ADVERTISEMENT

ವಿಶ್ವವಿದ್ಯಾಲಯ ಉನ್ನತ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 6:25 IST
Last Updated 28 ಫೆಬ್ರುವರಿ 2018, 6:25 IST

ಮೈಸೂರು: ರಾಜ್ಯದ ವಿಶ್ವವಿದ್ಯಾಲಯ ಗಳ ಸಮಸ್ಯೆಗಳನ್ನು ಚರ್ಚಿಸಲು ವಿಶ್ವವಿದ್ಯಾಲಯ ಉನ್ನತಮಟ್ಟದ ಶೈಕ್ಷಣಿಕ ಸಮಿತಿಯನ್ನು ರಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಿಶ್ವವಿದ್ಯಾ ನಿಲಯದ ವಿಶ್ರಾಂತ ಕುಲಪತಿ ಪ್ರೊ.ರಾಮೇಗೌಡ ತಿಳಿಸಿದರು.

ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಇದನ್ನು ಸರಿಪಡಿಸುವ ಜವಾಬ್ದಾರಿ ಶಿಕ್ಷಣ ತಜ್ಞರಿಗೆ ಇದೆ. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧ ವಿ.ವಿ.ಗಳ ವಿಶ್ರಾಂತ ಕುಲಪತಿಗಳು, ಹೋರಾಟಗಾರರು, ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇನ್ನೆರಡು ದಿನಗಳಲ್ಲಿ ಸಮಿತಿಯ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು. ಭವಿಷ್ಯದಲ್ಲಿ ಶೈಕ್ಷಣಿಕ ಸುಧಾರಣೆಗಳು, ಅಕ್ರಮಗಳನ್ನು ತಡೆಗಟ್ಟುವುದು ಈ ಸಮಿತಿಯ ಕಾರ್ಯವೈಖರಿಯಾಗಲಿದೆ ಎಂದರು.

ADVERTISEMENT

ಕೆಎಸ್‌ಒಯು ಆಡಳಿತ ಮಂಡಳಿ ಸದಸ್ಯ ಕೆ.ಎಸ್‌.ಶಿವರಾಮು ಮಾತನಾಡಿ, ‘ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ವು ಇಬ್ಬಂದಿ ನೀತಿಯನ್ನು ಅನುಸರಿಸುತ್ತಿದೆ. ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯಕ್ಕೆ ತಾಂತ್ರಿಕ ಕೋರ್ಸ್‌ ನಡೆಸಲು ಅನುಮತಿ ನೀಡುವ ಯುಜಿಸಿ, ಕೆಎಸ್‌ಒಯುಗೆ ನಿರಾಕರಿಸುತ್ತದೆ. ಕೆಎಸ್‌ಒಯುಗೆ ಒಮ್ಮೆ ಮಾನ್ಯತೆ ನೀಡುವುದಾಗಿ ಹೇಳಿ, ಇನ್ನೊಮ್ಮೆ ಆಗದು ಎನ್ನುತ್ತದೆ. ಇಂತಹ ದ್ವಂದ್ವನಿಲುವನ್ನು ಯುಜಿಸಿ ಕೈ ಬಿಡಬೇಕು. ಈ ಕುರಿತು ಹೋರಾಟ ನಡೆಸಲು ಸಮಿತಿಯು ತೀರ್ಮಾನ ತೆಗೆದುಕೊಳ್ಳಲಿದೆ’ ಎಂದರು.

ಕೇಂದ್ರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್‌ ಅವರು ಕೆಎಸ್‌ಒಯು ಸಂಬಂಧ ಇಬ್ಬಂದಿ ಹೇಳಿಕೆ ನೀಡುತ್ತಿದ್ದಾರೆ. ಒಮ್ಮೆ ಮಾನ್ಯತೆ ನೀಡುವುದಾಗಿ ಹೇಳುವ ಅವರು, ಮತ್ತೊಮ್ಮೆ ವಿ.ವಿ ಬಗ್ಗೆ ಮಾಹಿತಿಯೇ ಇಲ್ಲ ಎನ್ನುತ್ತಾರೆ. ಇವರ ಈ ಮಾತಿನ ಹಿಂದೆ ಶ್ರೀಮಂತ ಶಿಕ್ಷಣ ಉದ್ಯಮಿಗಳ ಪಿತೂರಿಯಿದೆ. ಈ ಹಿಂದೆ ವಿ.ವಿ.ಯ ಸ್ಯಾಟ್‌ಲೈಟ್‌ ಕೇಂದ್ರಗಳಾಗಿ ತಾಂತ್ರಿಕ ಕೋರ್ಸ್‌ ನಡೆಸಿ, ದುಬಾರಿ ಶುಲ್ಕ ಸ್ವೀಕರಿಸಿರುವ ಈ ಸಂಸ್ಥೆಗಳು, ವಿ.ವಿ.ಗೆ ಮಾನ್ಯತೆ ಸಿಕ್ಕಲ್ಲಿ ಹಣ ವಾಪಸು ಮಾಡಬೇಕಾಗುತ್ತದೆ.

ಹಾಗಾಗಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ವಿ.ವಿ.ಗೆ ಮಾನ್ಯತೆಯೇ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ‘ಕೆಎಸ್ಒಯುನ ಹಿಂದಿನ ಇಬ್ಬರು ಕುಲಪತಿಗಳಿಂದ ಸಾಕಷ್ಟು ಅಕ್ರಮವಾಗಿದೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಕುರಿತು ಸಮಿತಿಯು ರಾಜ್ಯ ಸರ್ಕಾರಕ್ಕೆ ಮನವಿಯನ್ನೂ ಸ‌ಲ್ಲಿಸಲಿದೆ’ ಎಂದರು.

ಶೈಕ್ಷಣಿಕ ಭಯೋತ್ಪಾದಕರಿಗೆ ಟಿಕೆಟ್

ಮೈಸೂರು: ‘ಜೆಡಿಎಸ್‌ ವತಿಯಿಂದ ಚಾಮರಾಜ ಕ್ಷೇತ್ರದಲ್ಲಿ ಶೈಕ್ಷಣಿಕ ಭಯೋತ್ಪಾದಕರಿಗೆ ಟಿಕೆಟ್ ನೀಡಿದೆ. ಟಿಕೆಟ್ ವಾಪಸು ಪಡೆಯಬೇಕು’ ಎಂದು ಕೆ.ಎಸ್‌.ಶಿವರಾಮು ಒತ್ತಾಯಿಸಿದರು.

‘ಪ್ರೊ.ಕೆ.ಎಸ್.ರಂಗಪ್ಪ ಅವರು ವಿ.ವಿ.ಯಲ್ಲಿ ಅನೇಕ ಅಕ್ರಮಗಳನ್ನು ಮಾಡಿದ್ದಾರೆ. ಇವರಿಗೆ ಟಿಕೆಟ್ ನೀಡಿರುವುದಕ್ಕೆ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಟಿಕೆಟ್‌ ಹಿಂಪಡೆಯದೆ ಇದ್ದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.