ADVERTISEMENT

ಸುತ್ತೂರು ಜಾತ್ರೆಯಲ್ಲಿ ಕೃಷಿ ಬ್ರಹ್ಮಾಂಡ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 9:10 IST
Last Updated 3 ಫೆಬ್ರುವರಿ 2011, 9:10 IST

ಮೈಸೂರು: ಚಿಕ್ಕ ಮಕ್ಕಳಿಗೆ ಆಟಿಕೆ ಕೊಳ್ಳುವ ಅವಸರ, ರೈತರಿಗೆ ಕೃಷಿ ಮಾಹಿತಿ ತಿಳಿದುಕೊಳ್ಳುವ ತವಕ,  ಭಕ್ತರಿಗೆ ಜನಸ್ತೋಮದ ಮಧ್ಯೆ ದೇವರ ದರ್ಶನ ಮಾಡುವ ಕಾತರ, ಕೆಲವರಿಗೆ ದಾಸೋಹ ಸವಿಯುವ ಆತುರ, ಬಿಸಿಲು- ದೂಳಿನಿಂದ ಮತ್ತೆ ಕೆಲವರಿಗೆ ಬೇಸರ. ಈ ದೃಶ್ಯ ಕಂಡು ಬಂದದ್ದು ಸುತ್ತೂರು ಜಾತ್ರಾ ಮಹೋತ್ಸವದ ನಾಲ್ಕನೇ ದಿನ. ಜಾತ್ರೆಯಲ್ಲಿ ಅಪಾರ  ಜನತೆ ಸಂಭ್ರಮ ಸಡಗರದಿಂದ ಪಾಲ್ಗೊಂಡಿದ್ದರು. ಸಮಸ್ತ ವಿಶೇಷಗಳನ್ನು ತಿಳಿಯುವ, ಸಂಭ್ರಮಾಚರಣೆಯನ್ನು ಕಣ್ತುಂಬಿಕೊಳ್ಳಬೇಕು ಎನ್ನುವ ತವಕ ಮನೆ ಮಾಡಿತ್ತು.

ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ವಸ್ತುಪ್ರದರ್ಶನದಲ್ಲಿ ಸುಮಾರು 210 ಮಳಿಗೆಗಳಿದ್ದು, ಶೈಕ್ಷಣಿಕ  ಹಾಗೂ ವ್ಯಾಪಾರೀಕರಣ ಎಂಬ ದೃಷ್ಟಿಯಲ್ಲಿ ಅವಕಾಶ ನೀಡಲಾಗಿತ್ತು. ಕೃಷಿ ಪ್ರಧಾನ, ಆರೋಗ್ಯ ತಿಳಿವಳಿಕೆ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಅರಿವು ಎಂಬ ಮೂರು ಕಲ್ಪನೆಗಳೊಂದಿಗೆ ವಸ್ತುಪ್ರದರ್ಶನವನ್ನು  ಆಯೋಜಿಸಲಾಗಿತ್ತು. ಜನರನ್ನು ಶಿಕ್ಷಣವಂತರನ್ನಾಗಿ ಮಾಡುವುದಕ್ಕೆ ಪ್ರಥಮ ಆದ್ಯತೆ ಕೊಡಲಾಗಿತ್ತು. ಅದರಲ್ಲಿ 40 ಕೃಷಿ ಮಳಿಗೆಗಳಿದ್ದುದು ವಿಶೇಷವಾಗಿತ್ತು.

‘ಒಂದು ಎಕರೆಯಲ್ಲಿ ಕೃಷಿ ಬ್ರಹ್ಮಾಂಡ’ ಎಂಬ ವಿನೂತನ ಪರಿಕಲ್ಪನೆ ಈ ಬಾರಿ ಗಮನ ಸೆಳೆಯಿತು. ಸಣ್ಣ ಹಿಡುವಳಿ ರೈತ ತನಗೆ ಬೇಕಾದ ಆಹಾರ ಬೆಳೆದುಕೊಳ್ಳಲು ಎಲ್ಲ ಮಾಹಿತಿಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ತಿಳಿ ದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಕೃಷಿ ಮೇಳದಲ್ಲಿ ‘ಜೀವಂತ ಪ್ರಾತ್ಯಕ್ಷಿಕೆ’ ಎಂಬ ಪರಿಕಲ್ಪನೆ ಅಡಿಯಲ್ಲಿ  ಎಲ್ಲ ವಿಧದ ಬೆಳೆಗಳನ್ನು ಉತ್ತಮ ಇಳುವರಿಯೊಂದಿಗೆ ಬೆಳೆದು ರೈತರಿಗೆ ಕೃಷಿಯ ಸಮಗ್ರ ದರ್ಶನ ಪಡೆಯು ವ ಅವಕಾಶವನ್ನು ಮಾಡಿಕೊಡಲಾಗಿತ್ತು.

