ADVERTISEMENT

ಕೂರ್ಗಳ್ಳಿ: ಕಾಡೆಮ್ಮೆ ಸಂತಾನಾಭಿವೃದ್ಧಿ ಕೇಂದ್ರಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 6:42 IST
Last Updated 20 ಡಿಸೆಂಬರ್ 2012, 6:42 IST

ಮೈಸೂರು: ಕಾಡೆಮ್ಮೆಗಳ ಸಂತಾನಭಿವೃದ್ಧಿ ಮತ್ತು ವನ್ಯಜೀವಿಗಳ ಪುನರ್ವಸತಿ ಹಾಗೂ ಸಂರಕ್ಷಣ ಕೇಂದ್ರದ ನಿರ್ಮಾಣಕ್ಕೆ ಕೂರ್ಗಳ್ಳಿಯಲ್ಲಿ ಬುಧವಾರ ಭೂಮಿಪೂಜೆ ನೆರವೇರಿಸಲಾಯಿತು.ಕೂರ್ಗಳ್ಳಿಯ ಸರ್ವೇ ನಂಬರ್ 137ರ 113.21 ಎಕರೆ ಜಾಗದಲ್ಲಿ ಒಟ್ಟು 18 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಈ ಕೇಂದ್ರ ನಿರ್ಮಾಣವಾಗಲಿದೆ. ಬುಧವಾರ ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಂ. ನಂಜುಂಡಸ್ವಾಮಿ ಭೂಮಿಪೂಜೆ ನೆರವೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮೀಸಲು ಅರಣ್ಯದ ಜಾಗದಲ್ಲಿ ಈ ಕಾಮಗಾರಿ ಆರಂಭಿಸಲಾಗಿದೆ. ಇಲ್ಲಿ ಐದು ವಿಭಾಗಗಳು ನಿರ್ಮಾಣವಾಗಲಿವೆ. ಕಾಡೆಮ್ಮೆ ಸಂತಾನಭಿವೃದ್ಧಿ ಮತ್ತು ಸಂರಕ್ಷಣೆ ಕೇಂದ್ರ. ಎರಡನೇಯದ್ದು ಆಪಾಯದಿಂದ ರಕ್ಷಿತ ಪ್ರಾಣಿಗಳಿಗೆ ಆರೈಕೆ ಮತ್ತು ಪುನರ್ವಸತಿ, ಆಡಳಿತಾತ್ಮಕ ವಿಭಾಗ, ವಿವಿಧ ಪ್ರಾಣಿಗಳ ಸುರಕ್ಷತಾ ಕೇಂದ್ರ ಮತ್ತು ಒಂದು ಪ್ರತ್ಯೇಕಿಸಿದ ಜಾಗ (ಐಸೋಲೇಟೆಡ್ ಬ್ಲಾಕ್) ಇಲ್ಲಿ ಆಗಲಿವೆ. ಇದೆಲ್ಲಕ್ಕೂ ಮುನ್ನ  ಜಾಗದ ಸುತ್ತ ಕಂಪೌಂಡ್ ನಿರ್ಮಾಣವಾಗಲಿದ್ದು, ವಿವಿಧ ವಿಭಾಗಗಳನ್ನು ಪ್ರತ್ಯೇಕಿಸುವ ಬೇಲಿಯನ್ನೂ ಹಾಕುವ ಕಾಮಗಾರಿ ನಡೆಯಲಿದೆ' ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ಶ್ರೀಚಾಮ ರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ, `ದೇಶದ ವಿವಿಧೆಡೆ ವಿನಾಶದಂಚಿನ 73 ವನ್ಯಜೀವಿಗಳನ್ನು ಗುರುತಿಸ ಲಾಗಿದೆ. ಅವುಗಳ ಸಂರಕ್ಷಣೆಗೆ ರೂಪಿಸಿರುವ ಯೋಜನೆಯಲ್ಲಿ ಕರ್ನಾಟಕಕ್ಕೆ ಈ ಕೇಂದ್ರ ಮಂಜೂರಾಗಿದೆ. ಬಂಡೀಪುರ, ಭದ್ರಾ ಅರಣ್ಯ ಪ್ರದೇಶ, ನಾಗರಹೊಳೆ ಸೇರಿದಂತೆ ರಾಜ್ಯದ ವಿವಿಧೆಡೆ ಕಾಡೆಮ್ಮೆಗಳ ಸಂತತಿ ಇದೆ. ಅವುಗಳ ಸಂರಕ್ಷಣೆ ಮತ್ತು ರೋಗ ಬಂದಾಗ ಆರೈಕೆಗಾಗಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ' ಎಂದರು.

