ಮೈಸೂರು: ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳ ನಡುವೆ ಉತ್ತಮ ಬಾಂಧವ್ಯ ಇದ್ದರೆ, ರೋಗಿಯು ಗುಣ ಕಾಣುವ ವೇಗ ವೃದ್ಧಿಸುತ್ತದೆ. ಇದನ್ನು ಅಕ್ಷರಶಃ ಜಾರಿಗೊಳಿಸಲು ಮೈಸೂರಿನ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ (ಇಎಸ್‌ಐ) ಹೊರಟಿದೆ. ಆಸ್ಪತ್ರೆಯ ವೈದ್ಯರು ಹಾಗೂ ಇತರೆ ಸಿಬ್ಬಂದಿಗೆ ಪ್ರತಿನಿತ್ಯ ನೀತಿ ಬೋಧನೆ ತರಗತಿಯನ್ನು ಹಮ್ಮಿಕೊಂಡು ಗಮನ ಸೆಳೆದಿದೆ.
ಸಾಮಾನ್ಯವಾಗಿ ಆಸ್ಪತ್ರೆ ಎಂದರೆ ರೋಗಿ ಹಾಗೂ ಅವರ ಕುಟುಂಬಸ್ಥರಿಗೆ ಭಯದ ಭಾವನೆ ಇರುತ್ತದೆ. ಅದರಲ್ಲೂ ಸರ್ಕಾರಿ ಆಸ್ಪತ್ರೆಗಳೆಂದರೆ, ಅವುಗಳ ಬಗ್ಗೆ ನಂಬಿಕೆಯೇ ಇಲ್ಲ ಎಂಬಂತಾಗಿದೆ. ಈ ಭಾವನೆಯನ್ನು ಬದಲಿಸಿ, ಸರ್ಕಾರಿ ಆಸ್ಪತ್ರೆ ಗಳ ಬಗ್ಗೆಯೂ ಒಳ್ಳೆಯ ಭಾವನೆಯನ್ನು ಮೂಡಿಸಬೇಕು ಎನ್ನುವ ದೃಷ್ಟಿಯಿಂದ ಮೈಸೂರಿನಲ್ಲಿ ಈ ವಿನೂತನ ಪ್ರಯೋಗ ಆರಂಭವಾಗಿದೆ.
ಏನಿದು ಪ್ರಯೋಗ?: ‘ಇಎಸ್‌ಐ’ ಆಸ್ಪ ತ್ರೆಯ ಅಧೀಕ್ಷಕ ಡಾ.ರಮೇಶ್ ಜೇವೂರ ಅವರು ಈ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೀತಿಯ ಪ್ರಯೋಗ ನಡದಿಲ್ಲ. ಆಸ್ಪತ್ರೆಯ ದೈನಂದಿನ ಕೆಲಸ ಆರಂಭವಾಗುವ ಮೊದಲು ಆಸ್ಪತ್ರೆಯ ಸಿಬ್ಬಂದಿಯನ್ನು ಒಂದೆಡೆ ಸೇರಿಸಿ, ಬೌದ್ಧಿಕ ವಿಕಸನ ಉಂಟುಮಾಡುವ ಬರಹಗಳನ್ನು ವಾಚಿಸಲಾಗುತ್ತಿದೆ.
ವ್ಯಕ್ತಿತ್ವ ವಿಕಸನ, ತಾಳ್ಮೆ ವೃದ್ಧಿ, ಕೋಪ ನಿಯಂತ್ರಣ, ಕಾರುಣ್ಯ ಭಾವ ನೆಯ ವೃದ್ಧಿಗೆ ಸಂಬಂಧಿಸಿದ ಕಿರುಲೇಖನ ಗಳನ್ನು ವಾಚಿಸಲಾಗುತ್ತಿದೆ. ಈ ರೀತಿಯ ಕಿರುಲೇಖನಗಳನ್ನು ಹುಡುಕಲು ಇವರು ತೀರಾ ಕಷ್ಟಪಡುತ್ತಿಲ್ಲ. ಇದಕ್ಕಾಗಿ ದಿನ ಪತ್ರಿಕೆಗಳನ್ನೇ ಆಶ್ರಯಿಸುತ್ತಿದ್ದಾರೆ. ಪತ್ರಿಕೆ ಗಳಲ್ಲಿ ಪ್ರಕಟವಾಗುವ ಅಂಕಣಗಳು, ಸುಭಾಷಿತಗಳು, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕಿರು ಅಂಕಣಗಳನ್ನು ಓದಿ ಹೇಳಲಾಗುತ್ತಿದೆ.
