ADVERTISEMENT

ರೋಗಗಳ ವಾಸಿಗೆ ಸಂಗೀತ ಚಿಕಿತ್ಸೆ

ಇಂದು ವಿಶ್ವ ಸಂಗೀತ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 7:22 IST
Last Updated 21 ಜೂನ್ 2013, 7:22 IST

ಮೈಸೂರು: ಸಂಗೀತದ ಮೂಲಕ ರಕ್ತದೊತ್ತಡ, ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು. ಜತೆಗೆ,  ಖಿನ್ನತೆ, ಪಾರ್ಶ್ವವಾಯು ಮೊದಲಾದ ರೋಗಗಳನ್ನು ವಾಸಿ ಮಾಡಬಹುದು ಎಂದು ಇಲ್ಲಿಯ ನರರೋಗ ತಜ್ಞ ಡಾ.ಅನಿಲ್ ಸಾಂಗ್ಲಿ ಹಾಗೂ ಅವರ ಸೋದರರಾದ, ಗಾಯಕ ಶ್ರೀಪಾದ ಸಾಂಗ್ಲಿ ಸಾಬೀತುಪಡಿಸಿದ್ದಾರೆ.

ಸುಮ್ಮನೆ ಸಂಗೀತ ಕೇಳಿಸಿಕೊಳ್ಳು ವುದರಿಂದ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದಲ್ಲ. ಸುಖ, ದುಃಖ, ಬೇಸರ, ಭಯ, ಕೋಪ... ಹೀಗೆ ನವರಸಗಳನ್ನು ನಿಯಂತ್ರಿಸಲು ರಾಗಗಳು ನೆರವಾಗುತ್ತವೆ. ಖಿನ್ನತೆಯಲ್ಲಿರುವವರಿಗೆ ಯಮನ್ ಕಲ್ಯಾಣಿ ರಾಗವನ್ನು ಕೇಳಿಸಿದರೆ ಸಂತೋಷದ ರಸೋತ್ಪಾದನೆ ಉಂಟಾಗುತ್ತದೆ. ಕಲ್ಯಾಣಿ ರಾಗ ಸಂತೋಷಕ್ಕೆ ಹೇಳಿಮಾಡಿಸಿದ ರಾಗ. ಅದನ್ನು ಶಾಸ್ತ್ರೀಯವಾಗಿಯೂ ಕೇಳಬಹುದು ಇಲ್ಲವೇ, ಸಿನಿಮಾ ಹಾಡಿನ ಮೂಲಕವೂ ಕೇಳಬಹುದು. ಅಲ್ಲದೇ, ಸಂಗೀತದ ವಾದ್ಯಗಳ ಮೂಲಕವೂ ಕೇಳಬಹುದು. ವಾದ್ಯದ ತರಂಗಗಳೂ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಆಗುತ್ತದೆ ಎನ್ನುವುದನ್ನು ಈ ಸೋದರರು 18 ವರ್ಷಗಳಿಂದ ವಿವಿಧ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ.