`ರಾಜ್ಯದ ವಿವಿಧೆಡೆ ಇರುವ ಕಾಡೆಮ್ಮೆಗಳಲ್ಲಿ ವೈವಿಧ್ಯಗಳಿವೆ. ಜೈವಿಕ ವೈವಿಧ್ಯತೆಯನ್ನು ಅಭಿವೃದ್ಧಿಗೊಳಿಸಿ, ಸಂರಕ್ಷಣೆ ಮಾಡುವ ಕೆಲಸ ಇಲ್ಲಿ ನಡೆಯಲಿದೆ. ಕಾಡಿನಲ್ಲಿ ಅಥವಾ ಅರಣ್ಯದಿಂದ ನಾಡಿಗೆ ಬಂದು ಗಾಯಗೊಳ್ಳುವ ಪ್ರಾಣಿಗಳ ಆರೈಕೆ ಮತ್ತು ಪುನರ್ವಸತಿಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಪ್ರಾಣಿಗಳನ್ನು ಮೃಗಾಲಯಕ್ಕೆ ತರುವ ಬದಲು ಇಲ್ಲಿಗೆ ತಂದು ಆರೈಕೆ ಮಾಡಿ ಮರಳಿ ಕಾಡಿಗೆ ಬಿಡಲಾಗುತ್ತದೆ.

ಇದರಿಂದ ಸೋಂಕು ಹರಡುವುದನ್ನು ತಡೆಯ ಬಹುದು' ಎಂದು ಹೇಳಿದ ಅವರು, `1968ರಲ್ಲಿ ಭದ್ರಾ ಅಭಯಾರಣ್ಯದಲ್ಲಿ ರಿಂಡರ್‌ಪೆಸ್ಟ್ ಎಂಬ ರೋಗದಿಂದ ನೂರಾರು ಕಾಡೆಮ್ಮೆಗಳು ಅಸುನೀ ಗಿದ್ದವು. ಇಂತಹ ರೋಗಗಳ ಹಾವಳಿಯಿಂದ ಕೆಲವು ಜಾತಿಯ ಕಾಡೆಮ್ಮೆ ಸಂಪೂರ್ಣವಾಗಿ ವಿನಾಶವಾಗುವ ಅಪಾಯವಿರುತ್ತದೆ' ಎಂದರು.

`ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಯಾದರೆ 2 ರಿಂದ 3 ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕೇಂದ್ರವು ಕಾರ್ಯನಿರ್ವಹಿಸು ತ್ತದೆ. ಪ್ರಾಧಿಕಾರದಲ್ಲಿರುವ 1 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ವರ್ಷದಲ್ಲಿ ಕಂಪೌಂಡ್ ಮತ್ತು ಬೇಲಿ ಹಾಕುವ ಕಾಮಗಾರಿ ಮುಗಿದ ನಂತರ ಕೆಲವು ಕಾರ್ಯಕ್ರಮಗಳನ್ನು ಇಲ್ಲಿ ಆರಂಭಿಸಬಹುದು' ಎಂದು ಹೇಳಿದರು.

`ತೋಳ, ಸೀಳುನಾಯಿ, ಹೈನಾದಂತಹ ಪ್ರಾಣಿಗಳಿಗೂ ಇಲ್ಲಿ ಪುನವರ್ಸತಿ ಮತ್ತು ಸಂತಾನಭಿವೃದ್ಧಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕೇಂದ್ರ ಸಿದ್ಧವಾದ ಮೇಲೆ ಮೃಗಾಲಯದಲ್ಲಿ ಸಂತಾನಾಭಿವೃದ್ಧಿ ನಿರ್ವಹಣೆಗಳು ನಡೆಯು ವುದಿಲ್ಲ. ಅಲ್ಲೇನಿದ್ದರೂ ಕೇವಲ ಪ್ರಾಣಿಗಳ ಪ್ರದ ರ್ಶನ ಮಾತ್ರ ಇರುತ್ತದೆ' ಎಂದು ಹೇಳಿದರು.

ಅರಣ್ಯ ಇಲಾಖೆ ಮುಖ್ಯ ಸಂರಕ್ಷ ಣಾಧಿಕಾರಿ ಮಾರ್ಕಂಡೇಯ, ಉಪಅರಣ್ಯ ಸಂರಕ್ಷಣಾಧಿ ಕಾರಿ ಎಸ್.ಡಿ. ಗಾಂವ್ಕರ್, ಸದಸ್ಯ ಕಾರ್ಯ ದರ್ಶಿ ಆರ್.ಎಸ್. ಸುರೇಶ್ ಇತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.