ADVERTISEMENT

ಸಂತಸ, ಭಾವುಕತೆಯ ಸಮಾಗಮ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 9:13 IST
Last Updated 29 ಅಕ್ಟೋಬರ್ 2017, 9:13 IST
ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಮತ್ತು ಶಾಸಕ ಜಿ.ಟಿ.ದೇವೇಗೌಡ ಅವರು ಜಾನಕಿ ಅವರನ್ನು ಸನ್ಮಾನಿಸಿದರು. ನಟ ಶಿವರಾಂ ಇದ್ದಾರೆ (ಎಡಚಿತ್ರ), ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಗೀತ ಪ್ರೇಮಿಗಳು
ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಮತ್ತು ಶಾಸಕ ಜಿ.ಟಿ.ದೇವೇಗೌಡ ಅವರು ಜಾನಕಿ ಅವರನ್ನು ಸನ್ಮಾನಿಸಿದರು. ನಟ ಶಿವರಾಂ ಇದ್ದಾರೆ (ಎಡಚಿತ್ರ), ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಗೀತ ಪ್ರೇಮಿಗಳು   

ಮೈಸೂರು: ನಗರದ ಮಾನಸಗಂಗೋತ್ರಿಯ ಬಯಲು ರಂಗಮಂದಿರವು ಶನಿವಾರ ಸಂತಸ ಹಾಗೂ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಗಾನಕಿನ್ನರಿಯ ಗಾಯನವನ್ನು ಕೇಳುವ ಸಂತಸ ಒಂದೆಡೆಯಾದರೆ, ಇದೇ ಕಡೆಯ ಗಾಯನ ಎಂಬ ಭಾವುಕತೆ ಮತ್ತೊಂದೆಡೆ.

ಆರು ದಶಕಗಳಿಂದ ತಮ್ಮ ಮಧುರ ಕಂಠದಿಂದ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ಎಸ್‌.ಜಾನಕಿ ಅವರು ಶನಿವಾರ ಕೊನೆಯ ಸಾರ್ವಜನಿಕ ಕಾರ್ಯಕ್ರಮ ನೀಡಿದರು. ಈ ಸ್ಮರಣೀಯ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ‘ಎಸ್.ಜಾನಕಿ ಮ್ಯೂಸಿಕಲ್‌ ನೈಟ್ಸ್‌’ ಹೆಸರಿನ ಕಾರ್ಯಕ್ರಮವನ್ನು ಜಾನಕಿ ಚಾರಿಟಬಲ್‌ ಟ್ರಸ್ಟ್‌ ಆಯೋಜಿಸಿತ್ತು.

79ರ ಇಳಿವಯಸ್ಸಿನಲ್ಲೂ ಹಲವು ಹಾಡುಗಳನ್ನು ಪ್ರಸ್ತುತಪಡಿಸಿದ ಜಾನಕಿ ಅವರು ಸಂಗೀತಪ್ರೇಮಿಗಳನ್ನು ಹೊಸ ಲೋಕಕ್ಕೆ ಕೊಂಡೊಯ್ದರು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಹೊರರಾಜ್ಯಗಳಿಂದಲೂ ನೂರಾರು ಅಭಿಮಾನಿಗಳು ಬಂದಿದ್ದರು.

ADVERTISEMENT

1986ರಲ್ಲಿ ತೆರೆಕಂಡ ’ಪ್ರೀತಿ’ ಚಿತ್ರದ ‘ಗಜವದನ ನೀನೆ ಗುಣಸಾಗರ’ ಹಾಡಿನ ಮೂಲಕ ಸಂಗೀತ ಸಂಜೆಗೆ ಚಾಲನೆ ನೀಡಿದ ಜಾನಕಿ ಅವರು ಆ ಬಳಿಕ ಒಂದೊಂದೇ ಹಾಡುಗಳ ಮೂಲಕ ಬಯಲುರಂಗ ಮಂದಿರದಲ್ಲಿ ನೆರೆದಿದ್ದವರನ್ನು ಹೊಸ ಲೋಕಕ್ಕೆ ಕೊಂಡೊಯ್ದರು. ಆಯಾ ಚಲನಚಿತ್ರಗಳ ದೃಶ್ಯಗಳನ್ನು ವೇದಿಕೆಯಲ್ಲಿದ್ದ ಬೃಹತ್‌ ಪರದೆಯಲ್ಲಿ ತೋರಿಸಲಾಯಿತು.

