ಮೈಸೂರು: `ವಸ್ತುಪ್ರದರ್ಶನಗಳು ಜ್ಞಾನ ಕೇಂದ್ರ ಗಳು. ದಸರಾ ವಸ್ತುಪ್ರದರ್ಶನ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದೆ~ ಎಂದು ಸಾಹಿತಿ ಡಾ.ದೇ.ಜವರೇಗೌಡ ಬಣ್ಣಿಸಿದರು.
ನಗರದ ವಸ್ತುಪ್ರದರ್ಶನ ಮೈದಾನದ ಕಾಳಿಂಗರಾವ್ ಮಂಟಪದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಮತ್ತು ಅಶ್ವಿನಿ ಎಂಟರ್‌ಪ್ರೈಸಸ್ ಅಂಡ್ ಬಿಲ್ಡರ್ಸ್ ಸಹಯೋಗದಲ್ಲಿ ನಡೆದ `ಬೇಸಿಗೆ ಮೇಳ-2012~ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. `ಸಾಂಸ್ಕೃತಿಕ ನಗರಿಯ ದಸರಾ ವಸ್ತುಪ್ರದರ್ಶನ ವನ್ನು ನೋಡಲು ದೇಶ ವಿದೇಶಗಳಿಂದ ಜನರು ಬರುತ್ತಾರೆ. ಇದನ್ನು ವಿಶ್ವವೇ ಗಮನ ಸೆಳೆಯುವಂತೆ ಅಭಿವೃದ್ಧಿ ಮಾಡಬಹು ದಾಗಿದೆ. ಆದರೆ ಇದಕ್ಕೆ ಕಾನೂನು ತೊಡಕುಗಳು ಎದುರಾಗುತ್ತಿವೆ ಎಂದು ಪ್ರಾಧಿಕಾರದ ಅಧ್ಯಕ್ಷರು ಹೇಳುತ್ತಿರುವುದು ವಿಷಾದಕರ~ ಎಂದು ಹೇಳಿದರು.
`ಮಹಾಕಾವ್ಯಗಳು, ಬೃಹತ್ ಗ್ರಂಥಗಳು ನಮ್ಮಲ್ಲಿ ಹೊರಬಂದಷ್ಟು ಬೇರಾವ ದೇಶದಲ್ಲೂ ಬಂದಿಲ್ಲ. ಕನ್ನಡ ಸಾಹಿತ್ಯ ಲೋಕಕ್ಕೆ ಅನೇಕರು ಕೊಡುಗೆ ನೀಡಿ ಶ್ರೀಮಂತಗೊಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಅರ್ಹರನ್ನು ಆಯ್ಕೆ ಮಾಡುತ್ತಾರೆ ಎನ್ನುವ ನಂಬಿಕೆ ಇದೆ~ ಎಂದು ಹೇಳಿದರು.
ಸಾಹಿತಿ ಡಾ.ಮಳಲಿ ವಸಂತಕುಮಾರ್ ಮಾತ ನಾಡಿ, `ವಸ್ತುಪ್ರದರ್ಶನದಲ್ಲಿ ಗ್ರಾಹಕ ತಮಗಿಷ್ಟ ಬಂದ ವಸ್ತುಗಳನ್ನು ಖರೀದಿ ಮಾಡಬಹುದು. ತೆರಿಗೆ ರಹಿತ ನೇರ ಮಾರುಕಟ್ಟೆಗೆ ಇಲ್ಲಿ ಅವಕಾಶವಿದೆ. ಗ್ರೀಕ್ ಬಿಟ್ಟರೆ ನಗರದಲ್ಲಿ ಪ್ರಕೃತಿದತ್ತವಾಗಿ ವಸ್ತುಪ್ರದರ್ಶನ ಇದೆ. ಹಾಗಾಗಿ ಹೆಚ್ಚು ಜನರು ಇದನ್ನು ಇಷ್ಟಪಡುತ್ತಾರೆ~ ಎಂದು ಹೇಳಿದರು.
ಎಸಿಪಿ (ದೇವರಾಜ ವಿಭಾಗ) ಚಲುವರಾಜು, ಮುಡಾ ಅಧ್ಯಕ್ಷ ಎಲ್.ನಾಗೇಂದ್ರ, ಕರ್ನಾಟಕ ರಾಜ್ಯ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಬಿ.ಪಿ.ಮಂಜುನಾಥ್, ಪ್ರಭಾರ ಸಿಇಓ ಚುಂಚೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಗೌರವ ಕಾರ್ಯದರ್ಶಿ ಎಂ.ಚಂದ್ರಶೇಖರ್, ಎನ್.ನೀಲಕಂಠ, ಅಶ್ವಿನಿ ಎಂಟರ್‌ಪ್ರೈಸಸ್ ಅಂಡ್ ಬಿಲ್ಡರ್ಸ್‌ನ ಮಂಜು ಉಪಸ್ಥಿತರಿದ್ದರು.
ದೇಜಗೌ, ಮುಖ್ಯಮಂತ್ರಿ ಪದಕ ವಿಜೇತರಾದ ನಗರ ಅಪರಾಧ ದಳ (ಸಿಸಿಬಿ)ದ ಎಸ್‌ಐ ಗುರುಪ್ರಸಾದ್, ಅಶ್ವರೋಹಿ ಪಡೆಯ ಎಚ್.ಸಿದ್ದೇಗೌಡ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಹಿನ್ನೆಲೆ ಗಾಯಕರಾದ ಬದ್ರಿಪ್ರಸಾದ್ ಮತ್ತು ಅನುರಾಧ ಭಟ್ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.