ADVERTISEMENT

ಜಾತಿ, ಕಾಂಚಾಣದ ಸದ್ದೇ ಜೋರು!

​ಪ್ರಜಾವಾಣಿ ವಾರ್ತೆ
Published 6 ಜನವರಿ 2011, 7:30 IST
Last Updated 6 ಜನವರಿ 2011, 7:30 IST

ಮೈಸೂರು: ಕಳೆದುಕೊಂಡ ಕಾಂಗ್ರೆಸ್, ಗಳಿಸಿಕೊಂಡ ಜೆಡಿಎಸ್ ಮತ್ತು ಬಿಜೆಪಿ-ಇದು ಮೈಸೂರು ಜಿಲ್ಲಾ ಪಂಚಾಯಿತಿ ಫಲಿತಾಂಶದ ಪ್ರತಿಫಲನ. ಇಡೀ ಚುನಾವಣೆ ಪಕ್ಷ ಮತ್ತು ಜಾತಿ, ಅಭ್ಯರ್ಥಿ, ಹಣ ಮತ್ತು ಹೆಂಡದ ಆಧಾರದ ಮೇಲೆ ನಡೆದಿರುವುದು ಸುಳ್ಳಲ್ಲ. ಸಣ್ಣ ಹಳ್ಳಿಗೆ ಹೋಗಿ ಕೇಳಿದರೂ ಮೂರು ಪ್ರಮುಖ ಪಕ್ಷಗಳ ‘ಪ್ರಸಾದ’ ಕುರಿತು ಹೇಳುತ್ತಾರೆ. ಆಮಿಷದ ವಿಷಯದಲ್ಲಿ ಆಯಾ ಪಕ್ಷಗಳ ಅಭ್ಯರ್ಥಿಗಳ ಆರ್ಥಿಕ ಸ್ಥಿತಿಯೇ ಅಳತೆಗೋಲಾಗಿತ್ತು. ಇಷ್ಟೇ ಅಲ್ಲದೇ ಚುನಾವಣೆಯಲ್ಲಿ ‘ಜಾತಿ’ಯೂ ಕೂಡ ಪ್ರಮುಖವಾಗಿ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ.

ಅರಳಿದ ಕಮಲ: ಲಿಂಗಾಯತರೇ ಪ್ರಮುಖವಾಗಿರುವ ನಂಜನಗೂಡು ತಾಲ್ಲೂಕಿನಲ್ಲಿ ಒಟ್ಟು 8 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ 4 ಬಿಜೆಪಿ ಪಾಲಾಗಿವೆ. ಜಿಲ್ಲೆಯಲ್ಲಿ ಬಿಜೆಪಿ ಗಳಿಸಿರುವುದೇ ಕೇವಲ 8 ಸ್ಥಾನಗಳನ್ನು. ಅವುಗಳಲ್ಲಿ ಶೇಕಡ 50 ರಷ್ಟು ಸ್ಥಾನಗಳು ನಂಜನಗೂಡು ತಾಲ್ಲೂಕು ಒಂದರಿಂದಲೇ ಬಂದಿವೆ ಎನ್ನುವುದು ಗಮನಾರ್ಹ. ಲಿಂಗಾಯತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕಾರಣಕ್ಕಾಗಿ ಬಿಜೆಪಿ ಜೊತೆಗೆ ಇದ್ದಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಆದ್ದರಿಂದಲೇ ಬಿಜೆಪಿ ಇಲ್ಲಿ ಹಿರಿಯ ರಾಜಕಾರಣಿ ವಿ.ಶ್ರೀನಿವಾಸ್‌ಪ್ರಸಾದ್ ಎದುರು ಮುನ್ನುಗ್ಗಿ ತಾಲ್ಲೂಕು ಪಂಚಾಯಿತಿಯನ್ನು ವಶಕ್ಕೆ ತೆಗೆದುಕೊಂಡಿದೆ.

ನಂಜನಗೂಡಿನಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವಲ್ಲಿ ಮುಖ್ಯಮಂತ್ರಿಗಳ ಆಪ್ತ ಸಹಾಯಕನ ‘ಕಾಂಚಾಣ’ ಜೋರಾಗಿಯೇ ಅಬ್ಬರಿಸಿತು ಎನ್ನುವ ಮಾತಿದೆ. ಅಲ್ಲದೇ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಕೂಡ ಸಹಾಯಕವಾಗಿತ್ತು. ತೆನೆ ತುಂಬಿಕೊಂಡಿತು: ಮೈಸೂರು, ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ತಿ.ನರಸೀಪುರ ತಾಲ್ಲೂಕಿನ ಬನ್ನೂರು ಹೋಬಳಿಯಲ್ಲಿ ಒಕ್ಕಲಿಗರು ಪ್ರಮುಖವಾಗಿದ್ದಾರೆ. ಆದ್ದರಿಂದಲೇ ಮೈಸೂರು ಮತ್ತು ತಿ.ನರಸೀಪುರ ತಾಲ್ಲೂಕಿನಲ್ಲಿ ಜೆಡಿಎಸ್ ತಲಾ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದೆ.
 
ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ತಲಾ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ. ಇಷ್ಟೇ ಅಲ್ಲದೇ ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕು ಪಂಚಾಯಿತಿಯಲ್ಲಿ ಬಹುಮತ ಪಡೆದಿದೆ. ಎಚ್.ಡಿ.ಕೋಟೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದು, ಮೈಸೂರು ತಾಲ್ಲೂಕಿನಲ್ಲಿಯೂ ಗಣನೀಯ ಸ್ಥಾನಗಳನ್ನು ಪಡೆದುಕೊಂಡಿದೆ. ಈ ಭಾಗದಲ್ಲಿ ಒಕ್ಕಲಿಗರು ಹೆಚ್ಚಾಗಿರುವುದು ಸುಳ್ಳಲ್ಲ. ಆದರೆ ಒಕ್ಕಲಿಗರು ಕಡಿಮೆ ಇರುವ ನಂಜನಗೂಡು ತಾಲ್ಲೂಕಿನಲ್ಲಿ ಜೆಡಿಎಸ್ ಖಾತೆ ತೆರಲು ಸಾಧ್ಯವಾಗಲೇ ಇಲ್ಲ!

ಜಿಲ್ಲೆಯಲ್ಲಿ ಜೆಡಿಎಸ್ ಸಾಧನೆ ಹಿಂದೆ ಜಾತಿ ಸಮೀಕರಣವೂ ಕೆಲಸ ಮಾಡಿದೆ. ಕಳೆದ ಬಾರಿ ಸಿದ್ದರಾಮಯ್ಯನವರ ಕಾರಣಕ್ಕಾಗಿ ಜೆಡಿಎಸ್ ಜೊತೆ ‘ಟೂ’ ಬಿಟ್ಟಿದ್ದ ಕುರುಬರು ಈ ಚುನಾವಣೆ ಮೂಲಕ ಮತ್ತೆ ‘ತೆನೆ ಹೊತ್ತ ಮಹಿಳೆ’ಯತ್ತ ವಾಲುತ್ತಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಇಷ್ಟೇ ಅಲ್ಲದೇ ಕೆಲವು ಕಡೆ ಮುಸ್ಲಿಮರು, ನಾಯಕರು, ಉಪ್ಪಾರರು, ದಲಿತರು ಸಹ ಜೆಡಿಎಸ್‌ಗೆ ‘ಜೈ’ ಎಂದಿದ್ದಾರೆ.

ಅಭದ್ರಕೋಟೆ: ಮೈಸೂರು ಜಿಲ್ಲೆ ತನ್ನ ಭದ್ರಕೋಟೆ ಎಂದು ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಕಾಂಗ್ರೆಸ್‌ಗೆ ಹೆಚ್ಚು ಹೊಡೆತ ಬಿದ್ದಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಘಟಾನುಘಟಿಗಳು ಜಿಲ್ಲೆಯಲ್ಲಿದ್ದರು. ಅಲ್ಲದೇ ಕಳೆದ ಬಾರಿ ಜಿಲ್ಲಾ ಪಂಚಾಯಿತಿ ತನ್ನ ವಶದಲ್ಲೇ ಇದ್ದ ಕಾರಣಕ್ಕಾಗಿ ‘ನಮ್ಮನ್ನು ಸೋಲಿಸಲು ಸಾಧ್ಯವೇ ಇಲ್ಲ’ ಎನ್ನುವಂತೆ ಕಾಂಗ್ರೆಸ್ಸಿಗರು ವರ್ತಿಸುತ್ತಿದ್ದರು.

ಚುನಾವಣೆಗೆ ಪೂರ್ವ ಸಿದ್ಧತೆ ಸರಿಯಾಗಿರಲಿಲ್ಲ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಗೊಂದಲ ಹೆಚ್ಚಾ ಯಿತು. ಗೆಲ್ಲುವ ಅಭ್ಯರ್ಥಿಗಳನ್ನು ಬಿಟ್ಟು ಬೇರೆ ಬೇರೆ ಕಾರಣಕ್ಕಾಗಿ ಅನ್ಯರಿಗೆ ಟಿಕೆಟ್ ನೀಡಿದ್ದು, ಐದು ಕ್ಷೇತ್ರ   ಗಳಲ್ಲಿ ಬಂಡಾಯ ಅಭ್ಯರ್ಥಿಗಳ ಮನವೊಲಿಸುವಲ್ಲಿ ಮಾಡಿದ ನಿರ್ಲಕ್ಷ್ಯ, ಕಾಂಗ್ರೆಸ್‌ನ ಒಂದಿಷ್ಟು ಮತಗಳು ಜೆಡಿಎಸ್ ಮತ್ತು ಬಿಜೆಪಿನತ್ತ ವಾಲಿದ್ದು ಕಾಂಗ್ರೆಸ್ ಕೋಟೆ ಅಭದ್ರಗೊಳ್ಳಲು ಕಾರಣವಾಯಿತು.

ಕಾಂಗ್ರೆಸ್‌ನವರು ಮಲ್ಲಹಳ್ಳಿ (ಬೀರಿಹುಂಡಿ), ಬಿಳಿಗೆರೆ ಸೇರಿದಂತೆ ನಾಲ್ಕು ಕ್ಷೇತ್ರಗಳನ್ನು ತಾವಾಗಿಯೇ ಕೈ ಚೆಲ್ಲಿದರು. ಬಂಡಾಯಗಾರರು ಕಾಂಗ್ರೆಸ್‌ನ ‘ಓಟ’ಕ್ಕೆ ಅಡ್ಡಗಾಲು ಹಾಕಿದರು.
‘ನಾವು ಇಂತಹ ಫಲಿತಾಂಶವನ್ನು ನಿರೀಕ್ಷಿಸಿರಲಿಲ್ಲ. ಅಧಿಕಾರ ಹಿಡಿಯುವ ಆತ್ಮವಿಶ್ವಾಸವಿತ್ತು. ‘ಬಿ’ ಫಾರ್ಮ್ ಕೊಡುವ ದಿನ ಕೆಲವರು ಪಕ್ಷ ಬಿಟ್ಟು ಹೋದರು. ಆ ಮೇಲೆ ಕೆಲವು ಕಡೆ ನಮ್ಮ ಅಭ್ಯರ್ಥಿಗಳು ಕ್ಷೇತ್ರ ಬದಲಿಸಿದರು. ಇವೆಲ್ಲ ಕಾರಣದಿಂದ ನಿರೀಕ್ಷಿತ ಸ್ಥಾನಗಳು ಬರಲಿಲ್ಲ’ ಎನ್ನುವುದು ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಆರ್.ಧರ್ಮಸೇನಾ ಅವರ ಅಭಿಪ್ರಾಯ. ಕಾಂಗ್ರೆಸ್ ಕೋಟೆ ಅಭದ್ರವಾಗಿದೆ, ಜೆಡಿಎಸ್ ತೆನೆ ತುಂಬಿಕೊಂಡಿದೆ, ಬಿಜೆಪಿ ಕಮಲ ಅರಳಿದೆ. ಮುಂದೆ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.