1974ರಲ್ಲಿ ತೆರೆಕಂಡ ‘ಎರಡು ಕನಸು’ ಚಿತ್ರದ ಹಿಟ್‌ ಹಾಡುಗಳಾದ ‘ಪೂಜಿಸಲೆಂದೇ ಹೂಗಳ ತಂದೆ’ ಮತ್ತು ‘ಇಂದು ಎನಗೆ...’ ಹಾಡುಗಳನ್ನು ಪ್ರಸ್ತುಪಡಿಸಿದರು. ಈ ಹಾಡಿಗೆ ಸಂಗೀತ ನೀಡಿದ್ದ ರಾಜನ್‌ ಅವರು ವೇದಿಕೆಯಲ್ಲಿದ್ದರು. 1976ರ ‘ಮಾಂಗಲ್ಯಭಾಗ್ಯ’ ಚಿತ್ರದ ‘ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ’ ಹಾಡು ಪ್ರಸ್ತುತಪಡಿಸುವ ಮುನ್ನ ವೇದಿಕೆಯಲ್ಲಿ ಭಾವುಕ ಕ್ಷಣಗಳು ‌ಮೂಡಿಬಂದವು.

40 ವರ್ಷಗಳ ಹಿಂದಿನ ಚಲನಚಿತ್ರದಲ್ಲಿ ಜತೆಯಾಗಿ ಕೆಲಸ ಮಾಡಿದ್ದ ಮೂವರು ದಿಗ್ಗಜರ ಸಮಾಗಮಕ್ಕೆ ವೇದಿಕೆ ಸಾಕ್ಷಿಯಾಯಿತು. ಜಾನಕಿ ಅವರು ಈ ಚಿತ್ರದಲ್ಲಿ ಹಾಡಿದ್ದರೆ, ರಾಜನ್‌ ಸಂಗೀತವನ್ನು ನೀಡಿದ್ದರು. ಇದೇ ಚಿತ್ರದಲ್ಲಿ ನಟಿಸಿದ್ದ ಜಯಂತಿ ಅವರೂ ವೇದಿಕೆಗೆ ಬಂದಾಗ ಪ್ರೇಕ್ಷಕರ ಚಪ್ಪಾಳೆಯ ಸದ್ದು ಮುಗಿಲುಮುಟ್ಟಿತು. ಜಾನಕಿ ಅವರನ್ನು ಅಪ್ಪಿಕೊಂಡ ಜಯಂತಿ ಭಾವುಕರಾದರು.

‘ಜಾನಕಿ ಅವರ ಹಾಡುಗಳಿಂದಾಗಿ ನನ್ನ ಚಿತ್ರಗಳು ಯಶಸ್ಸು ಗಳಿಸಿದವು. ಅವರು ಹಾಡು ನಿಲ್ಲಿಸಬಾರದು. ಹಾಡಿನ ಮೂಲಕ ಸಂಗೀತಪ್ರಿಯರನ್ನು ಖುಷಿಪಡಿಸುತ್ತಲೇ ಇರಬೇಕು’ ಎಂದು ಜಯಂತಿ ಕೋರಿದರು. ‘ನೀವು ನಟಿಸುತ್ತಾ ಇರೋವರೆಗೂ ನಾನು ಹಾಡಿದೆ. ಆದರೆ ಈಗ ನಟಿಸುತ್ತಾ ಇಲ್ಲ. ಆದ್ದರಿಂದ ನಾನು ಕೂಡಾ ಹಾಡು ನಿಲ್ಲಿಸಿದ್ದೇನೆ’ ಎಂದು ಜಾನಕಿ ಹೇಳಿದಾಗ ಎಲ್ಲರಲ್ಲೂ ನಗು ಮೂಡಿತು.

‘ಜಾನಕಿ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಚಲನಚಿತ್ರಗಳಲ್ಲಿ ಜಾನಕಿ ಅವರು ಹಾಡುವುದಾದರೆ ನಮಗೆ ನಟನೆ ಮಾಡುವ ಅಗತ್ಯವೇ ಇರಲಿಲ್ಲ. ಹಲವು ವರ್ಷಗಳ ಬಿಡುವಿನ ಬಳಿಕ ಅವರ ಭೇಟಿ ಸಾಧ್ಯವಾಗಿರುವುದು ಸಂತಸ ನೀಡಿದೆ’ ಎಂದು ಚಲನಚಿತ್ರ ನಟಿ ಭಾರತಿ ವಿಷ್ಣುವರ್ಧನ್‌ ಹೇಳಿದರು. ರಾಜವಂಶಸ್ಥರಾದ ಪ್ರಮೋದಾ ದೇವಿ ಮತ್ತು ಶಾಸಕ ಜಿ.ಟಿ.ದೇವೇಗೌಡ ಅವರು ಜಾನಕಿ ಅವರನ್ನು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.