ಆದರೆ, ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಯೊಂದಿಗೆ ಸಂಗೀತವನ್ನು ಕೇಳಿಸಿದ ನಂತರ ಗುಣಮುಖರಾದರೆ ಯಾವುದರ ಮೂಲಕ ಗುಣಮುಖವಾಯಿತು ಎನ್ನುವುದನ್ನು ಹೇಗೆ ಪತ್ತೆ ಹಚ್ಚಬಹುದು? ಇದಕ್ಕಾಗಿ ಅವರು ಕೋಮಾ ಸ್ಥಿತಿಯಲ್ಲಿರುವವರನ್ನು, ಮಿದುಳು ರಕ್ತಸ್ರಾವವಾದವರನ್ನು, ತಲೆಗೆ ಏಟು ಬಿದ್ದವರನ್ನು ಹೀಗೆ ಬಗೆ ಬಗೆಯ ಜನರನ್ನು ಗುಂಪು ಮಾಡಿ ಶಸ್ತ್ರಚಿಕಿತ್ಸೆ, ಫಿಸಿಯೋಥೆರಪಿ ಜತೆಗೆ ಸಂಗೀತದ ಮೂಲಕ ಚಿಕಿತ್ಸೆ ನೀಡಿದ್ದಾರೆ.  ಕೋಮಾ ಸ್ಥಿತಿ ತಲುಪಿದವರನ್ನು ಶಾಂತ ಸ್ಥಿತಿಯಲ್ಲಿರಿಸಿ ವಿವಿಧ ರಾಗಗಳನ್ನು ಕೇಳಿಸಿದರು. ಹಾಗೆ ಕೇಳಿಸುವ ಮುಂಚೆ ರಕ್ತದೊತ್ತಡ, ನಾಡಿಮಿಡಿತ ಹಾಗೂ ಉಸಿರಾಟ ವೇಗವನ್ನು ದಾಖಲಿಸಿ ಕೊಂಡಿದ್ದರು. ರಾಗಗಳನ್ನು ಕೇಳಿಸಿದ ನಂತರ ರೋಗಿಯ ರಕ್ತದೊತ್ತಡ, ನಾಡಿಮಿಡಿತ ಮತ್ತು ಉಸಿರಾಟ ವೇಗವನ್ನು ಗಮನಿಸುತ್ತ ಮತ್ತೆ ದಾಖಲಿ ಸಿದರು. ಹಾಗೆ ರಾಗಗಳನ್ನು ಕೇಳಿಸುವುದರಿಂದ ಕೋಮಾ ಸ್ಥಿತಿಯಲ್ಲಿರು ವವರೂ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಅವರು ಗುರುತಿಸಿದ್ದಾರೆ.

`ನರರೋಗ ಹಾಗೂ ಮಾನಸಿಕ ರೋಗಕ್ಕೆ ಸಂಬಂಧಿಸಿ ಮಾತ್ರೆ ಕೊಡುವುದರಿಂದ ಗುಣವಾಗುತ್ತದೆ ಎನ್ನುವುದು ಸರಿಯಲ್ಲ. ನ್ಯೂರೋ ಸೈಕಾಲಜಿಕಲ್ ಸಮಸ್ಯೆ ಇದ್ದವರಿಗೆ ಶ್ರುತಿ, ತಾಳ, ಲಯ, ರೋಗಿ ಗಳೊಂದಿಗಿನ ಅಂತರ, ಕೊಡುವ ವೇಗ, ಧ್ವನಿಯ ಏರಿಳಿತಗಳಿಂದಾಗಿ ಚಿಕಿತ್ಸೆ ನೀಡಬಹುದು. ಹಾಗೆಯೇ, ಪಾರ್ಶ್ವ ವಾಯು ಹಾಗೂ ಪಾರ್ಕಿನ್‌ಸನ್ಸ್ ಕಾಯಿಲೆಗೆ ಒಳಗಾದವರನ್ನು ವಿಡಿಯೊ ದಲ್ಲಿ ಸೆರೆ ಹಿಡಿದು ನಂತರ ಅವರಿಗೆ ಅಗತ್ಯವಾದ ಚಿಕಿತ್ಸೆಯನ್ನು ನೀಡ ಬಹುದು' ಎನ್ನುತ್ತಾರೆ ಡಾ.ಅನಿಲ್ ಸಾಂಗ್ಲಿ. `ಆದರೆ, ಇದು ಒಂದು ದಿನಕ್ಕೆ, ಒಂದು ತಿಂಗಳಲ್ಲಿ ಕಾಯಿಲೆ ಗುಣವಾಗುತ್ತದೆ ಎನ್ನಲಾಗದು. ವರ್ಷಗಟ್ಟಲೆ ನಡೆಯುವ ಪ್ರಕ್ರಿಯೆ. ಇಂಥ ಕಾಯಿಲೆಗೆ ಇಂಥದೇ ರಾಗಗಳು ಮದ್ದು ಎನ್ನಲಾಗದು. ಸರಿಗಮಪದ ಎಂದು ಕಿವಿಗೆ ಬಿದ್ದಾಗ ಮಿದುಳಲ್ಲಿಯ ಆಡಿಟರಿ ಸೆಂಟರ್ ಪ್ರವೇಶಿಸುತ್ತದೆ. ಆಗ ರೋಗಿಗಳು ಪ್ರತಿಕ್ರಿಯಿಸುತ್ತಾರೆ. ಸಂಗೀತವು ಎಲ್ಲಾ ವಯೋಮಾನದವರಿಗೂ ಸಂತೋಷ ನೀಡಬಲ್ಲದು. ಮನಸ್ಸಿಗೆ ಸುಖ ನೀಡುವುದರ ಜತೆಗೆ, ಮಾನಸಿಕ ಒತ್ತಡಗಳನ್ನು ದೂರ ಇಡುತ್ತದೆ. ಹೀಗಾಗಿ, ಸಂಗೀತವು ಒಂದು ವಿಧವಾದ ಧ್ಯಾನವೂ ಹೌದು. ಅದು ಏಕಾಗ್ರತೆಯನ್ನು ವೃದ್ಧಿಸುತ್ತದೆ, ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ, ನೋಟ ಮತ್ತು ಆಲಿಸುವ ಕೌಶಲವನ್ನು ಅಭಿವೃದ್ಧಿಪಡಿಸುತ್ತದೆ' ಎನ್ನುವ ವಿವರವನ್ನು ಅವರು ನೀಡುತ್ತಾರೆ.

