ADVERTISEMENT

ಸಾಲಮನ್ನಾಗೆ ಆಗ್ರಹ, ಪ್ರತಿಭಟನೆ

ಕುಲಸಚಿವರ ಅಮಾನತಿಗೆ ವಿದ್ಯಾರ್ಥಿಗಳ ಒತ್ತಾಯ; ಟಿಬೆಟ್‌ ಸ್ವಾತಂತ್ರ್ಯಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 7:27 IST
Last Updated 11 ಮಾರ್ಚ್ 2017, 7:27 IST
ಮೈಸೂರು: ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಸಿಪಿಐ, ಕುಲಸಚಿವ ಪ್ರೊ.ಆರ್‌.ರಾಜಣ್ಣ ಅವರನ್ನು ಸೇವೆಯಿಂದ ವಜಾಗೊಳಿ ಸುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ಟಿಬೆಟ್‌ ಸ್ವಾತಂತ್ರ್ಯಕ್ಕೆ ಆಗ್ರಹಿಸಿ ಟಿಬೆಟನ್ನರು ನಗರದಲ್ಲಿ ಶುಕ್ರವಾರ ಸರಣಿ ಪ್ರತಿಭಟನೆ ನಡೆಸಿದರು.
 
ಗಾಂಧಿಚೌಕದಲ್ಲಿ ಜಮಾಯಿಸಿದ ಸಿಪಿಐ ಕಾರ್ಯಕರ್ತರು ಜನಾಗ್ರಹ ಚಳವಳಿ ನಡೆಸಿದರು. ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ ಎಂದು ದೂರಿದರು.
 
ರಾಜ್ಯದ 176 ತಾಲ್ಲೂಕುಗಳ ಪೈಕಿ, 160 ತಾಲ್ಲೂಕುಗಳಲ್ಲಿ ಭೀಕರ ಬರ ಪರಿಸ್ಥಿತಿ ತಲೆದೋರಿದೆ. ಮುಂಗಾರು ಮಳೆ ಕೊರತೆಯಿಂದಾಗಿ ಸುಮಾರು ₹ 17,500 ಕೋಟಿ ಬೆಳೆ ನಷ್ಟ ಸಂಭವಿಸಿದೆ. ಹಿಂಗಾರು ಹಂಗಾಮಿನಲ್ಲಿ ₹ 7,160 ಕೋಟಿ ನಷ್ಟ ಉಂಟಾಗಿದೆ ಎಂದು ಸರ್ಕಾರ ಅಂದಾಜು ಮಾಡಿದೆ.
 
ನೋಟು ಚಲಾವಣೆ ರದ್ದು ಮಾಡಿದ ಪರಿಣಾಮ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಬಜೆಟ್‌ನಲ್ಲಿ ರೈತರಿಗೆ ಪೂರಕವಾಗಿರುವ ಯಾವ ಘೋಷಣೆ ಮಾಡಿಲ್ಲ. ರೈತರ ಸಾಲ ಮನ್ನಾ ಮಾಡುವ ನಿರೀಕ್ಷೆಯೂ ಹುಸಿಯಾಗಿದೆ. ವಿನಾಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಪ್ರತ್ಯಾರೋಪದಲ್ಲಿ ತೊಡಗಿವೆ ಎಂದು ಆರೋಪಿಸಿದರು.
 
ಸಿಪಿಐ ಜಿಲ್ಲಾ ಘಟಕದ ಕಾರ್ಯ ದರ್ಶಿ ಎಚ್‌.ಆರ್‌.ಶೇಷಾದ್ರಿ, ಸಹ ಕಾರ್ಯದರ್ಶಿ ಎಚ್‌.ಬಿ.ರಾಮಕೃಷ್ಣ, ರಾಜು ಇದ್ದರು.
 
ಕುಲಸಚಿವರ ಅಮಾನತಿಗೆ ಆಗ್ರಹ: ಮಾನಸಗಂಗೋತ್ರಿಯ ರೌಂಡ್‌ ಕ್ಯಾಂಟೀನ್‌ ಎದುರು ಜಮಾಯಿಸಿದ ದಲಿತ ವಿದ್ಯಾರ್ಥಿ ಒಕ್ಕೂಟದ ಸದಸ್ಯರು, ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಆರ್‌.ರಾಜಣ್ಣ ವಿರುದ್ಧ ಘೋಷಣೆ ಕೂಗಿದರು.
 
