿ ಜನಜಾತ್ರೆ ನಿರ್ಮಾಣವಾಗಿತ್ತು. ಮಹಿಳೆಯರು ಹಾಗೂ ಪುರುಷರಿಗೆ ಸಿದ್ಧಪಡಿಸಲಾಗಿದ್ದ ಪ್ರತ್ಯೇಕ ಕೌಂಟರ್‌ಗಳಲ್ಲೇ ಊಟ ಬಡಿಸಲಾಗುತ್ತಿತ್ತು. ಊಟ ಮಾಡಿದವರು ಮತ್ತೆ ಜಾತ್ರೆಯ ಜನಜಂಗುಳಿಯಲ್ಲಿ ಮರೆಯಾಗುತ್ತಿದ್ದರು.

ಸ್ಪರ್ಧೆಯ ಫಲಿತಾಂಶ:
ಗೋಲಿ: ಚಿದಾನಂದ (ಪ್ರಥಮ), ಸುದರ್ಶನ (ದ್ವಿತೀಯ).
ಬುಗುರಿ: ಮಾದೇಶ (ಪ್ರಥಮ), ಚಾಮರಾಜ (ದ್ವಿತೀಯ).
ಆಣೆಕಲ್ಲು: ಮೇಘಾ (ಪ್ರಥಮ), ಸೀಮಾ (ದ್ವಿತೀಯ).
ಕುಂಟಾಬಿಲ್ಲೆ: ಕವಿತಾ (ಪ್ರಥಮ), ಮಾಲಾ (ದ್ವಿತೀಯ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.