ADVERTISEMENT

ವರವಾದ ಬತ್ತ ಖರೀದಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 9:45 IST
Last Updated 6 ಜನವರಿ 2012, 9:45 IST

ಮೈಸೂರು: ಜಿಲ್ಲೆಯಲ್ಲಿ ತೆರೆದಿರುವ ಏಳು ಬತ್ತ ಖರೀದಿ ಕೇಂದ್ರಗಳು ರೈತರಿಗೆ ಉತ್ತಮ ಬೆಲೆ ನೀಡುವ ಮೂಲಕ ವರದಾನವಾಗಿವೆ. ಇದರಿಂದಾಗಿ ರೈತರು ಈ ಕೇಂದ್ರಗಳತ್ತ ಮುಖ ಮಾಡುತ್ತಿದ್ದಾರೆ. ಒಂದೂವರೆ ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 16,396 ಕ್ವಿಂಟಲ್ ಬತ್ತವನ್ನು ಈ ಕೇಂದ್ರದ ಮೂಲಕ ಖರೀದಿಸಲಾಗಿದೆ.

ಜಿಲ್ಲೆಯ ನಂಜನಗೂಡು, ಮೈಸೂರು, ತಿ.ನರಸೀಪುರ, ಬನ್ನೂರು, ಕೆ.ಆರ್.ನಗರ, ಎಚ್.ಡಿ.ಕೋಟೆ ಹಾಗೂ ಹುಣಸೂರಿನಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಹೊಗೆಸೊಪ್ಪು ಹೆಚ್ಚು ಬೆಳೆಯುವ ಪಿರಿಯಾಪಟ್ಟಣದಲ್ಲಿ ಖರೀದಿ ಕೇಂದ್ರವನ್ನು ತೆರೆದಿಲ್ಲ.

ತಿ.ನರಸೀಪುರ ಕೇಂದ್ರದಲ್ಲಿ 5,746 ಕ್ವಿಂಟಲ್ ಖರೀದಿಸಿದ್ದು, ಮೊದಲ ಸ್ಥಾನದಲ್ಲಿದೆ. ಹುಣಸೂರು ಇಲ್ಲಿಯ ವರಿಗೂ ಒಂದು ಕ್ವಿಂಟಲ್ ಸಹ ಖರೀದಿ ಸಿಲ್ಲ. ಉಳಿದಂತೆ ಬನ್ನೂರು (3449), ಕೆ.ಆರ್.ನಗರ (2350), ಮೈಸೂರು (1701), ಎಚ್.ಡಿ. ಕೋಟೆ (820) ಕ್ವಿಂಟಲ್ ಬತ್ತವನ್ನು ಖರೀದಿಸಲಾಗಿದೆ.

ಉತ್ತಮ ಬೆಲೆ: ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಲ್ ಬತ್ತಕ್ಕೆ 750 ರಿಂದ 800 ರೂಪಾಯಿಗಳಿಗೆ ಬತ್ತವನ್ನು ಖರೀದಿಸಲಾಗುತ್ತಿದ್ದು, ಇದರಿಂದ ರೈತರಿಗೆ ಪ್ರತಿ ಕ್ವಿಂಟಲ್‌ಗೆ 550 ನಷ್ಟವಾಗುತ್ತಿದೆ ಎನ್ನುವುದು ರೈತರ ಆರೋಪ. ಆದರೆ, ಮುಕ್ತ ಮಾರುಕಟ್ಟೆ ಯಲ್ಲಿ ಒಂದು ಸಾವಿರದವರೆಗೂ ಬತ್ತವನ್ನು ಕೊಳ್ಳಲಾಗುತ್ತಿದೆ ಎನ್ನುವ ಮಾತೂ ಇದೆ.

ರಾಜ್ಯ ಸರ್ಕಾರ ರೈತರಿಗೆ ನೆರವಾಗುವ ದೃಷ್ಟಿಯಿಂದ ನವೆಂಬರ್ 22 ರಿಂದ ಬತ್ತ ಖರೀದಿ ಕೇಂದ್ರಗಳನ್ನು ಎಪಿಎಂಸಿಯಲ್ಲಿ ತೆರೆದು ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದೆ. `ಎ~ ದರ್ಜೆಯ ಬತ್ತಕ್ಕೆ ರೂ.1360, `ಬಿ~ ದರ್ಜೆಯ ಬತ್ತಕ್ಕೆ 1330 ಬೆಲೆ ಇದೆ. `ಎ~ ದರ್ಜೆಯಲ್ಲಿ ಸಣ್ಣಬತ್ತ, ರಾಜಮುಡಿ, ಗೌರಿ ಸಣ್ಣದಂತಹ ಬತ್ತವಿದೆ.

