ತಿ.ನರಸೀಪುರ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆಎತ್ತಿದೆ. ಅತಿಯಾದ ಬಿಸಿಲಿನಿಂದ ಅಂತರ್ಜಲ ಮೂಲಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದ್ದರೆ, ಮತ್ತೊಂದೆಡೆ ಜಾತ್ರೆ, ಉತ್ಸವಗಳಲ್ಲಿ ಬೇಕಾಬಿಟ್ಟಿಯಾಗಿ ನೀರು ಪೋಲಾಗುತ್ತಿರುವುದೂ ಬವಣೆಗೆ ಕಾರಣವಾಗಿದೆ.
ಸಾಮಾನ್ಯವಾಗಿ ಜನವರಿ, ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಜಾತ್ರೆ, ಹಬ್ಬಗಳು ಬರುತ್ತವೆ. ಈ ಸಂದರ್ಭಗಳಲ್ಲಿ ಜನ ನೀರನ್ನು ಹೆಚ್ಚಾಗಿ ಬಳಸುತ್ತಾರೆ. ಅಲ್ಲದೇ ಗ್ರಾಮಗಳ ಬಾವಿ, ಬೋರ್‌ವೆಲ್, ಕೆರೆ, ಕಟ್ಟೆಗಳಲ್ಲಿಯೂ ಈಗ ಜಲ ಪ್ರಮಾಣ ಕುಸಿದಿದೆ. ಆದರೆ, ತಾಲ್ಲೂಕಿನಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ಸ್ಥಿತಿ ಇಲ್ಲ. ಹೀಗಾಗಿ ಈ ಬಾರಿಯ ಬೇಸಿಗೆಯಲ್ಲೂ ಗ್ರಾಮೀಣರು ನೀರಿಗೆ ಪರಿತಪಿಸುವುದು ತಪ್ಪಿಲ್ಲ.
ಪ್ರಸಕ್ತ ಸಾಲಿನ ವಿವಿಧ ಕುಡಿಯುವ ನೀರು ಯೋಜನೆಗಳಲ್ಲಿ ಬೆಟ್ಟಳ್ಳಿ. ಎಳವೇಗೌಡನಹುಂಡಿ., ಮಾರಗೌಡನಹಳ್ಳಿ, ಗರ್ಗೇಶ್ವರಿ, ಹನುಮನಾಳು, ಯಾಚೇನಹಳ್ಳಿ, ಇಂಡವಾಳು, ಆರ್.ಪಿ.ಹುಂಡಿ, ಯರಗನಹಳ್ಳಿ, ಡಣಾಯಕನಪುರ, ಮಾದಗಹಳ್ಳಿ ಸೇರಿದಂತೆ 13 ಕಡೆ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಕುಡಿಯುವ ನೀರಿನ ಪೂರೈಕೆ ತೊಂದರೆ ನಿವಾರಣೆ ಮಾಡಲು 79 ಕಡೆ ಪೈಪ್‌ಲೈನ್ ವಿಸ್ತರಣೆ ಮಾಡಲಾಗುತ್ತಿದೆ. ಶಾಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ 65 ಕಡೆ ಕಾಮಗಾರಿ ಮುಗಿದಿದೆ. `ಕವರೇಜ್ 0 ಯಿಂದ 25 ಹಾಗೂ 25-50~ ಎಂಬ ಯೋಜನೆ ಯಡಿಯಲ್ಲಿ ಮುದ್ದುಬೀರನಹುಂಡಿ, ಎಡತೊರೆ, ಹಿರಿಯೂರು, ಮೂಗೂರು, ಚೌಹಳ್ಳಿ, ಹಿಟ್ಟುವಳ್ಳಿ, ನಿಲಸೋಗೆಗಳಲ್ಲಿ ನೀರು ಸರಬರಾಜು ಯೋಜನೆ ಕಾಮಗಾರಿ ನಡೆಸಲಾಗುತ್ತಿದೆ.
ಶುದ್ಧೀಕರಣಗೊಳ್ಳದ ನೀರು: ಪಟ್ಟಣ ಹಾಗೂ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳಿಗೆ ಕಪಿಲಾ ನದಿಯಿಂದ ಪೂರೈಕೆಯಾಗುತ್ತಿದೆ. ಈ ಪ್ರದೇಶದಲ್ಲಿ ವಿಪರೀತ ಮರಳು ತೆಗೆದಿದ್ದರಿಂದ ಗುಂಡಿಗಳು ಬಿದ್ದು ನೀರು ನಿಂತಿದೆ. ಇಲ್ಲಿ ತ್ಯಾಜ್ಯ ಸಂಗ್ರಹಣೆಯಾಗಿದೆ. ಹಲವು ವೇಳೆ ಕಲುಷಿತ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ ಎನ್ನುವುದು ನಾಗರಿಕರ ದೂರು.
ಹುಳುಕನಹುಂಡಿ, ಕೆಂಡನಕೊಪ್ಪಲು, ವಾಟಾಳು, ಯಾಚೇನಹಳ್ಳಿ, ಎಸ್.ಮೇಗಡಹಳ್ಳಿ ಹಾಗೂ ಕನ್ನಹಳ್ಳಿ ಮೋಳೆಗಳಲ್ಲಿ ಕೊಳವೆಬಾವಿ ತೋಡಲು ತುರ್ತು ಕಾರ್ಯ (ಕಾರ್ಯಪಡೆ) ಯೋಜನೆಯಲ್ಲಿ 3.6 ಲಕ್ಷ ರೂಪಾಯಿಗಳ ಕ್ರಿಯಾ ಯೋಜನೆ ಕಳುಹಿಸಲಾಗಿದೆ.
15 ಲಕ್ಷ ರೂಪಾಯಿ ವೆಚ್ಚದ ಕಾರ್ಯಪಡೆ ಕಾಮಗಾರಿಯಲ್ಲಿ ಕನ್ನಹಳ್ಳಿ, ಕೊತ್ತೇಗಾಲ, ಕೆಂಡನಕೊಪ್ಪಲು, ವಾಟಾಳು, ಮಾರಗೊಂಡನಹಳ್ಳಿ, ವಡ್ಡರಕೊಪ್ಪಲು, ನಂಜಾಪುರ, ಚಂದಹಳ್ಳಿ, ಕಲಿಯೂರು ಹಾಗೂ ಹಳೇಕುಕ್ಕೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಎಸ್.ಆರ್. ಪುರುಷೋತ್ತಮ್ ತಿಳಿಸಿದ್ದಾರೆ.
ತಾಲ್ಲೂಕು ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸೇವಾ ಕೇಂದ್ರ ಪ್ರಾರಂಭವಾಗಿದೆ. ಈ ಕೇಂದ್ರಕ್ಕೆ ದೂರು ನೀಡಿದ್ದಲ್ಲಿ ಗ್ರಾಮಕ್ಕೆ ಬಂದು ಸಮಸ್ಯೆ ಬಗೆಹರಿಸಲಾಗುತ್ತಿದೆ. ಈ ಸೇವಾ ಕೇಂದ್ರ 24 ಗಂಟೆಗಳ ಸೇವೆಯಲ್ಲಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.