`ಪ್ರಾಣಿಗಳಿಗೂ ಸಂಗೀತ ಚಿಕಿತ್ಸೆ ನೀಡಬಹುದು ಎಂಬುದನ್ನು ಮೈಸೂರಿನ ಪಿಂಜರಪೋಲದಲ್ಲಿ ಹಾಗೂ ಉಡು ಪಿಯ ಗೋಶಾಲೆಯಲ್ಲಿ ಪ್ರಯೋಗಿಸಿ ದ್ದೇವೆ. ಉಡುಪಿಯ ಗೋಶಾಲೆ ಯಲ್ಲಿ ನಸುಕಿನಿಂದ ಬೆಳಿಗ್ಗೆಯವರೆಗೆ ನಿತ್ಯ 3 ಗಂಟೆ ಸಂಗೀತದ ಸಿ.ಡಿಗಳನ್ನು ಕೇಳಿಸಿ ದಾಗ ಕಡಿಮೆ ಹಾಲು ಕೊಡುವ ಹಸು ಹೆಚ್ಚು ಕೊಟ್ಟದ್ದಿದೆ' ಎಂದು ಹೆಮ್ಮೆ ಯಿಂದ ಹೇಳುತ್ತಾರೆ ಶ್ರೀಪಾದ ಸಾಂಗ್ಲಿ.

`ನಮ್ಮ ತಾಯಿ ಆರ್.ಎಸ್. ಅಮೃತಾ ಅವರಿಗೆ 76 ವರ್ಷ. ಮಧುಮೇಹ ಹಾಗೂ ರಕ್ತದೊತ್ತ ಡದಿಂದ ಬಳಲುವ ಅವರು,      ರಕ್ತದೊ ತ್ತಡ ನಿಯಂತ್ರಣಕ್ಕೆ ಯಮನ್ ಕಲ್ಯಾಣಿ, ಬಾಗೇಶ್ರೀ, ಭೀಮ್‌ಪಲಾಸ್ ರಾಗಗಳನ್ನು ಹಾಡಿಕೊಂಡು ಕಡಿಮೆ ಗೊಳಿಸಿಕೊಳ್ಳುತ್ತಾರೆ. ಹೀಗೆ ಹಾಡುವ ಮೂಲಕ ಇಲ್ಲವೆ ಕೇಳುವ ಮೂಲಕವೂ ಆರೋಗ್ಯವಾಗಿರಬಹುದು' ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.