`ಬಿ~ದರ್ಜೆಯಲ್ಲಿ ಐಆರ್ 64, ಬಾಂಗ್ಲಾರೈಸ್ ಸೇರಿದಂತೆ ದಪ್ಪ ಬತ್ತವಿದೆ. ಹೀಗಾಗಿ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ.

`ರಾಜ್ಯ ಸರ್ಕಾರ ಖರೀದಿ ಕೇಂದ್ರವನ್ನು ತೆರೆದಿರುವುದು ಸ್ವಾಗತಾರ್ಹ. ಆದರೆ ಶೇ.75 ರಷ್ಟು ಸಣ್ಣ ರೈತರು ಈಗಾಗಲೇ ದಲ್ಲಾಳಿಗಳ ಮುಖಾಂತರ ಬತ್ತವನ್ನು ಮಾರಾಟ ಮಾಡಿಬಿಟ್ಟಿದ್ದಾರೆ. ಇಂತಹವರಿಗೆ ಈ ಕೇಂದ್ರದಿಂದ ಅನುಕೂಲವಾಗಿಲ್ಲ. ಆದ್ದರಿಂದ ಸರ್ಕಾರ ಮುಂದೆ ಎಚ್ಚೆತ್ತುಕೊಂಡು ಸಕಾಲದಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಇಲ್ಲದೇ ಹೋದರೆ ರೈತರು ನಷ್ಟ ಅನುಭವಿಸಿ, ಮುಂದೆ ಬತ್ತ ಬೆಳೆಯುವುದನ್ನೇ ನಿಲ್ಲಿಸುವ ಸ್ಥಿತಿ ಉದ್ಭವವಾಗುತ್ತದೆ~ ಎಂದು ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್ ಹೇಳುತ್ತಾರೆ.

ಹುಣಸೂರಿನಲ್ಲಿ ವಿಳಂಬ
ಹುಣಸೂರಿನ 20 ದಿನಗಳ ಹಿಂದೆಯೇ ಖರೀದಿ ಕೇಂದ್ರ ಆರಂಭವಾಗಿದೆ. ಆದರೆ ಖರೀದಿ ಕೇಂದ್ರದವರು ರೈತರನ್ನು ದಿಕ್ಕು ತಪ್ಪಿಸಿದರು. ಹೀಗಾಗಿ ರೈತರು ಅತ್ತ ಹೋಗುವುದನ್ನೇ ನಿಲ್ಲಿಸಿದರು. ಅಲ್ಲದೇ ಎಪಿಎಂಸಿಯಲ್ಲಿ ಗೋದಾಮಿನ ಕೊರತೆಯೂ ಇದೆ. ರತ್ನಾಪುರಿ ಯಾರ್ಡ್ ದೂರ ಇರುವುದರಿಂದ ಸಾಗಾಣಿಕೆ ವೆಚ್ಚ ಹೆಚ್ಚಾಗುವ  ಕಾರಣ ರೈತರು ಹಿಂದೇಟು ಹಾಕಿದರು. ಹೀಗಾಗಿ ಇಲ್ಲಿಯವರಿಗೂ ಈ ಕೇಂದ್ರ ದಲ್ಲಿ ಒಂದು ಕ್ವಿಂಟಲ್ ಬತ್ತವನ್ನೂ ಖರೀದಿಸಿಲ್ಲ. `ಮುಂದಿನ ದಿನಗಳಲ್ಲಿ ಹುಣಸೂರು ಕೇಂದ್ರದಲ್ಲಿಯೂ ಖರೀದಿ ಆಗಬಹುದು~ ಎನ್ನುವುದು ಕರ್ನಾಟಕ ರಾಜ್ಯ ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಯದೇವ ಅರಸ್ ನಂಬಿಕೆ.

`ಕೇಂದ್ರಗಳಲ್ಲಿ ಬತ್ತದ ಜೊತೆಗೆ ರಾಗಿ ಮತ್ತು ಮೆಕ್ಕಜೋಳವನ್ನು ಖರೀದಿಸಲು ವ್ಯವಸ್ಥೆ ಮಾಡಲಾಗಿದೆ. ಆದರೆ ರಾಗಿ ಕೊಯ್ಲು ಇನ್ನೂ ಆಗದೇ ಇರುವುದರಿಂದ ಖರೀದಿ ಸಾಧ್ಯವಾಗಿಲ್ಲ~ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ  ನಿರ್ದೇಶಕಿ ಕುಮುದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.