ADVERTISEMENT

ಪಂಪನ ಸಾಹಿತ್ಯ ಸಾರ್ವಕಾಲಿಕ: ಡಾ.ಸಿಪಿಕೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2011, 9:10 IST
Last Updated 16 ನವೆಂಬರ್ 2011, 9:10 IST
ಪಂಪನ ಸಾಹಿತ್ಯ ಸಾರ್ವಕಾಲಿಕ: ಡಾ.ಸಿಪಿಕೆ
ಪಂಪನ ಸಾಹಿತ್ಯ ಸಾರ್ವಕಾಲಿಕ: ಡಾ.ಸಿಪಿಕೆ   

ಮೈಸೂರು: ಹತ್ತನೇ ಶತಮಾನದಲ್ಲಿ ರಚಿಸಿದ ಪಂಪನ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದ್ದು, ಕನ್ನಡದ ಸಮಕಾಲೀನ, ಸಾರ್ವಕಾಲಿಕ ಸಾಹಿತ್ಯವಾಗಿದೆ ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.

ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಹಾಗೂ ಸಂವಹನ ಟ್ರಸ್ಟ್ ಆಶ್ರಯದಲ್ಲಿ ಜಯಲಕ್ಷ್ಮಿಪುರಂನ ವಿವೇಕಾನಂದ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ `ಮಹಾಕವಿ ಪಂಪ~ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಇಂದಿನ ಜಾತಿ, ಮತದ ಕಲಹಗಳನ್ನು ಕಂಡಾಗ ಪಂಪನ `ಮನುಷ್ಯ ಜಾತಿ ತಾನೊಂದೇ ವಲಂ~ ಎಂಬ ಮಾತು ನೆನಪಾಗುತ್ತದೆ. ಪ್ರಾಚೀನ ಕನ್ನಡ ಸಾಹಿತ್ಯದ ಏಕೈಕ ಸೀಮಾವೃಕ್ಷವಾಗಿ ಬೆಳೆದು ನಿಂತವರು ಪಂಪ. ಆನಂತರ ಕುಮಾರವ್ಯಾಸ, ಕುವೆಂಪು ಆ ಸಾಲಿಗೆ ಸೇರಿದ್ದಾರೆ. ಕನ್ನಡದ ಕಾಳಿದಾಸ ಎಂದು ಪಂಪನನ್ನು ಕರೆಯುವುದು ನಿಜ. ಆದರೆ ಕಾಳಿದಾಸನಿಗಿಂತ ಪಂಪ ದೊಡ್ಡ ಕವಿ ಎನ್ನುವುದರಲ್ಲಿ ಸಂಶಯವಿಲ್ಲ ಎಂದರು.

ಕುಮಾರವ್ಯಾಸ, ಪಂಪರಲ್ಲಿ ಯಾರು ದೊಡ್ಡವರು ಎಂದು ಹೇಳುವುದು ಕಷ್ಟ. ಕುವೆಂಪು ಪಂಪನಲ್ಲಿದ್ದ ಕೆಲ ವೈರುಧ್ಯಗಳನ್ನು ಗುರುತಿಸಿದ್ದಾರೆ. ಪಂಪ, ವ್ಯಾಸಭಾರತದ ಪ್ರತಿಕೃತಿಯನ್ನು ರಚಿಸಲಿಲ್ಲ, ಬದಲಿಗೆ ಪ್ರತಿಮಾರೂಪ ಸೃಷ್ಟಿಸಿ ವ್ಯಾಸನಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದ.
 
