ADVERTISEMENT

ಪೋಲಾಗುತ್ತಿದೆ ರತ್ನಾಪುರಿ ಕೆರೆ ನೀರು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 10:00 IST
Last Updated 15 ಅಕ್ಟೋಬರ್ 2011, 10:00 IST
ಪೋಲಾಗುತ್ತಿದೆ ರತ್ನಾಪುರಿ ಕೆರೆ ನೀರು
ಪೋಲಾಗುತ್ತಿದೆ ರತ್ನಾಪುರಿ ಕೆರೆ ನೀರು   

ವಿಶೇಷ ವರದಿ
ಹುಣಸೂರು:
ಸಣ್ಣ ನೀರಾವರಿ ಯೋಜನೆಯನ್ನೇ ಅವಲಂಭಿಸಿರುವ ತಾಲ್ಲೂಕಿನ ರೈತರು ಕೆರೆ ನೀರು ನಿರ್ವಹಣೆಯಲ್ಲಿ ಎಚ್ಚರ ವಹಿಸಬೇಕಾದ ದಿನಗಳು ಎದುರಾಗಿವೆ.

ತಾಲ್ಲೂಕಿನಲ್ಲಿ 40ಕ್ಕೂ ಹೆಚ್ಚು ಕೆರೆಗಳಿದ್ದು, ಕೆರೆ ನೀರು ಅವಲಂಬಿಸಿ ಸಾವಿರಾರು ಎಕರೆ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತಿದೆ. ತಾಲ್ಲೂಕಿನ ಬಹುಮುಖ್ಯ ಕೆರೆಗಳಲ್ಲಿ ರತ್ನಾಪುರಿ ಕೆರೆಯೂ ಒಂದು. ತಾಲ್ಲೂಕಿನ ದೊಡ್ಡ ಕೆರೆಗಳ ಪಟ್ಟಿಗೆ ಸೇರಿರುವ ಬಿಳಿಕೆರೆ, ಹಳೆಬೀಡು ಕೆರೆ, ಚಿಲ್ಕುಂದ ಕೆರೆ, ಅರಸು ಕಲ್ಲಹಳ್ಳಿ ಕೆರೆ ಸೇರಿದಂತೆ ಅನೇಕ ಕೆರೆಗಳು ಇತಿಹಾಸದ ಪುಟ ಸೇರಿವೆ. ಬೆರಳೆಣಿಕೆಯಷ್ಟು ದೊಡ್ಡ ಕೆರೆಗಳು ಮಾತ್ರ ಉಳಿದಿವೆ.

ವರ್ಷದ 365 ದಿನವೂ ರತ್ನಾಪುರಿ ಕೆರೆ ಭರ್ತಿಯಾಗಿರುತ್ತದೆ. ಇದನ್ನು ಅವಲಂಬಿಸಿ ಕೆರೆಯ ಕೆಳ ಭಾಗದಲ್ಲಿ ಅಂದಾಜು 3 ಸಾವಿರ ಎಕರೆ ಪ್ರದೇಶದಲ್ಲಿ ಎರಡು ಫಸಲು ಪಡೆಯಲಾಗುತ್ತದೆ. ಮುಂಗಾರಿನಲ್ಲಿ ಕೋಡಿಯಿಂದ ಹರಿಯುವ ನೀರು, ರಾಮಕಟ್ಟೆ ಕೆರೆ ಮತ್ತು ಕರಿಮುದ್ದನಹಳ್ಳಿ ಕೆರೆಗಳಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಕೆರೆಯಲ್ಲಿ ಹೈ- ಲೆವೆಲ್ ಮತ್ತು ಲೋ- ಲೆವೆಲ್ ಕೋಡಿ ಎಂದು ವಿಭಾಗಿಸಲಾಗಿದೆ. ಮುಂಗಾರಿನಲ್ಲಿ ಒಳ ಹರಿವು ಹೆಚ್ಚಾಗುವುದರಿಂದ ಕೆರೆ ಸುಭದ್ರತೆಗೆ ಲೋ -ಲೆವೆಲ್ ಕೋಡಿ ನಿರ್ಮಿಸಲಾಗಿದೆ. ಬೇಸಿಗೆಯಲ್ಲಿ ಕೆರೆ ನೀರು ಹೊರ ಹೋಗದಂತೆ ತಡೆಯಲು `ಹೈ -ಲೆವೆಲ್~ ಕೋಡಿ ನಿರ್ಮಾಣ ಮಾಡಲಾಗಿದೆ.