ರಾಸಾಯನಿಕ ಗೊಬ್ಬರ ಬಳಸದೆ, ಸಾವಯವ ಗೊಬ್ಬರದಿಂದ ಉತ್ತಮ ಫಸಲನ್ನು ಪಡೆಯಬಹುದು  ಎಂಬ ಸಂದೇಶವನ್ನು ಕೃಷಿ ಬ್ರಹ್ಮಾಂಡ ಸಾರಿ ಹೇಳುತ್ತಿತ್ತು. ಮತ್ತೊಂದು ಕಡೆ ‘ಕೃಷಿ ವಸ್ತುಪ್ರದರ್ಶನ’ದಲ್ಲಿ  ಬಿತ್ತನೆಬೀಜ, ಗೊಬ್ಬರ, ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಿಲ್ವರ್‌ರ, ಹಿಪ್ಪೆ, ಹುಣಸೆ, ಹೆಬ್ಬೇವು, ನೇರಳೆ ಗಿಡಗಳು, ಟೊಮಾಟೊ, ಮೆಣಸಿನಕಾಯಿ, ಬದನೆ, ಎಲೆ ಕೋಸಿನ ಮಧ್ಯೆ ಈರುಳ್ಳಿಯನ್ನು ಬೆಳೆಯಬಹುದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದ್ದರು.  ಅಲಂಕಾರಿಕ ಹೂ ಜೋಡಣೆ ಹಾಗೂ ಹಣ್ಣು ತರಕಾರಿಗಳು ವಸ್ತುಪ್ರದರ್ಶನದಲ್ಲಿ ಗಮನ ಸೆಳೆದವು. ಜರ್ಬೆ ರ, ಗ್ಲಾಡಿಯೋಲಸ್, ಕೆಂಪು ಎಲೆಕೋಸು, ಬ್ರಕೋಲಿ, ಲೆಟ್ಯೂಸ್, ಪಾಕ್‌ಚಾಯ್, ಹ್ಯಾರಿಕಾಟ್ ಬೀನ್, ಸೆಲೆರಿಯಂಥ ವಿಶಿಷ್ಟ ಬೆಳೆಗಳನ್ನು ರೈತರಿಗೆ ಪರಿಚಯಿಸಲಾಗಿತ್ತು.

ದೊಡ್ಡಮೆಣಸಿನಕಾಯಿ, ಸುಗಂಧದ್ರವ್ಯದ ಬೆಳೆಗಳು, ಬೂದಗುಂಬಳ, ಮಂಗಳೂರು ಸೌತೇಕಾಯಿ, ಗೋರಿ ಕಾಯಿ, ಸೋರೆಕಾಯಿ, ತುಪ್ಪೀರೆಕಾಯಿ ಬೆಳೆಗಳು ಉತ್ತಮ ಇಳುವರಿಯಿಂದ ವಿಶಿಷ್ಟವಾಗಿ ಗೋಚರಿಸಿದವು.  ಕೃಷಿ ಬಗ್ಗೆ ನಿಮಗೆ ಏನು ಗೊತ್ತು? ಯಾವ ಮಾಹಿತಿ ಬೇಕು? ಎಂಬುದನ್ನು ಗೊತ್ತುಪಡಿಸಲು ತಜ್ಞರು ಮತ್ತು  ವಿಜ್ಞಾನಿಗಳೊಂದಿಗೆ ‘ವಿಚಾರ ಸಂಕಿರಣ’ವನ್ನೂ ಏರ್ಪಡಿಸಲಾಗಿತ್ತು. ಹೀಗೆ ‘ಕೃಷಿ ಬ್ರಹ್ಮಾಂಡ’ದಲ್ಲಿ ಕೃಷಿಯನ್ನು ಅಭಿವೃದ್ಧಿಪಡಿಸುವ, ಉತ್ತೇಜಿಸುವ ಅನೇಕ ಕಾರ್ಯಕ್ರಮಗಳ ನ್ನು ಒಂದೇ ಸೂರಿನಡಿ ಹಮ್ಮಿಕೊಂಡು ಕೃಷಿಗೆ ಹೊಸ ಆಯಾಮವನ್ನು, ರೈತರಿಗೆ ಹೊಸ ಚೈತನ್ಯವನ್ನು ನೀಡುವ ಪ್ರಯತ್ನಕ್ಕೆ ಜನತೆಯಿಂದ ಅಭೂತಪೂರ್ವವಾದ ಪ್ರತಿಕ್ರಿಯೆ ದೊರೆಯಿತು.