ಸಿಂಡಿಕೇಟ್‌ ಸಭೆಯ ನಡಾವಳಿಗಳನ್ನು ಕುಲಸಚಿವರು ಉದ್ದೇಶಪೂರ್ವಕಾಗಿ ತಡೆಹಿಡಿದು ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿದ್ದಾರೆ. ಜ.10ರಂದು ನಡೆದ 200 ಬೋಧಕೇತರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಯಲ್ಲಿ ಮೀಸಲಾತಿ ನಿಯಮ ಅನುಸಿರಿಸಿಲ್ಲ. ಕುಲಪತಿ ಯಾಗಿದ್ದ ಪ್ರೊ.ಕೆ.ಎಸ್‌.ರಂಗಪ್ಪ ಅವರ ಸ್ವಯಂ ನಿವೃತ್ತಿಗೆ ಅವಕಾಶ ನೀಡಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು.
 
2007ರಲ್ಲಿ ನೇಮಕಗೊಂಡಿ ರುವ 32 ಉಪನ್ಯಾಸಕರು ಹಾಗೂ ಸಹಾಯಕ ಪ್ರಾಧ್ಯಾ ಪಕರು ನೂತನ ಪಿಂಚಣಿ ಯೋಜನೆ ಅಡಿ ಬರುತ್ತಾರೆ. ಆದರೆ, ಇವರಿಗೆ 2006ಕ್ಕಿಂತ ಹಿಂದೆ ನೇಮಕವಾದ ಸಿಬ್ಬಂದಿಗೆ ನೀಡುವ ಪಿಂಚಣಿ ಸೌಲಭ್ಯಕ್ಕೆ ಅನುಮತಿ ನೀಡಲಾಗಿದೆ. ಸಿಬ್ಬಂದಿ ಬಡ್ತಿಯಲ್ಲಿಯೂ ಮೀಸಲಾತಿ ನಿಯಮ ಪಾಲನೆಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಒಕ್ಕೂಟದ ಅಧ್ಯಕ್ಷ ನಟರಾಜು ಶಿವಣ್ಣ, ಗೌರವಾಧ್ಯಕ್ಷ ಮಹೇಶ್ ಸೋಸಲೆ, ಗೌರವ ಸಲಹೆಗಾರ ಎಂ.ಗುರುಮೂರ್ತಿ ಇದ್ದರು.
 
ಟಿಬೆಟ್ ಸ್ವಾತಂತ್ರ್ಯಕ್ಕೆ ಒತ್ತಾಯ: ಚೀನಾದ ಹಿಡಿತದಲ್ಲಿರುವ ಟಿಬೆಟ್‌ ಸ್ವಾತಂತ್ರ್ಯಕ್ಕೆ ಆಗ್ರಹಿಸಿ ಟಿಬೆಟನ್ನರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ಹೊರಟ ಮೆರವಣಿಗೆ ಗಾಂಧಿಚೌಕ, ದೇವರಾಜ ಅರಸು ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು.
 
ಲಾರಂಗ್‌ಗಾರ್‌ನಲ್ಲಿ ಟಿಬೆಟನ್ನರ ಸಂಖ್ಯೆಯನ್ನು ಕುಗ್ಗಿಸಲು ಚೀನಾ ನಿರಂತರವಾಗಿ ಪ್ರಯತ್ನಿಸುತ್ತಿದೆ. ಬೌದ್ಧ ಬಿಕ್ಕುಗಳ ಮೇಲೆ ವಿನಾಕಾರಣ ದೌರ್ಜನ್ಯ ಎಸಗಲಾಗುತ್ತಿದೆ. ಟಿಬೆಟನ್ನರ ಮೇಲೆ ನಿತ್ಯ ದಾಳಿ ನಡೆಯುತ್ತಿವೆ. ವಿಶ್ವಸಂಸ್ಥೆ ಕೂಡಲೇ ಮಧ್ಯ ಪ್ರವೇಶಿಸಿ ಟಿಬೆಟ್‌ನಲ್ಲಿ ಬೀಡುಬಿಟ್ಟಿರುವ ಚೀನಾ ಸೈನಿಕರನ್ನು ದೇಶದಿಂದ ಹೊರಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.