ADVERTISEMENT

ನಂಜನಗೂಡು: ಕಪಿಲಾ ಪ್ರವಾಹ ಇಳಿಮುಖ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 9:10 IST
Last Updated 3 ಸೆಪ್ಟೆಂಬರ್ 2011, 9:10 IST

ನಂಜನಗೂಡು: ಕೇರಳದ ವೈನಾಡಿನಲ್ಲಿ ಈಚೆಗೆ ಸತತ ಬೀಳುತ್ತಿದ್ದ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕಪಿಲಾ ನದಿಯಲ್ಲಿ ಉಂಟಾಗಿದ್ದ ಪ್ರವಾಹ ಶುಕ್ರವಾರ ಸಂಜೆ ಹೊತ್ತಿಗೆ ಇಳಿಮುಖಗೊಂಡಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಕಪಿಲಾ ಜಲಾಶಯದಲ್ಲಿ ಶುಕ್ರವಾರ ಬೆಳಿಗ್ಗೆ ನೀರಿನ ಒಳ ಹರಿವಿನ ಪ್ರಮಾಣ 28,053 ಕ್ಯೂಸೆಕ್, ಹೊರ ಹರಿವು 38,000 ಕ್ಯೂಸೆಕ್ ಆಗಿತ್ತು. ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಸಂಜೆ ಹೊತ್ತಿಗೆ ಜಲಾಶಯಕ್ಕೆ 24 ಸಾವಿರ ಕ್ಯೂಸೆಕ್ ಒಳ ಹರಿವು ಬರುತ್ತಿದ್ದು, 15 ಸಾವಿರ ಕ್ಯೂಸೆಕ್ ನೀರು ನದಿಗೆ ಹೊರ ಬಿಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಜ ಲಾಶಯದ ಪೂರ್ಣ ಮಟ್ಟ 2284 ಅಡಿ. ಶುಕ್ರವಾರದ ಮಟ್ಟ 2282.38 ಅಡಿ (ಸರಾಸರಿ ಸಮುದ್ರ ಮಟ್ಟದಿಂದ).  

ಕಪಿಲಾ ಪ್ರವಾಹ: ಬತ್ತ ನಾಟಿ ಪೈರು ನಾಶ
ಸುತ್ತೂರು: ಕಪಿಲಾ ನದಿಯ ಪ್ರವಾಹದಿಂದ ಸಾವಿರಾರು ಎಕರೆ ಬತ್ತದ ನಾಟಿ ಗದ್ದೆಗೆ ನೀರು ನುಗ್ಗಿ ಕೋಟ್ಯಂತರ ರೂ. ರೈತರಿಗೆ ನಷ್ಟ ಉಂಟಾಗಿದೆ.

ಗುರುವಾರ ರಾತ್ರಿ ದಿಢೀರನೆ ನೀರು ನುಗ್ಗಿ ಗದ್ದೆಯಲ್ಲಿದ್ದ ಎಲ್ಲ ಬತ್ತದ ಪೈರನ್ನು ಕೊಚ್ಚಿಕೊಂಡು ಹೋಗಿದೆ. ರೈತರು ಸಾಲ ಮಾಡಿ ನಾಟಿ ಮಾಡಿದ್ದರು. ಬಕ್ಕಳ್ಳಿ, ಹದಿನಾರು, ಮೂಡಹಳ್ಳಿ, ನಗರ್ಲೆ, ಕುಪ್ಪರನಹಳ್ಳಿ, ಆಲತ್ತೂರು, ಹೊಸಕೋಟೆ, ಸುತ್ತೂರು, ಬಿಳುಗಲಿ, ತಾಯೂರು ಮುಂತಾದ ಗ್ರಾಮಗಳ ರೈತರು ಕಬಿನಿ ನದಿಯ ಪ್ರವಾಹದಿಂದ ನಾಟಿ ಪೈರು ಇಲ್ಲದೆ ಕಂಗಾಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.