ADVERTISEMENT

ರೈತರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 8:35 IST
Last Updated 6 ಸೆಪ್ಟೆಂಬರ್ 2013, 8:35 IST

ಎಚ್.ಡಿ.ಕೋಟೆ: ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆ ಮತ್ತು ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘದವರು ಗುರುವಾರ ತಾಲ್ಲೂಕು ಕಚೇರಿಯ ಎದುರಿನಲ್ಲಿ ಧರಣಿ ನಡೆಸಿದರು.

ತಾಲ್ಲೂಕಿನ ಕೆಂಚನಹಳ್ಳಿ, ಕೋಹಳ, ಹುಸ್ಕೂರು ಸೇರಿದಂತೆ ಇತರೆ ಗ್ರಾಮಗಳಲ್ಲಿ ರೈತರಿಗೆ ಸಾಗುವಳಿ ಜಮೀನು ನೀಡಬೇಕು. ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಕಾರ್ಮಿಕ ಶಾಲೆಯನ್ನು ಆರಂಭಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.

ಪಿಎಲ್‌ಡಿ ಬ್ಯಾಂಕಿನ ಉಪಾಧ್ಯಕ್ಷ ಬೀರಂಬಳ್ಳಿ ಪ್ರಭಾಕರ್ ಮಾತನಾಡಿ, ತಾಲ್ಲೂಕಿನ ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ  ಶಾಸಕ ಚಿಕ್ಕಮಾದು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಮಳೆಯಿಂದ ವಾಣಿಜ್ಯ ಬೆಳೆಗಳಾದ ಹತ್ತಿ, ತಂಬಾಕು ಬೆಳೆ ಸಂಪೂರ್ಣ ಕೊಳೆತು ರೈತರಿಗೆ ನಷ್ಟವುಂಟಾಗಿದೆ. ವೃದ್ಧರು, ವಿಧವೆಯರು, ಅಂಗವಿಕಲರು ಸೇರಿದಂತೆ ಇತರರಿಗೆ ಮಾಸಿಕ ಪಿಂಚಣಿ ಸರಿಯಾಗಿ ಬರುತ್ತಿಲ್ಲ. ಕಡು ಬಡವರು, ಶೋಷಿತರು ಪ್ರತಿದಿನ ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಿಲ್ಲ ಎಂದು ಕಿಡಿ ಕಾರಿದರು.

ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡುವುದು, ವಸತಿ ರಹಿತರಿಗೆ ನಿವೇಶನ ಮತ್ತು ಮನೆಗಳ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ಚೌಡಳ್ಳಿ ಜವರಯ್ಯ, ಜೆ.ಕೆ. ಜವರ, ದೊಡ್ಡಸಿದ್ದ, ಆನಗಟ್ಟಿ ನಾಗರಾಜು, ಮಲಾರ ನಾಗರಾಜು, ಗುರುಸ್ವಾಮಿ, ಜಯರಾಮು, ಸಿದ್ದನಾಯಕ, ಗೋವಿಂದರಾಜು, ಮಹೇಶ್, ನಂಜುಂಡಯ್ಯ, ಬೀರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.