ಮೈಸೂರು: 100 ಎಂದರೆ `ಶತಕ'. ಆದರೆ ಇದೇ ಸಂಖ್ಯೆಗೆ `ಸಂತಾಪ' ಎಂಬ ಅರ್ಥವೂ ಇದೆ!
ಹೌದು: ಜುಲೈ 15ರಂದು `ಗುಡ್‌ಬೈ' ಹೇಳಲಿರುವ ಟೆಲಿಗ್ರಾಮ್ ಭಾಷೆಯಲ್ಲಿ 100 ಎಂದರೆ ನಿಧನರಾದವರಿಗೆ ಶ್ರದ್ಧಾಂಜಲಿ ಅಥವಾ ಸಂತಾಪ ಸೂಚಿಸುವ ಸಂಕೇತ.
ಟೆಲಿಗ್ರಾಮ್ ಅಂತ್ಯದೊಂದಿಗೆ ಇಂತಹ 44 ಸಂಕೇತ ಸಂಖ್ಯೆಗಳು ಮತ್ತು ಅವುಗಳ ಸ್ವಾರಸ್ಯಗಳೂ ಕೊನೆಯಾಗಲಿವೆ. ಮೊಬೈಲ್, ಪೇಜರ್‌ಗಳ ಅವಿಷ್ಕಾರಕ್ಕೆ ಮುನ್ನ ಅತ್ಯಂತ ವೇಗದ ಸಂವಹನ ಮೂಲವಾಗಿದ್ದ ಟೆಲಿಗ್ರಾಮ್ ಇಂದಿನ `ಎಸ್‌ಎಂಎಸ್' ಚುಟುಕು ಸಂದೇಶಗಳೊಂದಿಗೆ ಸ್ಪರ್ಧಿಸದೇ ಕೊನೆಯುಸಿರು ಎಳೆಯುತ್ತಿದೆ. ಇದರೊಂದಿಗೆ 150 ವರ್ಷಗಳ ಸಾಧನವೊಂದು ಇತಿಹಾಸ ಸೇರಲಿದೆ.
ಮೈಸೂರು ಅರಮನೆ ಎದುರಿಗೆ ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಮೋತಿ ಖಾನ್ ಕಟ್ಟಡದಲ್ಲಿರುವ ಕೇಂದ್ರ ಟೆಲಿಗ್ರಾಫ್ ಕಚೇರಿಯಲ್ಲಿ (ಸಿಟಿಒ) ಈ ಸಂಕೇತಗಳ ಪಟ್ಟಿಯನ್ನು ಹಾಕಲಾಗಿದೆ. ಅದರಲ್ಲಿ 100 ಎಂದರೆ, ನನ್ನ ತೀವ್ರ ಸಂತಾಪ; 1 ಎಂದರೆ ದೀಪಾವಳಿಯ ಹೃತ್ಪೂರ್ವಕ ಶುಭಾಶಯಗಳು; 8 ಎಂದರೆ ಮದುವೆಯ ಶುಭಾಶಯಗಳು; 12 ಎಂದರೆ ಯಶಸ್ಸಿಗಾಗಿ ಶುಭ ಕಾಮನೆಗಳು; 16 ಎಂದರೆ ನವವಿವಾಹಿತ ಜೋಡಿಗೆ ನನ್ನ ಹೃತ್ಪೂರ್ವಕ ಶುಭಕಾಮನೆಗಳು, 17 ಎಂದರೆ ಇಬ್ಬರಿಗೂ ಸಂತಸ ಮತ್ತು ಸಮೃದ್ಧಿ ತುಂಬಿದ ದಾಂಪತ್ಯ ಜೀವನ ಸಿಗಲಿ; 25 ಎಂದರೆ ನವಜೋಡಿಗೆ ಶುಭಕಾಮನೆಗಳು ಎಂಬ ಅರ್ಥಗಳು ಇವೆ. ಇದರಲ್ಲಿ 100 ಕೊನೆಯ ಅಂದರೆ 44ನೇ ಸಂಕೇತ.
`ಮೈಸೂರಿನ ಟೆಲಿಗ್ರಾಮ್ ಸೇವೆಗೂ 160 ವರ್ಷಗಳ ಸುದೀರ್ಘ ಇತಿಹಾಸವಿದೆ. ನಿಖರವಾದ ದಿನಾಂಕ ಗೊತ್ತಿಲ್ಲ' ಎಂದು ಹೇಳುವ ಸಿಟಿಓ ಉಸ್ತುವಾರಿ ಮಾಲೆಗಪ್ಪ, ಅವರಿಗೆ ಇನ್ನೂ ಟೆಲಿಗ್ರಾಮ್ ಬಂದ್ ಆಗುವ ಬಗ್ಗೆ ಸರ್ಕಾರಿ ಅದೇಶ ಬಂದಿಲ್ಲ. ಕಳೆದ ಐದು ವರ್ಷಗಳಿಂದ ಟೆಲಿಗ್ರಾಮ್ ಸೇವೆ ಪಡೆಯಲು ಹೆಚ್ಚಿನ ಗ್ರಾಹಕರು ಒಲವು ತೋರುತ್ತಿಲ್ಲ. ಇಂಟರ್‌ನೆಟ್, ಮೊಬೈಲ್ ಎಸ್‌ಎಂಎಸ್ ಜಮಾನದಲ್ಲಿ ಅದರ ಅಗತ್ಯವೂ ಹೆಚ್ಚಿನವರಿಗೆ ಇಲ್ಲ.
