ADVERTISEMENT

ತಂಬಾಕಿಗೆ ದಂಡ: ಬೆಳೆಗಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 8:20 IST
Last Updated 3 ಜನವರಿ 2012, 8:20 IST

ಹುಣಸೂರು: ತಂಬಾಕು ಪರವಾನಗಿ ಇಲ್ಲದ ಬೆಳೆಗಾರರಿಗೆ ಹರಾಜು ಮಾರುಕಟ್ಟೆಯಲ್ಲಿ ಹೆಚ್ಚುವರಿ ದಂಡ ವಿಧಿಸುತ್ತಿರುವ ಮಾರುಕಟ್ಟೆ ವ್ಯವಸ್ಥೆಯನ್ನು ವಿರೋಧಿಸಿ ಪರವಾನಗಿ ರಹಿತ ತಂಬಾಕು ಬೆಳೆಗಾರರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ತಂಬಾಕು ಬೆಳೆಗಾರರಿಗೆ ಒಂದಲ್ಲ ಒಂದು ರೀತಿಯಾಗಿ ಮಂಡಳಿ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ. ಪರವಾನಗಿ ಇಲ್ಲದ ರೈತರ ಶೋಷಣೆ ಪ್ರತಿಯೊಂದು ಹಂತದಲ್ಲಿ ನಡೆಯುತ್ತಿದ್ದು, ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಮಾರಾಟ ಮಾಡಲು ಶೇ 22.5 ಮತ್ತು ಪ್ರತಿ ಕೆ.ಜಿ.ಗೆ ರೂ. 2 ದಂಡ ತೆರಬೇಕಾಗಿದೆ~ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಆರೋಪಿಸಿದರು.

`ಪರವಾನಗಿ ಇಲ್ಲದ ತಂಬಾಕು ಬೆಳೆಗಾರರಿಗೂ ಹರಾಜು ಮಾರುಕಟ್ಟೆಯಲ್ಲಿ ನೇರವಾಗಿ ಭಾಗವಹಿಸುವ ಅವಕಾಶ ಕಲ್ಪಿಸುತ್ತಿಲ್ಲ. ಮಾರುಕಟ್ಟೆ ಅಂತ್ಯದಲ್ಲಿ ಅವಕಾಶ ಕಲ್ಪಿಸುವುದರಿಂದ ಪರವಾನಗಿ ಇಲ್ಲದ ರೈತರ ತಂಬಾಕು ಗುಣಮಟ್ಟ ಕಳೆದುಕೊಳ್ಳುತ್ತಿದೆ~ ಎಂದರು.

ಪ್ರಸಕ್ತ ಸಾಲಿನಲ್ಲಿ ತಂಬಾಕಿಗೆ ಬೆಲೆ 80 ರಿಂದ 90 ರೂಪಾಯಿ ದರ ನೀಡಲಾಗುತ್ತಿದೆ. ಆದರೆ, ದರ ಇಲ್ಲದ ತಂಬಾಕಿಗೆ ಶೇ 22.5 ರಷ್ಟು ದಂಡ ವಿಧಿಸಲಾಗುತ್ತಿದೆ. ಇದರಿಂದ ಪರವಾನಗಿ ಇಲ್ಲದ ರೈತರಿಗೆ ಬೆಳೆಗೆ ಹಾಕಿದ ಖರ್ಚು ಕೂಡ ಸಿಗುತ್ತಿಲ್ಲ. ರೈತರ ಸ್ಥಿತಿ ಚಿಂತಾಜನಕವಾಗಿದೆ ಎಂದು ದೂರಿದರು.

ಪರವಾನಗಿ ಇಲ್ಲದ ಬೆಳೆಗಾರರೂ ಹರಾಜು ಮಾರುಕಟ್ಟೆಯಲ್ಲಿ ನೇರ ವಹಿವಾಟು ನಡೆಸಲು 2004ರಲ್ಲೇ ಆದೇಶ ನೀಡಿದ್ದೆ. ಮಂಡಳಿ ಕೂಡ ಇದನ್ನು 2008ರಲ್ಲಿ ಜಾರಿಗೆ ತಂದಿದೆ. ಆದರೂ ಈ ರೈತರ ಶೋಷಣೆ ನಿಂತಿಲ್ಲ ಎಂದರು.

ಬೆಲೆ: ತಂಬಾಕು ಬೆಲೆ ನೀಡುವ ವಿವಿಧ ಕಂಪೆನಿಗಳು ಅವರಿಗೆ ತೋಚಿದಂತೆ ಬೆಲೆ ನಿಗದಿ ಮಾಡುತ್ತಿವೆ. ಆದರೆ ಪರವಾನಗಿ ಇಲ್ಲದ ತಂಬಾಕಿಗೆ ಬೆಲೆ ನಿಗದಿ ಮಾಡುವವರಾರು ಎಂದು ಪ್ರಶ್ನಿಸಿದ ರೈತರು, ತಂಬಾಕು ಮಾರುಕಟ್ಟೆ ಅಧಿಕಾರಿಗಳೇ ಹರಾಜು ಕೂಗಬೇಕು. ಒಂದು ದರ ನಿಗದಿಗೊಂಡ ಬಳಿಕ ಅದರಂತೆ ಎಲ್ಲಾ ತಂಬಾಕಿಗೆ ದರ ನೀಡಬೇಕು, ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೂ ಬ್ಯಾಂಕ್ ಸಾಲ ನೀಡುವ ಸೌಕರ್ಯ, ಹರಾಜು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡ ಹರಿಹರ ಆನಂದಸ್ವಾಮಿ, ಕರ್ನಾಟಕ ರಾಜ್ಯ ತಂಬಾಕು ಬೆಳೆಗಾರರ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಗೋವಿಂದಯ್ಯ, ಪ್ರಧಾನ ಕಾರ್ಯದರ್ಶಿ ಬಸವರಾಜು, ಉಪಾಧ್ಯಕ್ಷ ಕೃಷ್ಣನಾಯಕ, ವೀರತಪ್ಪ ಮತ್ತು ನೂರಾರು ತಂಬಾಕು ಬೆಳೆಗಾರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.