ADVERTISEMENT

ನಗರ ಬೆಳೆದರೂ ಉದ್ಯಾನಕ್ಕಿಲ್ಲ ಆದ್ಯತೆ

ಹುಣಸೂರಿನ ಹಿರಿಯ ನಾಗರಿಕರು, ಮಕ್ಕಳನ್ನು ಕಾಡುತ್ತಿದೆ ಉದ್ಯಾನದ ಕೊರತೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 9:52 IST
Last Updated 3 ಜೂನ್ 2018, 9:52 IST
ಹುಣಸೂರು ನಗರ ವ್ಯಾಪ್ತಿಯಲ್ಲಿ ನಗರಸಭೆ ಮೀಸಲಿಟ್ಟ ಉದ್ಯಾನದಲ್ಲಿ ಮೂಲ ಸೌಲಭ್ಯ ಇಲ್ಲದಿರುವುದು
ಹುಣಸೂರು ನಗರ ವ್ಯಾಪ್ತಿಯಲ್ಲಿ ನಗರಸಭೆ ಮೀಸಲಿಟ್ಟ ಉದ್ಯಾನದಲ್ಲಿ ಮೂಲ ಸೌಲಭ್ಯ ಇಲ್ಲದಿರುವುದು   

ಹುಣಸೂರು: ನಗರಸಭೆ ಆಗಿ ಘೋಷಣೆಗೊಂಡು ವರ್ಷ ಉರುಳಿದರೂ ನಗರದ ಜನಸಂಖ್ಯೆಗೆ ಅನುಗುಣವಾಗಿ ಉದ್ಯಾನ ನಿರ್ಮಿಸು ವಲ್ಲಿ ನಗರಸಭೆ ಆಡಳಿತ ವಿಫಲವಾಗಿದೆ.

ಜನಸಂಖ್ಯೆಗೆ ಅನುಗುಣವಾಗಿ ಉದ್ಯಾನ ನಿರ್ಮಿಸಬೇಕು ಎಂಬ ಸೂಚನೆ ಇದ್ದರೂ, ನಗರಸಭೆ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಗರ ಶರವೇಗದಲ್ಲಿ ಬೆಳೆಯುತ್ತಿದ್ದು, ಕೇಂದ್ರ ಬಸ್‌ ನಿಲ್ದಾಣದಿಂದ 3 ರಿಂದ 4 ಕಿ.ಮೀ ದೂರದವರೆಗೆ ವಿವಿಧ ಬಡಾವಣೆಗಳು ಅಭಿವೃದ್ಧಿಗೊಂಡಿದ್ದು ಜನಸಂಖ್ಯೆ ಹೆಚ್ಚಾಗುತ್ತಿದೆ.

2011ರ ಜನಗಣತಿಯಂತೆ 50 ಸಾವಿರ ಇದ್ದ ನಗರದ ಜನಸಂಖ್ಯೆ 2017–18ರಲ್ಲಿ 57 ಸಾವಿರಕ್ಕೆ ಮುಟ್ಟಿದೆ. ನಗರಸಭೆ ವ್ಯಾಪ್ತಿ ವಿಸ್ತರಣೆಯಾಗಿದ್ದರೂ, ಜನರಿಗೆ ಅಗತ್ಯಬೇಕಿರುವ ಮೂಲ ಸೌಲಭ್ಯ ಒದಗಿಸುವಲ್ಲಿ ನಗರಸಭೆ ವಿಫಲವಾಗಿದೆ ಎನ್ನುತ್ತಾರೆ ಸ್ಥಳೀಯ ನಾಗರಿಕರು.

ADVERTISEMENT

2008 ರಿಂದ 2010ರವರೆಗೆ ತಮ್ಮ ಅವಧಿಯಲ್ಲಿ ಉದ್ಯಾನ ನಿರ್ಮಿಸಲು ನಿವೇಶನ ಗುರುತಿಸಿ ಅದಕ್ಕೆ ಪುರಸಭೆಯಿಂದಲೇ ಅನುದಾನ ಕಾದಿಡಲಾಗಿತ್ತು. ನಗರದಲ್ಲಿ 6 ಉದ್ಯಾನಗಳಿಗೆ ಅಂದಾಜು ₹ 35 ಲಕ್ಷ ಅನುದಾನ ಮೀಸಲಿಟ್ಟು, ಅಭಿವೃದ್ಧಿಪಡಿಸುವ ಕ್ರಮಕ್ಕೆ ಚಾಲನೆ ನೀಡಲಾಗಿತ್ತು ಎಂದು ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್‌ ಹೇಳಿದರು.

