ADVERTISEMENT

ಬೋಧನೆ, ಸಂಶೋಧನೆ ಸಮಾನ ಆದ್ಯತೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 9:35 IST
Last Updated 4 ಜನವರಿ 2011, 9:35 IST

ಮೈಸೂರು:  ‘ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯವು ಬೋಧನೆ ಮತ್ತು  ಸಂಶೋಧನೆಗೆ ಸಮಾನ ಅದ್ಯತೆ ನೀಡಲಿದೆ’ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಸೋಮವಾರ ತಿಳಿಸಿದರು. ಜೆಎಸ್‌ಎಸ್ ಮಹಾವಿದ್ಯಾಪೀಠವು ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ವಾಣಿಜ್ಯ, ವಿಜ್ಞಾನ ಕಾಲೇಜು ಸಭಾಂಗ ಣದಲ್ಲಿ ಏರ್ಪಡಿಸಿದ್ದ ಸಂಸ್ಕೃತೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಬೋಧನೆ ಜೊತೆಗೆ ಅಧ್ಯಯನ, ಸಂಶೋಧನೆಗೆ ಆದ್ಯತೆ ನೀಡಲಾಗುವುದು. ಸಂಶೋಧನೆಯಿಂದಾಗಿ ಬೇರೆ ಬೇರೆ ಸಂಸ್ಕೃತಿಗಳ ವಿಕಾಸವನ್ನು ಅರಿಯಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರವು ಸಂಸ್ಕೃತ ಶಾಲಾ, ಕಾಲೇಜುಗಳನ್ನು ಸಂಸ್ಕೃತ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡಿಸಿ  ಆದೇಶ ಹೊರಡಿಸಿದೆ. ಇದನ್ನು ಒಳ್ಳೆಯ ಬೆಳವಣಿಗೆ. ಸಂಸ್ಕೃತವನ್ನು ಕೇವಲ ಪದವಿ ಇಲ್ಲವೇ ಕೆಲಸಕ್ಕಾಗಿ ಓದುವುದನ್ನು ನಿಲ್ಲಸಬೇಕು. ಸಂಸ್ಕೃತ ಕೇವಲ ಕಂಠಪಾಠ ಮಾಡುವ ಅಥವಾ ಪಠ್ಯಪುಸ್ತಕವಲ್ಲ. ಬದಲಿಗೆ ಅನುಭವಿಸುವುದನ್ನು ಹೇಳಿ ಕೊಡುತ್ತದೆ.ಆದರೆ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಸಂಸ್ಕೃತ ಪಠ್ಯದಲ್ಲಿ ಇರುವುದನ್ನು ಯಥಾವತ್ತಾಗಿ ಕಲಿಸುವುದೇ ಆಗಿದೆ, ಇದು ಸರಿಯಲ್ಲ’ ಎಂದರು.

ಪ್ರಾಚ್ಯವಿದ್ಯಾ ಸಂಶೋಧನಾಲಯದ ಸಂಶೋಧಕ ವಿದ್ವಾನ್ ಡಾ.ಟಿ.ವಿ.ಸತ್ಯನಾರಾಯಣ ವಿಶೇಷ ಉಪನ್ಯಾಸ ನೀಡಿದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಶಿಕ್ಷಣ ವಿಭಾಗದ ನಿರ್ದೇಶಕ ಕೆ.ಶಾಂತಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಸಹ ನಿರ್ದೇಶಕ ಎಸ್.ಕುಮಾರಸ್ವಾಮಿ, ಡಿಡಿಪಿಐ ಆರ್.ನಾಗೇಂದ್ರಕುಮಾರ್ ಮಾತನಾಡಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಎನ್.ಬೆಟ್‌ಕೆರೂರ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.