ADVERTISEMENT

ತರಕಾರಿ ದುಬಾರಿ: ಗ್ರಾಹಕರ ಜೇಬಿಗೆ ಕತ್ತರಿ!

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 8:21 IST
Last Updated 10 ಜೂನ್ 2013, 8:21 IST
ಮೈಸೂರಿನ ನಂಜುಮಳಿಗೆಯ ಸಮೀಪ ರಸ್ತೆಬದಿಯಲ್ಲಿ ತರಕಾರಿ ಮಾರುವ ವ್ಯಾಪಾರಸ್ಥರು.
ಮೈಸೂರಿನ ನಂಜುಮಳಿಗೆಯ ಸಮೀಪ ರಸ್ತೆಬದಿಯಲ್ಲಿ ತರಕಾರಿ ಮಾರುವ ವ್ಯಾಪಾರಸ್ಥರು.   

ಮೈಸೂರು: ಜನಸಾಮಾನ್ಯರಿಗೆ ಕೈಗೆಟುಕದ `ಚಿನ್ನ'ದ ಬೆಲೆಯೇ ಗಣನೀಯವಾಗಿ ಇಳಿಮುಖವಾಗುತ್ತಿರುವ ಹೊತ್ತಿನಲ್ಲಿ, ಪ್ರತಿನಿತ್ಯದ ಅಡುಗೆಗೆ ಅಗತ್ಯವಾದ `ತರಕಾರಿ' ಬೆಲೆಗಳು ಬಹುತೇಕ ದ್ವಿಗುಣವಾಗಿ ಗ್ರಾಹಕರ ಕೈ ಸುಡುತ್ತಿವೆ.

ಮೇ ತಿಂಗಳ ಕೊನೆಯ ವಾರದಿಂದ ಗಗನಮುಖಿಯಾದ ತರಕಾರಿ ಬೆಲೆಗಳು ಸದ್ಯಕ್ಕೆ ಇಳಿಕೆಯಾಗುವ ಲಕ್ಷಣ ಕಾಣುತ್ತಿಲ್ಲ. ವಾರದಿಂದ ವಾರಕ್ಕೆ ಹೆಚ್ಚಳವಾಗುತ್ತಿರುವ ತರಕಾರಿ ದರ ಕೇಳಿ ಗ್ರಾಹಕರು ಬೆಚ್ಚಿ ಬೀಳುತ್ತಿದ್ದಾರೆ. ಪರ್ಸ್ ತುಂಬ ದುಡ್ಡು ತೆಗೆದುಕೊಂಡು ಹೋಗಿ ಬ್ಯಾಗ್ ತುಂಬ ತರಕಾರಿ ತರುವ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ಗೃಹಿಣಿಯರು. ಒಟ್ಟಿನಲ್ಲಿ ಕೆ.ಜಿ. ಗಟ್ಟಲೇ ತರಕಾರಿ ಕೊಳ್ಳುವವರು ಗ್ರಾಂ ಲೆಕ್ಕದಲ್ಲಿ ಕೊಳ್ಳುವಂತಾಗಿದೆ.

ಟೊಮೆಟೊಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಅವುಗಳನ್ನು ರಸ್ತೆಗಳಲ್ಲಿ ಸುರಿದು ರೈತರು ಪ್ರತಿಭಟಿಸಿರುವುದನ್ನು ನೋಡಿರುವ ಜನತೆ, ಪ್ರಸ್ತುತ ಟೊಮೆಟೊ ಬೆಲೆ ಕೇಳಿ ಸುಸ್ತಾಗುತ್ತಿದ್ದಾರೆ. ಸಾಮಾನ್ಯವಾಗಿ ಕೆ.ಜಿ.ಗೆ 5ರಿಂದ 15 ರೂಪಾಯಿಗೆ ಸಿಗುತ್ತಿದ್ದ ಟೊಮೆಟೊ ವಾರದ ಹಿಂದೆ ಕೆ.ಜಿ.ಗೆ 30 ರೂಪಾಯಿಗೆ ಏರಿಕೆಯಾಗಿತ್ತು. ಈಗ ಬರೋಬ್ಬರಿ 60-80 ರೂಪಾಯಿಗೆ ಹೆಚ್ಚಳವಾಗಿದೆ. ದೈನಂದಿನ ಅಡುಗೆಗೆ ಟೊಮೆಟೊ ಬದಲಿಗೆ ಹುಣಸೇಹಣ್ಣು ಬಳಸುವುದೇ ಸೂಕ್ತ ಎನ್ನುವ ತೀರ್ಮಾನಕ್ಕೆ ಮಹಿಳೆಯರು ಬಂದರೂ ಆಶ್ಚರ್ಯವೇನಿಲ್ಲ. ದಿನಸಿ ಪದಾರ್ಥಗಳ ಬೆಲೆಗಳು ಗಗನಕ್ಕೆ ಏರಿರುವ ಸಂದರ್ಭದಲ್ಲಿ ತರಕಾರಿ ದರಗಳೂ ದುಬಾರಿಯಾಗಿರುವುದು ಬಡ ಮತ್ತು ಮಧ್ಯಮ ವರ್ಗದ ಜನತೆಯನ್ನು ಕಂಗೆಡಿಸಿದೆ.

ತಿಂಗಳ ಹಿಂದೆ ಕೆ.ಜಿ.ಗೆ 50 ರೂಪಾಯಿ ಇದ್ದ ಹುರುಳಿಕಾಯಿ ಈಗ ರೂ 80 ಆಗಿದೆ. ಕ್ಯಾರೆಟ್ ರೂ 40ರಿಂದ 50, ಹೂಕೋಸು ರೂ 22ರಿಂದ 30, ಎಲೆಕೋಸು ರೂ 8ರಿಂದ 16, ಆಲೂಗೆಡ್ಡೆ ರೂ 18ರಿಂದ 25, ಈರುಳ್ಳಿ ರೂ 18ರಿಂದ 24, ಬೆಳ್ಳುಳ್ಳಿ ರೂ 30ರಿಂದ 80, ಬೂದುಗುಂಬಳ ರೂ 5ರಿಂದ 12 ಹೀಗೆ ಬಹುತೇಕ ತರಕಾರಿ ಬೆಲೆಗಳು ದ್ವಿಗುಣವಾಗಿವೆ.

ಇನ್ನು ಕೊತ್ತಂಬರಿ, ಸಬ್ಬಸಿಗೆ, ಮೆಂತ್ಯ, ದಂಟು, ಪಾಲಕ್, ಪುದೀನ ಮುಂತಾದ ಸೊಪ್ಪುಗಳು ಕಂತೆ (ಕಟ್ಟು)ಗೆ 2ರಿಂದ 3 ರೂಪಾಯಿವರೆಗೂ ಹೆಚ್ಚಳವಾಗಿವೆ. ಅದರಲ್ಲೂ ಶುಂಠಿ ಕಳೆದ ತಿಂಗಳು ಕೆ.ಜಿ.ಗೆ 25ರಿಂದ 30 ರೂಪಾಯಿ ಇದ್ದದ್ದು, ಈಗ ಬರೋಬ್ಬರಿ ರೂ 160-180 ತಲುಪಿದೆ. ಮುಂಗಾರು ಮಳೆ ಉತ್ತಮವಾಗಿ ಸುರಿದರೆ ತರಕಾರಿ ಬೆಲೆಗಳು ಇಳಿಕೆಯಾಗುತ್ತವೆ ಎನ್ನುವ ಆಶಾಭಾವನೆ ಗ್ರಾಹಕರಲ್ಲಿ ಇದೆ.