‘ಪುರಾತನ ಸಂಸ್ಕೃತಿ ಕಣ್ಮರೆ’
ಮೈಸೂರು: ಭಾರತದಲ್ಲಿ ಇಂದಿಗೂ ಪುರಾತನ ಸಂಸ್ಕೃತಿ, ಧರ್ಮ ಜೀವಂತವಾಗಿದೆ ಎಂದರೆ ಅದಕ್ಕೆ ಮುಖ್ಯ   ಕಾರಣ ಸ್ವಾಮೀಜಿಗಳು ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಭಿಪ್ರಾಯಪಟ್ಟರು. ನಂಜನಗೂಡು ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ನವೀಕೃತ  ಜೆಎಸ್‌ಎಸ್ ವಸ್ತುಸಂಗ್ರಹಾಲಯ ಉದ್ಘಾಟಿಸಿ ಮಾತನಾಡಿದರು.

ವಿದೇಶಗಳಲ್ಲಿ ಪುರಾತನ ಸಂಸ್ಕೃತಿ ಕಣ್ಮರೆಯಾಗಿದೆ. ನಾವು ವಿದೇಶದ ಬಗ್ಗೆ ಪುಸ್ತಕಗಳಲ್ಲಿ ಓದುವುದೇ ಬೇರೆ.  ಪ್ರಸ್ತುತ ಕಾಣುವ ಚಿತ್ರಣವೇ ಬೇರೆ. ಜೀವನ ಶೈಲಿ, ವೇಷಭೂಷಣ, ಭಾಷೆ ಎಲ್ಲವೂ ಬದಲಾಗಿದೆ. ಕಾರಣ ಅಲ್ಲಿಯೂ ಪರಕೀಯ ಸಂಸ್ಕೃತಿಯ ದಾಳಿಯಾಗಿದೆ ಎಂದರು. ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ರಾಜಕಾರಣಿಗಳು ದಾರಿತಪ್ಪಿದಾಗ ಮಾರ್ಗದರ್ಶನ ಮಾಡುವುದು ಮಠಾಧೀಶರು. ಎಲ್ಲರಿಗೂ ಸಂಸ್ಕಾರ, ಸನ್ನಡತೆ, ತೋರುತ್ತಾ ಉತ್ತಮವಾಗಿ ಬದುಕುವುದನ್ನು ಕಲಿಸುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಂಸದ ಜಿ.ಎಸ್.ಬಸವರಾಜು, ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಧಾರವಾಡ ಶಾಸಕಿ ಸೀಮಾ ಮಸೂತಿ, ಮದ್ಯಪಾನ  ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ,  ಅಮರನಾಥಗೌಡ ಹಾಜರಿದ್ದರು. ಗ್ರಾಮೀಣ ಸಂಸ್ಕೃತಿಯ ಪ್ರತಿಬಿಂಬ ವಸ್ತುಪ್ರದರ್ಶನ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವ, ಸ್ವಂತಿಕೆಯ ಸಂಕೇತವಾಗಿದೆ ಎಂದು ಕರ್ನಾಟಕ  ರಾಜ್ಯ ಜಾನಪದ ವಿಶ್ವವಿದ್ಯಾನಿಲಯದ ವಿಶೇಷ ಅಧಿಕಾರಿ ಡಾ.ಅಂಬಳಿಕೆ ಹಿರಿಯಣ್ಣ ಅಭಿಪ್ರಾಯಪಟ್ಟರು. ಕೃಷಿ ಸಂಸ್ಕೃತಿಯನ್ನು ನಾವು ಕಳೆದುಕೊಂಡರೆ ವೈವಿಧ್ಯ ಸಂಸ್ಕೃತಿಯನ್ನು, ಜೀವಂತಿಕೆಯನ್ನೇ ಕಳೆದುಕೊಳ್ಳುತ್ತೇವೆ. ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಯಾಂತ್ರೀಕರಣದ ಮೊರೆ ಹೋಗುತ್ತಿದ್ದೇವೆ. ಇದರಿಂದ ಗ್ರಾಮೀಣ  ಕಸುಬುಗಳು ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.