ADVERTISEMENT

ಹವಾಮಾನ ವೈಪರಿತ್ಯಕ್ಕೆ ನಗರೀಕರಣ ಕಾರಣ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 8:00 IST
Last Updated 8 ಮಾರ್ಚ್ 2012, 8:00 IST

ಮೈಸೂರು: ಸಮರ್ಪಕವಾದ ಯೋಜನೆಯಿಲ್ಲದ ನಗರೀಕರಣದಿಂದಾಗಿಯೇ ಹವಾಮಾನ ವೈಪರಿತ್ಯ ಮತ್ತು ನೈಸರ್ಗಿಕ ವಿಪತ್ತುಗಳು ಸಂಭವಿಸುತ್ತಿವೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಶಕ್ತಿ ಮತ್ತು ಜೌಗುಭೂಮಿ ಸಮೂಹ, ಪರಿಸರ ವಿಜ್ಞಾನ ಕೇಂದ್ರದ ಸಂಯೋಜಕ ಡಾ. ಟಿ.ವಿ. ರಾಮಚಂದ್ರ ಹೇಳಿದರು.

ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗ ಮತ್ತು ಮೈಸೂರು ವಿಶ್ವವಿದ್ಯಾಲಯ ಭೂಗೋಳಶಾಸ್ತ್ರ ವಿಭಾಗದ ಸಹಯೋಗದಲ್ಲಿ ಬುಧವಾರ `ಹವಾಮಾನ ಬದಲಾವಣೆ ಮತ್ತು ವಿಪತ್ತು ನಿರ್ವಹಣೆ~ ಕುರಿತು ಆಯೋಜಿಸಲಾಗಿದ್ದ ಯುಜಿಸಿ ಪ್ರಾಯೋಜಿತ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿದ ಅವರು ಮಾತನಾಡಿದರು.

`ಯುರೋಪಿಯನ್ ಶೈಲಿಯ ಕಟ್ಟಡ ನಿರ್ಮಾಣಗಳು ಬೆಂಗಳೂರಿನಂತಹ ಮಹಾನಗರದಲ್ಲಿ ಹೆಚ್ಚಾಗುತ್ತಿವೆ. ಈ ವಿನ್ಯಾಸಗಳು ಯುರೋಪಿನ ತಂಪು ಪ್ರದೇಶಗಳಿಗೆ ಸೂಕ್ತವಾದುವು. ಆದರೆ ನಮಗಲ್ಲ. ನಮ್ಮ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿದಾಗ ಈ ಕಟ್ಟಡಗಳ ಒಳಗೂ ಧಗೆ ಏರುತ್ತದೆ. ಆಗ ಫ್ಯಾನ್, ಏರ್ ಕಂಡಿಷನ್ ವ್ಯವಸ್ಥೆಗಳು ಹೆಚ್ಚುತ್ತವೆ. ಇವೆಲ್ಲಕ್ಕೂ ವಿದ್ಯುತ್ ಬಳಕೆ ಮಿತಿ ಮೀರುತ್ತದೆ. ವಿದ್ಯುತ್ ಉತ್ಪಾದನೆಯಿಂದಾಗಿ ಬಿಡುಗಡೆಯಾಗುವ ಇಂಗಾಲದ ಡೈ ಆಕ್ಸೈಡ್ ಮತ್ತಿತರ ತ್ಯಾಜ್ಯಗಳು ವಾತಾವರಣ ಸೇರುತ್ತವೆ. ಇದರಿಂದ ಆಗುವ ಹಸಿರು ಮನೆ ಪರಿಣಾಮದಿಂದ ಅನಿಯಂತ್ರಿತ ಮಳೆ ಬೀಳುತ್ತಿದ್ದು, ಹಸಿರು ಮರಗಳು ಇಲ್ಲದೇ ಪ್ರವಾಹಗಳು ಹೆಚ್ಚುತ್ತಿವೆ~ ಎಂದು ಹೇಳಿದರು.