ಹೇಗೆ ಆರಂಭ?: ಉತ್ತರಾಖಂಡದ ಚಂಪಾವತ್ ಜಿಲ್ಲೆಯಲ್ಲಿರುವ ರಾಮಕೃಷ್ಣ ಮಿಷನ್‌ನ ‘ಸ್ವಾಮಿ ವಿವೇಕಾನಂದ ಚಾರಿ ಟಬಲ್ ಆಸ್ಪತ್ರೆ’ಗೆ ಡಾ.ರಮೇಶ್ ಅವರು ಎರಡು ವರ್ಷದ ಹಿಂದೆ ಭೇಟಿ ನೀಡಿ ದ್ದಾಗ, ಈ ರೀತಿಯ ನೀತಿಬೋಧನೆ ತರ ಗತಿ ಅಲ್ಲಿ ನಡೆಯುತ್ತಿದ್ದುದನ್ನು ಗಮನಿಸಿ ದ್ದರಂತೆ. ಇದನ್ನು ಮೈಸೂರಿನಲ್ಲೂ ಏಕೆ ಆರಂಭಿಸಬಾರದು ಎಂಬ ಆಲೋಚನೆ ಯನ್ನು ಕಾರ್ಯಗತಗೊಳಿಸಿದ್ದಾರೆ.
‘ಈ ಕಾರ್ಯಕ್ರಮ ಆರಂಭವಾಗಿ ಒಂದೂವರೆ ವರ್ಷವಾಗಿದ್ದು, ಆರಂಭ ವಾದಾಗಿನಿಂದ ಆಸ್ಪತ್ರೆಯ ಸಿಬ್ಬಂದಿ– ರೋಗಿಗಳ ನಡುವಿನ ಸಂಬಂಧದಲ್ಲಿ ಸಾಮರಸ್ಯ ಮೂಡಿದೆ, ಚಿಕಿತ್ಸಾಮಟ್ಟ ಏರಿದೆ’ ಎಂದು ಡಾ.ರಮೇಶ್ ‘ಪ್ರಜಾ ವಾಣಿ’ಗೆ ತಿಳಿಸಿದರು.
ಈ ತರಗತಿ ಯಾವ ಸಿಬ್ಬಂದಿಗೂ ಕಡ್ಡಾಯವೇನಲ್ಲ. ಬೆಳಿಗ್ಗೆ 9ರಿಂದ 9.10ರ ನಡುವೆ ತರಗತಿ ನಡೆಯುತ್ತದೆ. ಯಾರು ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಬಿಡುವಾಗಿ ಇರುತ್ತಾರೊ, ಅವರು ಇಷ್ಟಪಟ್ಟಲ್ಲಿ ಹಾಜರಾಗಬಹುದು.
ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಕುಟುಂಬಸ್ಥರು ಕೆಲವೊಮ್ಮೆ ಆಸ್ಪತ್ರೆ ಸಿಬ್ಬಂದಿ ಜತೆ ಕಟುವಾಗಿ ವರ್ತಿಸುತ್ತಾರೆ. ಅದರಿಂದ ಸಿಬ್ಬಂದಿ ಬೇಜಾರಾಗದೆ, ವೃತ್ತಿ ನೈತಿಕತೆಯನ್ನು ಪ್ರಾಮಾಣಿಕವಾಗಿ ಪಾಲಿಸಲು ಈ ನೀತಿಬೋಧನೆ ತರಗತಿ ಕೆಲಸ ಮಾಡಿದೆ ಎಂದು ಡಾ.ರಮೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.