ಮೈಸೂರು: ನಗರದ ಗಾಯತ್ರಿಪುರಂ ಬಡಾವಣೆಯ ಕೆಕೆಎಂಪಿ ಆವರಣದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಎಚ್. ವಿಶ್ವನಾಥ್, ಶಾಸಕರಾದ ತನ್ವೀರ್ ಸೇಟ್, ವಾಸು, ಎಂ.ಕೆ. ಸೋಮಶೇಖರ್, ಪಾಲಿಕೆ ಸದಸ್ಯ ಎಂ. ಸುನೀಲ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸದ ವಿಶ್ವನಾಥ್, `ರಾಜ್ಯದ ಎಲ್ಲ ವರ್ಗಗಳ ಜನತೆಯಲ್ಲಿ ಸ್ವಾಭಿಮಾನ ತುಂಬಿದ ಮಹಾಪುರುಷ ಡಿ. ದೇವರಾಜ ಅರಸು. ಅರಸು ಅವರ ಚಿಂತನೆ ಅದ್ಭುತವಾಗಿತ್ತು. ಅದರ ಫಲವೆಂಬಂತೆ ಸಣ್ಣಪುಟ್ಟ ಜಾತಿಗಳ ಜನರು ಸ್ವಾಭಿಮಾನದಿಂದ ಬದುಕು ಸಾಗಿಸುವಂತಾಗಿದೆ. ಅವರು ಹೇಳಿಕೊಟ್ಟ ಸ್ವಾಭಿಮಾನದ ಪಾಠ ಹಿಂದುಳಿದ ವರ್ಗದ ಜನರ ಬಾಳಲ್ಲಿ ನೆಮ್ಮದಿ ತಂದಿದೆ. ಈ ಕಾರಣಕ್ಕಾಗಿಯೇ ಅರಸು ಅವರನ್ನು ಜನ ಇಂದಿಗೂ ಸ್ಮರಿಸುತ್ತಾರೆ' ಎಂದರು.
`ದೇಶದಲ್ಲಿ ಜಾತಿ, ಧರ್ಮದ ಲೆಕ್ಕಾಚಾರ ಹಾಕದೇ, ಎಲ್ಲರೂ ಸಮಾನರಾಗಿ ಬದುಕುವಂತಾಗಬೇಕು. ಇದಕ್ಕೆ ಮರಾಠ ಪರಿಷತ್ ಆಯೋಜಿಸಿರುವ ಹಿಂದೂ ಹಾಗೂ ಮುಸ್ಲಿಂರೊಂದಿಗಿನ ಬಾಂಧವ್ಯ ಬೆಸೆಯುವ ಇಂತಹ ಕಾರ್ಯಕ್ರಮಗಳು ನಾಂದಿಯಾಗಬೇಕು. ಈ ನಿಟ್ಟಿನಲ್ಲಿ ಮರಾಠ ಪರಿಷತ್ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ, ಮರಾಠ ಭವನ ನಿರ್ಮಾಣಕ್ಕಾಗಿ ಸಂಸದರ ನಿಧಿಯಿಂದ ಐದು ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದರು. ಪಾಲಿಕೆ ಸದಸ್ಯರಾದ ಶೌಕತ್ ಪಾಷಾ, ಶ್ರೀಕಂಠಯ್ಯ, ಮರಾಠ ಪರಿಷತ್ ಅಧ್ಯಕ್ಷ ಕೇಶವರಾವ್ ಜಾಧವ, ಕಾರ್ಯದರ್ಶಿ ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.