`ಬೆಂಗಳೂರಿನಲ್ಲಿ ಅಕ್ಷರಸ್ಥರ ಸಂಖ್ಯೆ ಶೇ 85ರಷ್ಟಿದೆ. ಆದರೆ ಪರಿಸರ ವಿಷಯದಲ್ಲಿ ಸಾಕ್ಷರ ಸಂಖ್ಯೆ ಬಹಳ ಕಡಿಮೆ ಇದೆ. ಜನರಲ್ಲಿ ತಮ್ಮ ವಾತಾವರಣ ಮತ್ತು ಪರಿಸರದ ಬಗ್ಗೆ ಜಾಗೃತಿಯೇ ಇಲ್ಲ. ಎರಡು, ಮೂರು ದಶಕಗಳ ಹಿಂದೆ ಮಳೆ ಬಂದಾಗ ಬೆಂಗಳೂರಿನಲ್ಲಿ ಪ್ರವಾಹ ಬರುತ್ತಿರಲಿಲ್ಲ. ಆದರೆ ಈಚಿನ ದಿನಗಳಲ್ಲಿ ಮಳೆ ಬಂದರೆ ಎಲ್ಲ ಬೀದಿಗಳೂ, ರಸ್ತೆಗಳೂ ತುಂಬಿ ಹರಿಯುತ್ತವೆ. ಇಂತಹ ಪರಿಸ್ಥಿತಿ ಮೈಸೂರಿನಲ್ಲಿಯೂ ಇದೆ. ಮುಚ್ಚುತ್ತಿರುವ ಕೆರೆಗಳು ಮತ್ತು ಅಸಮರ್ಪಕ ಒಳಚರಂಡಿ ವ್ಯವಸ್ಥೆಗಳು ಇದಕ್ಕೆ ಕಾರಣ~ ಎಂದು ಹೇಳಿದರು.

`ನಾವು ಮೊದಲು ನಮ್ಮ ನಿಸರ್ಗದ ಕಾರ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಅದನ್ನು ಕಾಪಾಡಿಕೊಂಡು ನಮ್ಮ ಅಗತ್ಯಗಳನ್ನು ಪೂರೈಸುವ ಬಗೆಯೂ ತಿಳಿಯುತ್ತದೆ. ಆದರೆ ಈ ಕುರಿತು ನಮ್ಮಲ್ಲಿ ಜ್ಞಾನವಿಲ್ಲ.

ಜಲಮೂಲಗಳು ಪಾತಾಳ ಕಂಡಿದ್ದು ಬೋರ್‌ವೆಲ್‌ಗಳಲ್ಲಿ ಫ್ಲೋರೈಡ್‌ಯುಕ್ತ ನೀರು ಸುರಿಯುತ್ತಿದೆ. ಇದರಿಂದ ಆರೋಗ್ಯ ಕೂಡ ಹದಗೆಡುತ್ತಿದೆ. ಯುವಜನತೆ ಮತ್ತು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಜಾಗೃತರಾಗಿ, ಜನರಿಗೆ ತಿಳಿವಳಿಕೆ ನೀಡಬೇಕು. ಯೋಜನೆಗಳನ್ನು ರೂಪಿಸಿ ಪ್ರದೇಶಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಬೇಕು~ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರು ವಿವಿ ಭೂಗೋಳಶಾಸ್ತ್ರ ವಿಭಾಗದ ಡಾ. ಅಸೀಮಾ ನುಸ್ರತ್, `ಹವಾಮಾನ ವೈಪರಿತ್ಯಗಳಿಂದ ಆಹಾರ ಉತ್ಪಾದನೆ ಕುಂಠಿತವಾಗುತ್ತದೆ. ಆ ಮೂಲಕ ಬೆಲೆಯೇರಿಕೆ, ಆಹಾರ ಅಭದ್ರತೆ, ಅಪೌಷ್ಟಿಕತೆ ಮತ್ತು ರೋಗಗಳ ಹಾವಳಿ ಹೆಚ್ಚುತ್ತದೆ. ಇದು ಅಭಿವೃದ್ಧಿಶೀಲ ಮತ್ತು ಬಡ ದೇಶಗಳಿಗೆ ಹೆಚ್ಚು ಬಾಧೆಯುಂಟುಮಾಡುತ್ತದೆ. ಆದ್ದರಿಂದ ಇವತ್ತು ಹವಾಮಾನ ವೈಪರಿತ್ಯದಿಂದ ಬರುವ ವಿಪತ್ತುಗಳ ನಿರ್ವಹಣೆ ದೊಡ್ಡ ಸವಾಲು~ ಎಂದು ಹೇಳಿದರು.

ಮಹಾಜನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್. ವಾಸುದೇವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಾ. ಪ್ರಭುಶಂಕರ್, ಮಾಜಿ ಕಾರ್ಯದರ್ಶಿ ಜಿ.ಎಸ್. ಸುಬ್ರಮಣ್ಯಂ, ಭೂಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿಜಯಲೀಲಾ ರಾವ್, ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಎಂ.ಎಚ್. ಸುನೀತಾ ಮತ್ತಿತರರು ಹಾಜರಿದ್ದರು. ಪ್ರಾಚಾರ್ಯ ಪ್ರೊ. ಕೆ.ವಿ. ಪ್ರಭಾಕರ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.