ವೈಜ್ಞಾನಿಕವಾಗಿ ನಿರ್ಮಿಸಿದ `ಲೋ- ಲೆವೆಲ್~ ಕೋಡಿ ಒಡೆದು ಕೆರೆಯ ನೀರು ಹರಿದು ಹೋಗಲು ಅಚ್ಚುಕಟ್ಟು ರೈತರು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರಿಂದ ಕೆರೆಯ ನೀರು ಬರಿದಾಗುವ ಆತಂಕ ಎದುರಾಗಿದೆ.

 `ಬೇಸಿಗೆ ಕಾಲದಲ್ಲೂ ಕೋಡಿ ಕೆರೆ ಬತ್ತಿರುವ ದಾಖಲೆಯಿಲ್ಲ. ಆದರೆ ಕೆರೆಯ ನಿರ್ವಹಣೆಯಲ್ಲಿ ಮೈಮರೆತರೆ ಈ ಭಾಗದ ರೈತರು ಬರ ಖಚಿತ~ ಎನ್ನುತ್ತಾರೆ ಮಾಜಿ ಶಾಸಕ ವಿ. ಪಾಪಣ್ಣ.

ಕೆರೆಯ ಕೆಳಭಾಗದಲ್ಲಿ ಅಂದಾಜು 3500 ಎಕರೆ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಅಲ್ಲದೇ ಕೆರೆಯ ನೀರು ಹರಿಯಲು 14 ಕಿ.ಮೀ ನಾಲೆ ವ್ಯವಸ್ಥೆ ಕಲ್ಪಿಸಲಾಗಿದೆ. ರೈತರು ಮುಂದಿನ ದಿನಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆರೆ ಕೋಡಿ ರಕ್ಷಣೆಗೆ ಮುಂದಾಗಬೇಕಿದೆ. `ಕೆರೆ ಹೂಳು ತೆಗೆದಿರುವ ಬಗ್ಗೆ ದಾಖಲೆ ಇಲ್ಲ. ಕೋಡಿ ಸುತ್ತ ಜೊಂಡು ಬೆಳೆದಿದೆ. ಹೂಳು ತುಂಬಿಕೊಂಡು ನೀರು ಸಂಗ್ರಹಕ್ಕೆ ತೊಂದರೆಯಾಗಿದೆ~ ಎನ್ನುತ್ತಾರೆ ರೈತ ಸುರೇಂದ್ರ.
ನೀರು ಕೋಡಿಯ ಕೆಳ ಭಾಗದಿಂದ ಹರಿದು ಹೋಗುತ್ತಿದ್ದು, ನೀರು ಹಿಡಿದಿಡುವ ಪ್ರಯತ್ನ ಕೆಲವು ರೈತರು ಮಾಡಿದ್ದಾರೆ.

 ಆದರೆ, ಅವೈಜ್ಞಾನಿಕವಾಗಿ ಕೋಡಿ ಮೇಲೆ ಬಾಳೆ ಕಂದು, ಕಲ್ಲು ಜೋಡಿಸಿದ್ದಾರೆ. ಇದರಿಂದ ಅಲ್ಪಮಟ್ಟಿಗೆ ನೀರು ತಡೆಯಬಹುದು ಮಾತ್ರ. ಸರ್ಕಾರ ಘೋಷಣೆ ಮಾಡಿದ `ಬರ~ ಪಟ್ಟಿಯಲ್ಲಿ ಹುಣಸೂರು ತಾಲ್ಲೂಕು ಸೇರ್ಪಡೆಯಾಗಿಲ್ಲ. ಮುಂದಿನ ಮುಂಗಾರಿನ ವರೆಗೆ ಕೆರೆ ನೀರು ನಿರ್ವಹಣೆ ಮಾಡಬೇಕಾದ ಜವಾಬ್ದಾರಿ ಸಣ್ಣ ನೀರಾವರಿ ಇಲಾಖೆಗೆ ಸೇರಿದೆ. ಕೆರೆ ನೀರು ಸಂಪೂರ್ಣ ಬರಿದಾಗುವ ಮುನ್ನ ಸಂಬಂಧಿಸಿದವರು ಎಚ್ಚರಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.