ADVERTISEMENT

ಪ್ರಸಾದ್‌ ಅಳಿಯ ಹರ್ಷವರ್ಧನ್‌ಗೆ ಟಿಕೆಟ್‌

ಶಿವಣ್ಣ ಕೈತಪ್ಪಿದ ಬಿಜೆಪಿ ಟಿಕೆಟ್‌; ಸಂದೇಶ್‌ ಸ್ವಾಮಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 10:17 IST
Last Updated 17 ಏಪ್ರಿಲ್ 2018, 10:17 IST

ಮೈಸೂರು: ಮೈಸೂರು ಜಿಲ್ಲಾ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ವರಿಷ್ಠರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು, ಇನ್ನುಳಿದ ಕ್ಷೇತ್ರಗಳ ಟಿಕೆಟ್‌ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ.

ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಿಂದ ತಮ್ಮ ಅಳಿಯ ಬಿ.ಹರ್ಷವರ್ಧನ್‌ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್‌ ಯಶಸ್ವಿಯಾಗಿದ್ದಾರೆ. ಈ ಕ್ಷೇತ್ರದಿಂದ 2008, 2013ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಸಾದ್‌ ಗೆದ್ದಿದ್ದರು. ಆದರೆ, 2017ರಲ್ಲಿ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದರು.

ಈ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಅಸಮಾಧಾನಗೊಂಡಿದ್ದಾರೆ.

ADVERTISEMENT

‘ಟಿಕೆಟ್‌ ಆಕಾಂಕ್ಷಿಯಾಗಿದ್ದು ನಿಜ. ಈ ಬಗ್ಗೆ ಯಡಿಯೂರಪ್ಪ ಹಾಗೂ ಪ್ರಸಾದ್‌ ಅವರಿಗೆ ಮನವಿ ಕೂಡ ಸಲ್ಲಿಸಿದ್ದೆ. ಜಿಲ್ಲೆಯಲ್ಲಿ ಸಾಕಷ್ಟು ಕೆಲಸ ಮಾಡಿರುವ ಬಗ್ಗೆ ಮನವರಿಕೆ ಮಾಡಿದ್ದೆ. ನನಗೆ 40 ವರ್ಷಗಳ ರಾಜಕೀಯ ಅನುಭವವಿದೆ. ನನ್ನ ಹೆಸರು ಮುಂಚೂಣಿಯಲ್ಲಿತ್ತು. ಏಕೆ ಕೈಬಿಟ್ಟಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಜೆಡಿಎಸ್‌ ಟಿಕೆಟ್‌ ಸಿಗದೆ ಈಚೆಗೆ ಬಿಜೆಪಿಗೆ ಜಿಗಿದಿದ್ದ ಸಂದೇಶ್‌ ಸ್ವಾಮಿ ಅವರ ಅದೃಷ್ಟ ಖುಲಾಯಿಸಿದೆ. ಘಟಾನುಘಟಿಗಳ ಮಧ್ಯೆ ನರಸಿಂಹರಾಜ ಕ್ಷೇತ್ರದ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರು 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಕ್ಷೇತ್ರದಲ್ಲಿ ಮಾರುತಿರಾವ್‌ ಪವಾರ್‌, ಬಿ.ಎಂ.ನಟರಾಜ್‌, ಎಸ್‌.ಚಂದ್ರಶೇಖರ್‌, ಎಚ್‌.ಜಿ.ಗಿರಿಧರ್‌, ಡಾ.ಅನಿಲ್‌ ಥಾಮಸ್‌ ಅವರು ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು.

ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್‌ (ತನ್ವೀರ್ ಸೇಠ್‌), ಜೆಡಿಎಸ್‌ (ಅಬ್ದುಲ್ ಅಜೀಜ್‌), ಎಸ್‌ಡಿಪಿಐ (ಅಬ್ದುಲ್‌ ಮಜೀದ್‌) ಪಕ್ಷಗಳು ಈಗಾಗಲೇ ಅಭ್ಯರ್ಥಿಗಳನ್ನು ಪ್ರಕಟಿಸಿವೆ.

ಬೆಂಗಳೂರಿನ ಉದ್ಯಮಿ ಎಸ್‌.ಮಂಜುನಾಥ್‌ ಅವರು ಪಿರಿಯಾಪಟ್ಟಣ ಕ್ಷೇತ್ರದ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ಅವರು ಹಲವು ತಿಂಗಳಿನಿಂದ ಕ್ಷೇತ್ರದಲ್ಲಿ ಬೀಡುಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಬಿಜೆಪಿಯಿಂದ ಸತತ ಎರಡು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದ ಎಚ್‌.ಡಿ.ಗಣೇಶ್ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಶಂಭುಲಿಂಗಪ್ಪ, ಡಾ.ಪ್ರಕಾಶ್ ಬಾಬುರಾವ್‌ ಟಿಕೆಟ್‌ಗಾಗಿ ಬೇಡಿಕೆ ಸಲ್ಲಿಸಿದ್ದರು.

ಎಚ್‌.ಡಿ.ಕೋಟೆ ಕ್ಷೇತ್ರದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಸಿದ್ದರಾಜು ಅವರಿಗೆ ಟಿಕೆಟ್‌ ಲಭಿಸಿದೆ. ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಎಚ್‌.ವಿ.ಕೃಷ್ಣಸ್ವಾಮಿ, ಈಚೆಗೆ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ್ದ ಚಾಮರಾಜನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನುಳಿದ ಏಳು ಕ್ಷೇತ್ರಗಳ ಟಿಕೆಟ್‌ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ. ಅದರಲ್ಲೂ ಕೃಷ್ಣರಾಜ ಹಾಗೂ ಚಾಮರಾಜದಲ್ಲಿ ದೊಡ್ಡ ಪೈಪೋಟಿಯೇ ಏರ್ಪಟ್ಟಿದ್ದು ಬಿಜೆಪಿ ವರಿಷ್ಠರಿಗೆ ತಲೆನೋವು ಉಂಟು ಮಾಡಿದೆ ಎನ್ನಲಾಗಿದೆ. ಮೂರನೇ ಪಟ್ಟಿಯಲ್ಲಿ ಈ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗುವ ನಿರೀಕ್ಷೆ ಇದೆ.

**

ಟಿಕೆಟ್‌ ತಪ್ಪಿದ್ದು ಬೇಸರ ತರಿಸಿದೆ. ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರೂ ನನ್ನನ್ನು ಪರಿಗಣಿಸಿಲ್ಲ. ಯಡಿಯೂರಪ್ಪ ಜೊತೆ ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇನೆ –  ಕೋಟೆ ಎಂ.ಶಿವಣ್ಣ, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ‌.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.