`ಇವತ್ತಿನ ಉದಾಹರಣೆಯನ್ನೇ ನೋಡಿ. ಈಗ ಸಮಯ 1.30 ಇಲ್ಲಿಯವರೆಗೂ ಒಬ್ಬೇ ಒಬ್ಬ ಗ್ರಾಹಕ ಬಂದಿಲ್ಲ. ಆದರೆ, ಒಂದು ಕಾಲದಲ್ಲಿ ಈ ಸೇವೆಗಾಗಿ ದೊಡ್ಡ ಸಾಲು ಇರುತ್ತಿತ್ತು' ಎಂದು ಗುರುವಾರ ಸಿಟಿಓ ಸಿಬ್ಬಂದಿ ಸ್ಮರಿಸಿದರು.
`1965ರದಲ್ಲಿ ಕನಿಷ್ಠ 10 ಶಬ್ದಗಳ ಟೆಲಿಗ್ರಾಮ್ ನೀಡಬೇಕಿತ್ತು. ಅದಕ್ಕೆ 1.50 ರೂಪಾಯಿ, ಮಹತ್ವದ ಶಬ್ದಕ್ಕೆ 2 ರೂ, 2.50 ರೂ ಅಥವಾ 3.50 ರೂಪಾಯಿ ಶುಲ್ಕ ಪಡೆಯಲಾಗುತ್ತಿತ್ತು. 1997ರಲ್ಲಿ ಈ ಶುಲ್ಕದ ಮೇಲೆ ತೆರಿಗೆಯನ್ನೂ ವಿಧಿಸಲಾಯಿತು. ಆಗಿನ ಸಂದರ್ಭದಲ್ಲಿ ಟೆಲಿಗ್ರಾಮ್‌ಗಾಗಿಯೇ ಐದಾರು ಕೌಂಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು' ಎಂದು ಇಲಾಖೆಯ ನಿವೃತ್ತ ನೌಕರ ನಾರಾಯಣ್ ನೆನಪಿಸಿಕೊಳ್ಳುತ್ತಾರೆ.
ಟೆಲಿಗ್ರಾಮ್ ಸಂದೇಶವು ನಿರ್ದೇಶಿತ ವಿಳಾಸಕ್ಕೆ ತಲುಪಿಸಲು ಸಂದೇಶವಾಹಕರನ್ನು ನೇಮಿಸಿಕೊಳ್ಳಲಾಗಿತ್ತು. ಅಂತಹ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ, ಹತ್ತು ವರ್ಷಗಳ ಹಿಂದೆ ನಿವೃತ್ತರಾದವರೊಬ್ಬರು ಹೇಳುವ ಪ್ರಕಾರ, `ಮೂರು ಗಂಟೆಗಳಲ್ಲಿ ಐವತ್ತು ಸಂದೇಶಗಳನ್ನು ಸಂಬಂಧಪಟ್ಟವರಿಗೆ ತಲುಪಿಸುವ ಗುರಿಯನ್ನು ನಮಗೆ ನೀಡಲಾಗುತ್ತಿತ್ತು' ಎಂದು ಹೇಳುತ್ತಾರೆ.
ಒಂದು ವೇಳೆ ಸಂದೇಶವು ಸಂಬಂಧಪಟ್ಟವರಿಗೆ ತಲುಪದಿದ್ದರೆ, ಅವರು ಕಾರಣವನ್ನು ಇಲಾಖೆಗೆ ತಿಳಿಸುವುದು ಕಡ್ಡಾಯವಾಗಿತ್ತು. ಈ ಸಂದೇಶವಾಹಕರನ್ನು `ಟೆಲಿಗ್ರಾಫ್ ಮ್ಯಾನ್' ಅಥವಾ `ಫೋನ್‌ಮೆಕ್ಯಾನಿಕ್ಸ್' ಎಂದು ಕರೆಯಲಾಗುತ್ತಿತ್ತು. ಅವರಿಗೆಲ್ಲ ವಿಶೇಷ ತರಬೇತಿ ನೀಡಲಾಗಿರುತ್ತಿತ್ತು. 2005ರಿಂದ ಈಚೆಗೆ ಈ ಕೆಲಸಗಾರರನ್ನು ಖಾಸಗಿ ಸಂಸ್ಥೆಗಳಿಂದ ಹೊರಗುತ್ತಿಗೆ ಪಡೆಯಲಾಗುತ್ತಿತ್ತು.
ಪ್ರಸ್ತುತ ನಗರ ವ್ಯಾಪ್ತಿ ಮತ್ತು ಹೊರಗಿನ ಟೆಲಿಗ್ರಾಮ್‌ಗಳನ್ನು ಸಾಮಾನ್ಯ ಅಂಚೆಯ ಮೂಲಕವೇ ಕಳಿಸಲಾಗುತ್ತಿದೆ. ಆದರೆ, ಮೊದಲಿನಷ್ಟು ಸಂಖ್ಯೆಯಲ್ಲಿ ಈಗ ಟೆಲಿಗ್ರಾಮ್ ಕಳುಹಿಸುವವರು ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.