`ಮೊಟ್ಟೆ ಒಂದಕ್ಕೆ 3.10 ರೂಪಾಯಿಯಿಂದ 3.70ಕ್ಕೆ ಏರಿಕೆಯಾಗಿದೆ. ಚಿಲ್ಲರೆ ಅಂಗಡಿಗಳಲ್ಲಿ 1 ರೂಪಾಯಿ ಏರಿಕೆಯಾಗಿದೆ. ಆದರೆ ಹಣ್ಣುಗಳ ಬೆಲೆಯಲ್ಲಿ ಒಂದೆರೆಡು ವಾರಗಳಿಂದ ಅಂಥ ಗಣನೀಯ ಬದಲಾವಣೆ ಏನೂ ಆಗಿಲ್ಲ' ಎನ್ನುತ್ತಾರೆ ವ್ಯಾಪಾರಿ ರಾಘವೇಂದ್ರ.

ರಾಜ್ಯದ ಕೆಲವೆಡೆ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಬಿದ್ದಿದ್ದರೂ ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ವಾಡಿಕೆ ಮಳೆಗಿಂತ ಈ ಬಾರಿ ಕಡಿಮೆ ಮಳೆಯಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ತರಕಾರಿ ಬೆಳೆಗಳು ಒಣಗಿ ರೈತರಿಗೆ ನಷ್ಟ ಉಂಟಾಗುತ್ತಿದೆ. ಕೊಳವೆಬಾವಿಗಳಿಂದ ಸಾಕಷ್ಟು ನೀರು ಪೂರೈಕೆಯಾಗದೆ ತರಕಾರಿ ಬೆಳೆಯುವ ಪ್ರಮಾಣ ಹಾಗೂ ಇಳುವರಿ ಎರಡೂ ಕಡಿಮೆಯಾಗಿದೆ.

`ಕೆ.ಆರ್. ನಗರ, ಎಚ್.ಡಿ. ಕೋಟೆ, ಸಾಲುಂಡಿ, ಪಿರಿಯಾಪಟ್ಟಣ, ಹುಣಸೂರು ಮುಂತಾದ ಭಾಗದ ಕೆಲವು ರೈತರು ಹೆಚ್ಚಿನ ಬೆಲೆ ದೊರೆಯುತ್ತದೆ ಎಂಬ ಉದ್ದೇಶದಿಂದ ತರಕಾರಿಗಳನ್ನು ಕೇರಳ ಮಾರುಕಟ್ಟೆಗೆ ಕಳುಹಿಸುತ್ತಾರೆ. ಇನ್ನು ಕೆಲವರು ಬೆಂಗಳೂರು ಮಾರುಕಟ್ಟೆಗೆ ಕಳುಹಿಸುವುದರಿಂದ ಮೈಸೂರಿನ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆ ಕಡಿಮೆಯಾಗುತ್ತಿದೆ. ಇಷ್ಟೆಲ್ಲ ಬೆಲೆ ಏರಿಕೆಯಾಗಿದ್ದರೂ, ಪೂರ್ಣ ಪ್ರಮಾಣದ ಲಾಭ ರೈತರಿಗೆ ದೊರೆಯದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ರೈತರಿಂದ ಗ್ರಾಹಕರಿಗೆ ನೇರವಾಗಿ ಎಲ್ಲೆಡೆ ತರಕಾರಿ ದೊರೆಯುವ ವ್ಯವಸ್ಥೆ ಮಾಡಿದರೆ ಕಡಿಮೆ ದರದಲ್ಲಿ ಗ್ರಾಹಕರಿಗೆ ತರಕಾರಿ ದೊರೆತು, ರೈತರಿಗೂ ಹೆಚ್ಚಿನ ಲಾಭ ಸಿಗುತ್ತದೆ' ಎನ್ನುತ್ತಾರೆ ಬಾನುಲಿ ಕೃಷಿಕರ ಉತ್ಪಾದಕರ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಕೆ. ವೆಂಕಟೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.