ADVERTISEMENT

ಜಾಗತಿಕ ತಾಪಮಾನ ಹೆಚ್ಚಳ: ಆತಂಕ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 6:30 IST
Last Updated 24 ಮಾರ್ಚ್ 2011, 6:30 IST

ಮೈಸೂರು: ‘ಜನಸಂಖ್ಯೆಗಿಂತಲೂ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ಜಾಗತಿಕ ತಾಪಮಾನದಲ್ಲಿ ಹೆಚ್ಚಳ ಉಂಟಾಗುತ್ತಿದೆ’ ಎಂದು ಎನ್‌ಐಇ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಶ್ಯಾಂ ಸುಂದರ ಸುಬ್ಬರಾವ್ ಆತಂಕ ವ್ಯಕ್ತಪಡಿಸಿದರು.

ಎಂಜಿನಿಯರ್ ಸಂಸ್ಥೆ ವತಿಯಿಂದ ಬುಧವಾರ ಏರ್ಪಡಿಸಿದ್ದ ‘ಸುಸ್ಥಿರ ಅಭಿವೃದ್ಧಿಗೆ ನವೀಕರಿಸ ಬಹುದಾದ ಶಕ್ತಿ ಹಾಗೂ ಪರಿಸರ ಸ್ನೇಹಿ ತಂತ್ರಜ್ಞಾನಗಳು’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರಸ್ತುತ ಶೇ 64.7 ಉಷ್ಣ ವಿದ್ಯುಚ್ಛಕ್ತಿ, ಶೇ 24 ಹೈಡ್ರೋಜನ್, ಶೇ 2.7 ನ್ಯೂಕ್ಲಿಯರ್ ಹಾಗೂ ನವೀಕರಿಸಬಹುದಾದ ಮೂಲಗಳಿಂದ ಶೇ 7.7ರಷ್ಟು ವಿದ್ಯುಚ್ಛಕ್ತಿಯನ್ನು ಬಳಸಲಾಗುತ್ತಿದೆ. ಆದರೆ ಭಾರತೀಯರಲ್ಲಿ ಇಂಧನದ ಬಳಕೆ ಕುರಿತು ಬದ್ಧತೆ ಇಲ್ಲದಿರುವುದು ಬೇಸರದ ಸಂಗತಿ’ ಎಂದರು.

‘ಒಂದೆಡೆ ಪರಿಸರದಲ್ಲಿ ಸ್ವಾಭಾವಿಕ ಸಂಪನ್ಮೂಲಗಳು ಕಡಿಮೆ ಆಗುತ್ತಿವೆ. ಇನ್ನೊಂದೆಡೆ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನವೀಕರಿಸಬಹುದಾದ ಸಂಪನ್ಮೂಲಗಳ ಬಳಕೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಶಕ್ತಿ ಮೂಲಗಳಾದ ಬಯೋ ಗ್ಯಾಸ್, ಸೌರಶಕ್ತಿ, ಪವನ ಶಕ್ತಿ, ಮಳೆ ನೀರು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವತ್ತ ಗಮನ ಹರಿಸಬೇಕಾಗಿದೆ’ ಎಂದು ಹೇಳಿದರು.

‘ಮೈಸೂರು ನಗರದಲ್ಲಿ ಪ್ರತಿ ನಿತ್ಯ 400 ಟನ್ ಘನ ತ್ಯಾಜ್ಯ ವಸ್ತು ಉತ್ಪತ್ತಿಯಾಗುತ್ತಿದೆ. ತಂತ್ರಜ್ಞಾನ ಬಳಕೆಯಿಂದ ಈ ತ್ಯಾಜ್ಯವನ್ನು ಶಕ್ತಿಯಾಗಿ ಬಳಸಬಹುದು. ಅದೇ ರೀತಿ ಮನೆಯಲ್ಲಿ ಉತ್ಪತ್ತಿ ಆಗುವ ಘನ ತ್ಯಾಜ್ಯದಿಂದ ಅಡುಗೆ ಗ್ಯಾಸ್ ಪಡೆಯಬಹುದು’ ಎಂದು ತಿಳಿಸಿದರು.ಎಂಜಿನಿಯರ್ಸ್‌ ಸಂಸ್ಥೆ ಅಧ್ಯಕ್ಷ ಎ.ಎಸ್.ಸತೀಶ್, ಕಾರ್ಯಕ್ರಮ ಸಂಚಾಲಕ ಡಾ.ರಾಜಾರಾಂ ಶಾಸ್ತ್ರಿ, ಭಾರದ್ವಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.