ADVERTISEMENT

ಮೈಸೂರು: 871 ಶಿಕ್ಷಕರ ಹುದ್ದೆ ಖಾಲಿ!

ಸುಭಾಸ ಎಸ್.ಮಂಗಳೂರ
Published 3 ಜೂನ್ 2013, 8:52 IST
Last Updated 3 ಜೂನ್ 2013, 8:52 IST

ಮೈಸೂರು: ಶಾಲಾ ಅಂಗಳದಲ್ಲಿ ಚಿಣ್ಣರ ಕಲರವ ಮತ್ತೆ ಆರಂಭವಾಗಿದೆ. ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಮೇ 31ರಿಂದ ಶಾಲೆಗಳು ಪುನಾರಂಭಗೊಂಡಿವೆ. ಆದರೆ, ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 871 ಶಿಕ್ಷಕರ ಹುದ್ದೆಗಳು ಖಾಲಿ ಇರುವುದು ಪೋಷಕರ ನಿದ್ದೆಗೆಡಿಸಿದೆ.

ಜಿಲ್ಲೆಯಲ್ಲಿ ಸರ್ಕಾರಿ, ಸಮಾಜ ಕಲ್ಯಾಣ ಇಲಾಖೆ, ಅನುದಾನಿತ, ಅನುದಾನರಹಿತ ಸೇರಿದಂತೆ ಒಟ್ಟು 2,615 ಪ್ರಾಥಮಿಕ ಶಾಲೆ ಹಾಗೂ 659 ಪ್ರೌಢಶಾಲೆಗಳು ಇವೆ. ಪ್ರಾಥಮಿಕ ಶಾಲೆಯಲ್ಲಿ 3,67,368 ಮಕ್ಕಳು, ಪ್ರೌಢಶಾಲೆಯಲ್ಲಿ 86,043 ಮಕ್ಕಳು ಈ ಬಾರಿ ಪ್ರವೇಶ ಪಡೆದಿದ್ದಾರೆ.

ಪಾಠ, ಪ್ರವಚನಗಳು ಇನ್ನಷ್ಟೇ ಆರಂಭವಾಗಬೇಕಿದೆ. ಆದರೆ, ಶಿಕ್ಷಕರ ಕೊರತೆ ಇರುವುದರಿಂದ ಪೋಷಕರು ಚಿಂತಾಕ್ರಾಂತರಾಗಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ 871, ಸಮಾಜ ಕಲ್ಯಾಣ ಇಲಾಖೆ ಶಾಲೆಗಳಲ್ಲಿ 78, ಅನುದಾನಿತ ಶಾಲೆಯಲ್ಲಿ 590, ಅನುದಾನರಹಿತ ಶಾಲೆಯಲ್ಲಿ 108 ಸೇರಿದಂತೆ ಒಟ್ಟು 1,645 ಶಿಕ್ಷಕರ ಹುದ್ದೆಗಳು ಖಾಲಿ ಇವೆ.

ಆರ್‌ಟಿಇ ದಾಖಲೆ: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಈ ವರ್ಷ 4,980 ಮಕ್ಕಳು ಎಲ್.ಕೆ.ಜಿ ಮತ್ತು 1ನೇ ತರಗತಿಯಲ್ಲಿ ಪ್ರವೇಶ ಪಡೆದಿದ್ದಾರೆ. ಒಟ್ಟು 5,271 ಸೀಟುಗಳು ಲಭ್ಯವಿದ್ದು, 7,312 ಅರ್ಜಿಗಳು ಸ್ವೀಕೃತವಾಗಿದ್ದವು. ಈ ಪೈಕಿ 5,917 ಅರ್ಜಿಗಳನ್ನು ಅನುಮೋದನೆ ಗೊಂಡಿದ್ದು, ಅಂತಿಮವಾಗಿ 4,980 ಮಕ್ಕಳು `ಉಚಿತ ಸೀಟು' ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಶ್ಚರ್ಯವೆಂದರೆ, ಆರ್‌ಟಿಇ ಅಡಿ ಇನ್ನೂ 937 ಉಚಿತ ಸೀಟುಗಳು ಲಭ್ಯ ಇವೆ. ಕಳೆದ ವರ್ಷ 5,305 ಸೀಟುಗಳು ಲಭ್ಯವಿದ್ದು, 1,361 ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿದ್ದರು. 829 ಮಕ್ಕಳು ಪ್ರವೇಶ ಪಡೆದಿದ್ದರು.

ಬಿಸಿಯೂಟ: ಜಿಲ್ಲೆಯಲ್ಲಿ ಒಟ್ಟು 2,84,742 ಮಕ್ಕಳು ಬಿಸಿಯೂಟ ವ್ಯಾಪ್ತಿಗೆ ಒಳಪಡುತ್ತಾರೆ. ಈ ಪೈಕಿ 2,70,677 ಮಕ್ಕಳು ನಿಯಮಿತ ಹಾಜರಾತಿ ಹೊಂದಿದ್ದು, 2,63,570 ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ.

ಪ್ರವೇಶ ಪಡೆದ ಮಕ್ಕಳು:
ಸರ್ಕಾರಿ ಶಾಲೆ: ಪ್ರಾಥಮಿಕ- 1,85,099, ಪ್ರೌಢಶಾಲೆ-37,357. ಸಮಾಜ ಕಲ್ಯಾಣ ಇಲಾಖೆ ಶಾಲೆ: ಪ್ರಾಥಮಿಕ-4,970, ಪ್ರೌಢಶಾಲೆ-1,520. ಅನುದಾನಿತ: ಪ್ರಾಥಮಿಕ-39,262, ಪ್ರೌಢಶಾಲೆ-19,964. ಅನುದಾನರಹಿತ: ಪ್ರಾಥಮಿಕ-1,35,225, ಪ್ರೌಢಶಾಲೆ- 26,438. ಕೇಂದ್ರೀಯ ಶಾಲೆ: ಪ್ರಾಥಮಿಕ-2,812, ಪ್ರೌಢಶಾಲೆ-764. ಒಟ್ಟು ಮಕ್ಕಳು: ಪ್ರಾಥಮಿಕ-3,67,368, ಪ್ರೌಢಶಾಲೆ-86,043.

`ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಖಾಲಿ ಶಿಕ್ಷಕರ ಹುದ್ದೆಗಳ ಸಂಖ್ಯೆ ಮೈಸೂರು ಜಿಲ್ಲೆಯಲ್ಲಿ ಕಡಿಮೆ ಇದೆ. ಅರೆಕಾಲಿಕ ಶಿಕ್ಷಕರನ್ನು ನೇಮಕ ಮಾಡಿಕೊಂಡು, ಶೀಘ್ರವೇ ಈ ಕೊರತೆಯನ್ನು ನೀಗಿಸಲಾಗುವುದು. ಫಲಿತಾಂಶ ಸುಧಾರಣೆಗೆ ಆರಂಭದಿಂದಲೇ ಈ ಬಾರಿ ಹೆಚ್ಚು ಗಮನಹರಿಸಲಾಗುವುದು. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸ್ಥಾನ ಕುಸಿತವಾಗಿದೆ. ಆದರೆ, ವಿಷಯವಾರು ಫಲಿತಾಂಶದಲ್ಲಿ ಕಳೆದ ವರ್ಷಕ್ಕಿಂತ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಎಲ್ಲ ಶಾಲೆಗಳಿಗೂ ಮೂಲಸೌಕರ್ಯ ಒದಗಿಸಲಾಗಿದೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಕೆ. ಬಸವರಾಜು `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT