ADVERTISEMENT

ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ಮುಂದೂಡಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 6:05 IST
Last Updated 19 ಮಾರ್ಚ್ 2012, 6:05 IST

ಮೈಸೂರು: ಸರ್ಕಾರಿ ಪ್ರೌಢಶಾಲೆಗಳಲ್ಲಿ ಇರುವ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಜಿಲ್ಲೆಯಲ್ಲೇ ಖಾಲಿ ಇರುವ ಶಾಲೆಗೆ ಸ್ಥಳ ನಿಯೋಜನೆ ಮಾಡುವ ಕ್ರಮ ಅವೈಜ್ಞಾನಿಕವಾಗಿದ್ದು, ಈ ಕುರಿತು ಶಿಕ್ಷಣ ಇಲಾಖೆ ಮತ್ತೊಮ್ಮೆ ಪರಿಶೀಲಿಸಬೇಕು. ಈ ಸಂಬಂಧ ಮಾ.30 ರಂದು ಏರ್ಪಡಿಸಿರುವ ಕೌನ್ಸೆಲಿಂಗ್‌ನ್ನು ಮುಂದೂಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚುವರಿ ಶಿಕ್ಷಕರನ್ನು ಖಾಲಿ ಇರುವ ಹುದ್ದೆಗಳಿಗೆ ನಿಯೋಜಿಸಲು ವಿರೋಧವಿಲ್ಲ. ಆದರೆ ಈ ಬಾರಿ ಶಿಕ್ಷಣ ಇಲಾಖೆ ತೀರಾ ಅವೈಜ್ಞಾನಿಕ ಕ್ರಮವನ್ನು ಅನುಸರಿಸುತ್ತಿದೆ. ಈ ಸಂಬಂಧ ಮಾ.2 ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಇದರಿಂದ ಪ್ರತಿ ಜಿಲ್ಲೆಯಲ್ಲಿ 60 ರಿಂದ 70 ಶಿಕ್ಷಕರು ಹೆಚ್ಚುವರಿಯಾಗಿ ಕಂಡುಬರುತ್ತಾರೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ 40 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಇರಬೇಕು. ಆದರೆ ಇಲ್ಲಿ 70 ವಿದ್ಯಾರ್ಥಿಗಳನ್ನು ಒಂದು ವಿಭಾಗ ಎಂದು ಪರಿಗಣಿಸಿ, ಒಬ್ಬ ಶಿಕ್ಷಕರನ್ನು ನೀಡಲಾಗುತ್ತಿದೆ. ಶಾಲಾ ಸಿಬ್ಬಂದಿಯ ಸ್ತರ ವಿನ್ಯಾಸದಲ್ಲಿ ಹೊರಗುಳಿದ ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಲಾಗುತ್ತಿದೆ. ಇದರಿಂದ ಶಿಕ್ಷಕರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಒಂದು ವಾರಕ್ಕೆ ಒಬ್ಬ ಶಿಕ್ಷಕ ಗರಿಷ್ಠ 28 ಗಂಟೆ ಬೋಧನೆ ಮಾಡಬೇಕು ಎಂಬ ನಿಯಮವಿದೆ. ಆದರೆ ಶಿಕ್ಷಣ ಇಲಾಖೆ ಸುತ್ತೋಲೆ ಪ್ರಕಾರ ಒಬ್ಬ ಶಿಕ್ಷಕ 36 ಗಂಟೆ ಪಾಠ ಮಾಡಬೇಕಾಗುತ್ತದೆ. 6 ವಿಭಾಗ ಗಳಿರುವ ಒಂದು ಶಾಲೆಗೆ 9 ಶಿಕ್ಷಕರನ್ನು ನಿಯೋಜನೆ ಮಾಡಲಾಗುತ್ತಿದೆ. 9 ವಿಭಾಗಳಿಗೂ ಒಬ್ಬರೇ ಸಿಬಿಝಡ್ ಶಿಕ್ಷಕರನ್ನು ನೀಡಿರುವ ಕ್ರಮ ತೀರಾ ಖಂಡನೀಯವಾದದ್ದು. ಬಿ.ಇಡಿ ಯಲ್ಲಿ ಗಣಿತ ಮತ್ತು ಭೌತಶಾಸ್ತ್ರ  ಅಧ್ಯಯನ ಮಾಡಿದ ಶಿಕ್ಷಕರೇ ರಸಾಯನಶಾಸ್ತ್ರವನ್ನು ಬೋಧಿಸಲು ಸೂಚಿಸ ಲಾಗಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಹಾಳಾ ಗಲಿದೆ. ಹೀಗಾಗಿ ಮಾ.30ರಂದು ಏರ್ಪಡಿಸಿರುವ ಕೌನ್ಸೆಲಿಂಗ್ ಅನ್ನು ಮುಂದೂಡಿ, ಮೇ ತಿಂಗಳಲ್ಲಿ ವೈಜ್ಞಾನಿಕ ಕ್ರಮ ಅನುಸರಿಸಿ ಹೆಚ್ಚವರಿ ಶಿಕ್ಷಕರನ್ನು ಗುರುತಿಸಬೇಕು ಎಂದು ಒತ್ತಾಯಿಸಿದರು.

ವರ್ಗಾವಣೆಗೆ ವಿರೋಧ: ಎನ್‌ಸಿಇಆರ್‌ಟಿ ನಿಯಮದ ಪ್ರಕಾರ ಡಿ.ಇಡಿ ಕಾಲೇಜುಗಳನ್ನು ಉನ್ನತೀಕರಿಸಲಾಗಿದೆ. ಆದರೆ ಈಗ ಸ್ನಾತಕೋತ್ತರ ಪದವಿ ಪಡೆದ ಮುಖ್ಯ ಶಿಕ್ಷಕರನ್ನು ಡಿ.ಇಡಿ ಕಾಲೇಜು ಉಪನ್ಯಾಸಕ ಹುದ್ದೆಗಳಿಗೆ ನಿಯೋಜನೆ ಮಾಡಲಾ ಗುತ್ತಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಹಾಳಾಗಲಿದೆ. ಅಲ್ಲದೇ, ಡಯಟ್ ಉಪನ್ಯಾಸಕರನ್ನು ಅನಾವಶ್ಯಕವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಈ ಸಂಬಂಧ ಮಾ.19 ರಂದು ಹಮ್ಮಿಕೊಂಡಿರುವ ಕೌನ್ಸೆಲಿಂಗ್‌ನ್ನು ರದ್ದು ಮಾಡಬೇಕು ಎಂದರು.

ನೇಮಕಾತಿ ಆದೇಶ ನೀಡಿ: ಮೊರಾರ್ಜಿ ವಸತಿ ಶಾಲೆಗಳಲ್ಲಿ ಕಳೆದ 11 ವರ್ಷಗಳಿಂದ ಖಾಲಿ ಉಳಿದಿದ್ದ ಶಿಕ್ಷಕರ ಹುದ್ದೆಗಳಿಗೆ ಈಚೆಗೆ 4700 ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ ಈವರೆಗೂ ಅವರಿಗೆ ನೇಮಕಾತಿ ಆದೇಶ ನೀಡಿಲ್ಲ. ಇದರಿಂದ ನೇಮಕಾತಿಗೊಂಡ ಶಿಕ್ಷಕರು ಆತಂಕ ಗೊಂಡಿದ್ದಾರೆ. ಹೀಗಾಗಿ ಶೀಘ್ರವೇ ಅವರಿಗೆ ನೇಮಕಾತಿ ಆದೇಶ ನೀಡಬೇಕು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಬಾಕಿ ವೇತನವನ್ನು ನೀಡಬೇಕು ಎಂದರು.

ಮೌಲ್ಯಮಾಪನ ಬಹಿಷ್ಕಾರ: ಪ್ರೌಢಶಾಲೆ ಶಿಕ್ಷಕರು, ಪದವಿಪೂರ್ವ ಕಾಲೇಜು ಉಪನ್ಯಾಸಕರ ವೇತನವನ್ನು ವಿಶೇಷವಾಗಿ ಪರಿಷ್ಕರಿಸಬೇಕು. 6ನೇ ವೇತನ ಆಯೋಗದ ಆಧಾರದ ಮೇಲೆ ಸಂಬಳ ನೀಡಬೇಕು.

ಇಲ್ಲದಿದ್ದರೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯ ಮೌಲ್ಯಮಾಪನವನ್ನು ಬಹಿಷ್ಕರಿಸ ಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.