ADVERTISEMENT

20ರಂದು ನಗರದಲ್ಲಿ ನಾಡ ರಕ್ಷಣಾ ರ್ಯಾಲಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 9:15 IST
Last Updated 2 ಫೆಬ್ರುವರಿ 2011, 9:15 IST

ಮೈಸೂರು: ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ವೈಫಲ್ಯ, ಸ್ವಜನಪಾತ, ಭ್ರಷ್ಟಾಚಾರವನ್ನು ಜನರಿಗೆ ತಿಳಿಸುವ  ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಫೆ.20 ರಂದು ನಗರದಲ್ಲಿ ನಾಡ ರಕ್ಷಣಾ ರ್ಯಾಲಿಯನ್ನು ಹಮ್ಮಿಕೊಂಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಾ.ಜಿ.ಪರಮೇಶ್ವರ ಮಂಗಳವಾರ ತಿಳಿಸಿದರು. ‘ಬಿಜೆಪಿ ಸರ್ಕಾರವು ಎರಡೂವರೆ ವರ್ಷದಲ್ಲಿ ನಡೆಸಿದ ದುರಾಡಳಿತವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ  ಪಕ್ಷವು ರಾಜ್ಯದಲ್ಲಿ ನಾಡ ರಕ್ಷಣಾ ಯಾತ್ರೆಯನ್ನು ನಡೆಸಿತ್ತು. ಇದೀಗ ನಾಡ ರಕ್ಷಣಾ ರ್ಯಾಲಿ ಯನ್ನು ನಡೆಸಲಾಗುತ್ತಿದೆ. ಮಂಡ್ಯ, ಚಾಮ ರಾಜನಗರ ಸುತ್ತಮುತ್ತಲಿನ ಜಿಲ್ಲೆಗಳನ್ನು ಒಳ ಗೊಂಡಂತೆ ಈ ರ್ಯಾಲಿಯನ್ನು  ಸಾಂಸ್ಕೃತಿಕ ನಗರಿಯಲ್ಲಿ ನಡೆಸಲಾಗು ತ್ತಿದೆ. ಸ್ಥಳ ಇನ್ನೂ ನಿಗದಿ ಆಗಿಲ್ಲ. ರ್ಯಾಲಿಯಲ್ಲಿ 1 ಲಕ್ಷ ಜನ  ಸೇರುವ ನಿರೀಕ್ಷೆ ಇದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಜೆಟ್ ಹಣ ಖರ್ಚು ಮಾಡಿಲ್ಲ: ‘ಕಳೆದ ವರ್ಷ ಮಂಡಿಸಲಾದ ಬಜೆಟ್‌ನಲ್ಲಿ ಶೇ.60 ರಷ್ಟನ್ನು ವೆಚ್ಚ ಮಾಡಲಾಗಿದ್ದು, ಇನ್ನೂ ಶೇ.40  ರಷ್ಟು ಹಣ ಖರ್ಚು ಮಾಡಿಲ್ಲ. ಬಜೆಟ್ ಮಂಡಿ ಸುವ 25 ದಿನಗಳ ಒಳಗೆ ಉಳಿಕೆ ಹಣವನ್ನು ಸರ್ಕಾರ  ಖರ್ಚು ಮಾಡಲು ಆಗುವುದಿಲ್ಲ. ಯಾವ ಉದ್ದೇಶದಿಂದ ಯಡಿಯೂರಪ್ಪ ಬೇಗನೆ ಬಜೆಟ್  ಮಂಡಿಸುತ್ತಿದ್ದಾರೋ ಗೊತ್ತಿಲ್ಲ’ ಎಂದರು..

‘ಬಜೆಟ್‌ನಲ್ಲಿ ಶೇ.50ರಷ್ಟು ಹಣ ಖರ್ಚು ಮಾಡಿಲ್ಲವೆಂದು ನಾನು ಹೇಳಿಕೆ ನೀಡಿದ್ದೆ. ರಾಜ್ಯದ ಆರ್ಥಿಕ  ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಿದ್ದೆ. ಬಜೆಟ್‌ನಲ್ಲಿ ಶೇ.60 ರಷ್ಟು ಹಣ  ಮಾತ್ರ ವೆಚ್ಚ  ಮಾಡಲಾಗಿದೆ ಎಂದು ಯಡಿಯೂರಪ್ಪ ಅವರೇ ಹೇಳಿಕೆ ನೀಡಿದ್ದಾರೆ. ರೀತಿ-ನೀತಿ ಇಲ್ಲದೆ ಹಣ  ಖರ್ಚು ಮಾಡಲಾಗಿದೆ’ ಎಂದು ಆರೋಪಿಸಿದರು.‘ದೇಶದಲ್ಲೇ ಪ್ರಥಮ ಬಾರಿಗೆ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸು ವುದಾಗಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಬಜೆಟ್‌ನಲ್ಲಿ ಶೇ.9ರಷ್ಟು ಅಂದರೆ ರೂ.2,471 ಕೋಟಿ ಹಣವನ್ನು ಮೀಸಲಿಡಲಾಗಿತ್ತು. ಹಾಗಿದ್ದರೆ ನೀರಾವರಿ ಮತ್ತು ಪಶು ಸಂಗೋಪನಾ ಮತ್ತು ಗ್ರಾಮೀಣ ಅಭಿವೃದ್ಧಿಗೆ ಪ್ರತ್ಯೇಕ ಬಜೆಟ್ ಮಂಡಿಸುವರೆ’ ಎಂದು ಪ್ರಶ್ನಿಸಿದರು.

‘2008-09ನೇ ಸಾಲಿನಲ್ಲಿ ನೀರಾವರಿಗೆ ಯಡಿಯೂರಪ್ಪ ಅವರು ಶೇ.13.37, 2009-10ರಲ್ಲಿ ಶೇ.14ರಷ್ಟು ಮಾತ್ರ ಹಣ ಮೀಸ ಲಿಟ್ಟಿದ್ದರು. ಆದರೆ ಎಸ್.ಎಸ್.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2001-02ನೇ ಸಾಲಿನಲ್ಲಿ ಶೇ.31ರಷ್ಟು ಹಣವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದ್ದರು’ ಎಂದು ತಿಳಿಸಿದರು. ಹೈಕಮಾಂಡ್ ನಿರ್ಧಾರ ಅಂತಿಮ: ‘ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ ತ್‌ನಲ್ಲಿ ಜೆಡಿಎಸ್ ಜೊತೆ  ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಬಿಜೆಪಿ ಯೊಂದಿಗೆ ನಾವು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.

ಇದರಲ್ಲಿ  ಹೈಕಮಾಂಡ್ ನಿರ್ಧಾರವೇ ಅಂತಿಮ. ಇದಕ್ಕೆ ಸಂಬಂಧಿಸಿದಂತೆ ಯಾರೇ ಹೇಳಿಕೆ ನೀಡಿದರೂ ಅದು ಗೌಣ’  ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸಿ.ದಾಸೇಗೌಡ, ಆರ್.ಧರ್ಮಸೇನಾ, ಶಾಸಕ ಎಂ.ಸತ್ಯನಾರಾಯಣ, ಮಾಜಿ ಶಾಸಕರಾದ  ಎಂ.ಕೆ.ಸೋಮಶೇಖರ್, ಮುಕ್ತಾರುನ್ನೀಸಾ ಬೇಗಂ, ಮಾಜಿ ಮೇಯರ್‌ಗಳಾದ ವಾಸು, ವಿ.ವೆಂಕಟರಾಜು, ಡಾ.ಬಿ.ಜೆ.ವಿಜಯಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.