ಕೆಲವರು ಪಂಪನ ಹೆಸರು ಕೆಡಿಸಲು ಹೆಸರನ್ನು ಹಿಂದು ಮುಂದು ಮಾಡಿ ಬರೆದರು. ಆಗಲೂ ಅವರಿಗೆ ಕಾಣಿಸಿದ್ದು ಪಂಪನೇ. ದೊಡ್ಡವರ ಹೆಸರು ಕೆಡಿಸುವವರು ಎಲ್ಲ ಕಾಲದಲ್ಲೂ ಇರುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

ಪಂಪ ಮೂಲತಃ ಗೊಂದಲದ ಕವಿ. ಅವನ ಒಂದು ಮುಖ ಪಂಪ ಭಾರತದಲ್ಲಿ, ಮತ್ತೊಂದು ಮುಖ ಆದಿಪುರಾಣದಲ್ಲಿ ಕಾಣುತ್ತದೆ. ಆದರೆ ತನ್ನ ಎರಡು ಕೃತಿಗಳಲ್ಲಿ ಇಡೀ ಪ್ರಪಂಚವನ್ನು ಪರಿಚಯಿಸಿದ್ದಾನೆ.
ನಾಡೋಜ ಪ್ರೊ.ದೇಜಗೌ ಮಾತನಾಡಿ, ಪಂಪ ಜಗತ್ತಿನ ಮಹಾಕವಿ, ಕುವೆಂಪು ಯುಗದ ಕವಿ. ಇವರಿಗೆ ಸರಿಸಾಟಿಯಾಗಿ ನಿಲ್ಲುವ ಸಾಹಿತಿಗಳು ಸಿಗಲು ಸಾಧ್ಯವಿಲ್ಲ.
 
ಪಂಪನ ಕುರಿತು ಕನ್ನಡ ಸಾಹಿತ್ಯ ಲೋಕದಲ್ಲಿ ಕೆಲವು ಸಂದೇಹಗಳಿವೆ. ಅದು ತಪ್ಪಲ್ಲ. ಆದರೆ ಅವರ ಸಾಹಿತ್ಯದಲ್ಲಿನ ಮೌಲ್ಯಗಳು ಪ್ರಾಮಾಣಿಕವಾಗಿವೆ. ಹೀಗಾಗಿ ಅವರು ಕನ್ನಡ ಶ್ರೀರಕ್ಷೆಯಾಗಿದ್ದಾರೆ ಎಂದು ಹೇಳಿದರು.

ಡಾ.ಕಮಲಾ ಹಂಪನಾ ಮಾತನಾಡಿ, ಜೈನ ಮಹಾಕವಿಗಳು ಕನ್ನಡವನ್ನು ಬೆಳೆಸಿದ್ದಾರೆ. ಪಂಪ, ರನ್ನ ಜನಸಾಮಾನ್ಯರ ಭಾಷೆಯಲ್ಲಿ ಸಾಹಿತ್ಯ ರಚಿಸಿ, ಆಡು ಭಾಷೆಯಾಗಿದ್ದ ಕನ್ನಡವನ್ನು ಆಸ್ಥಾನದ ಭಾಷೆಯನ್ನಾಗಿಸಿದರು. ಗಟ್ಟಿ ಕೆನೆ ಮೊಸರನ್ನು ಸಾಹಿತ್ಯ ಲೋಕಕ್ಕೆ ನೀಡಿದರು. ಬಳಿಕ ಬಂದ ವಚನ ಸಾಹಿತಿಗಳು ಅದನ್ನು ಮಜ್ಜಿಗೆಯಾಗಿ, ದಾಸರು ನೀರು ಮಜ್ಜಿಗೆಯಾಗಿ ಜನಸಾಮಾನ್ಯರಿಗೆ ನೀಡಿದರು ಎಂದು ಹೇಳಿದರು.

ಸಾಹಿತಿ ಡಾ.ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ವಾಂಸ ಡಾ.ಮಳಲಿ ವಸಂತಕುಮಾರ್, ಸಂವಹನ ಟ್ರಸ್ಟ್ ಅಧ್ಯಕ್ಷ ಡಿ.ಎನ್.ಲೋಕಪ್ಪ ಮಾತನಾಡಿದರು. ಕುವೆಂಪು ವಿದ್ಯಾ ಪರಿಷತ್ತು ಅಧ್ಯಕ್ಷ ಡಾ.ಎಸ್.ಎನ್.ರಾಮಸ್ವಾಮಿ ಉಪಸ್ಥಿತರಿದ್ದರು. ಡಾ.ಎಂ.ವೆಂಕಟೇಶ್ ಸ್ವಾಗತಿಸಿ, ಪ್ರಾಂಶುಪಾಲ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.