‘ಉದ್ಯಾನಕ್ಕೆ ಮೀಸಲಿಟ್ಟ ನಿವೇಶಗಳನ್ನು ಒತ್ತುವರಿ ಮಾಡಿ ಕೊಂಡಿದ್ದನ್ನು ಹೆಚ್ಚಿನ ಕಾಳಜಿವಹಿಸಿ ತೆರವುಗೊಳಿಸಿ, ಬೇಲಿ ಹಾಕಿಸಿ ಕಾದಿಟ್ಟ ತೃಪ್ತಿ ನನಗಿದೆ’ ಎಂದರು.

‘2017–18ನೇ ಸಾಲಿನಲ್ಲಿ ನಗರಸಭೆ ಮಂಡಿಸಿದ ಆಯವ್ಯಯದಲ್ಲಿ ಉದ್ಯಾನ ನಿರ್ಮಾಣಕ್ಕೆ ಅನುದಾನ ಕಾಯ್ದಿರಿಸಲಿಲ್ಲ. 14ನೇ ಹಣಕಾಸು ಯೋಜನೆಯಲ್ಲಿ ಶೇ 20ರಷ್ಟು ಅನುದಾನವನ್ನು ಉದ್ಯಾನ ನಿರ್ಮಾಣಕ್ಕೆ ಕಾಯ್ದಿರಿಸಬೇಕು ಎಂಬ ನಿಯಮ ಇದ್ದು, ಅದರಂತೆ ಈ ಸಾಲಿನ ಬಜೆಟ್‌ನಲ್ಲಿ ₹ 25 ಲಕ್ಷ ಅನುದಾನ ಮೀಸಲಿಡಲಾಗುವುದು’ ಎಂದು ನಗರಸಭೆ ಆಯುಕ್ತ ಶಿವಪ್ಪ ನಾಯಕ ಹೇಳಿದರು.

ನಗರ ವ್ಯಾಪ್ತಿಯಲ್ಲಿ 16 ಉದ್ಯಾನ ಗುರುತಿಸಿದ್ದು, ಈ ಪೈಕಿ 6 ಉದ್ಯಾನಗಳಿಗೆ ಬೇಲಿ, ವಾಕಿಂಗ್ ಪಾತ್, ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ಸಾಲಿನಲ್ಲಿ ಉದ್ಯಾನಗಳಿಗೆ ದೀಪದ ವ್ಯವಸ್ಥೆ ಮತ್ತು ಅಲಂಕೃತ ಗಿಡ ಬೆಳೆಸಿ ಸೌಂದರ್ಯ ಹೆಚ್ಚಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಉದ್ಯಾನಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಿ ಸ್ಥಳೀಯ ನಿವಾಸಿಗಳ ಸಮಿತಿ ರಚಿಸಿ ಅವರ ಉಸ್ತುವಾರಿಗೆ ನೀಡುವ ಆಲೋಚನೆಯೂ ಹೊಂದಿದ್ದೇವೆ. ನಗರಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ನಂತರ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ವಿವರಿಸಿದರು ಆಯುಕ್ತರು.

ಕೊರತೆ: ನಗರದಲ್ಲಿ ಉದ್ಯಾನ ಇಲ್ಲದೆ ಮಕ್ಕಳಿಗೆ ಆಟವಾಡಲು ಹಾಗೂ ಹಿರಿಯ ನಾಗರಿಕರಿಗೆ ಬೆಳಗಿನ ಮತ್ತು ಸಂಜೆ ಸಮಯದಲ್ಲಿ ವಾಕಿಂಗ್ ಮಾಡಲು, ಕಾಲ ಕಳೆಯಲು ಅವಕಾಶ ಇಲ್ಲವಾಗಿದೆ. ನಗರಸಭೆ ತನ್ನ ಮೂಲ ಸವಲತ್ತುಗಳಲ್ಲಿ ಉದ್ಯಾನವೂ ಒಂದಾಗಿದ್ದರೂ ಜನಪ್ರತಿನಿಧಿಗಳು ಒತ್ತು ನೀಡದಿರುವುದು ದುರಂತ ಎನ್ನುತ್ತಾರೆ ಗೃಹಿಣಿ ಶ್ರುತಿ.

**
ಹೊಸ ಬಡಾವಣೆಗಳಲ್ಲಿ ಉದ್ಯಾನಕ್ಕೆ ಕಾಯ್ದಿಟ್ಟ 20 ನಿವೇಶನವನ್ನು ಖಾತೆ ಮಾಡಿಸಿ, ಉದ್ಯಾನ ಅಭಿವೃದ್ಧಿಗೆ 14ನೇ ಹಣಕಾಸಿನಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ
ಶಿವಕುಮಾರ್‌,  ನಗರಸಭೆ ಅಧ್ಯಕ್ಷ 

ಎಚ್‌.ಎಸ್.ಸಚ್ಚಿತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.