ADVERTISEMENT

ಪಶ್ಚಿಮ ಘಟ್ಟಕ್ಕೆ ವ್ಯತಿರಿಕ್ತ ಪರಿಣಾಮ

ನೇಸರ ಕಾಡನಕುಪ್ಪೆ
Published 1 ಫೆಬ್ರುವರಿ 2018, 6:27 IST
Last Updated 1 ಫೆಬ್ರುವರಿ 2018, 6:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಮೈಸೂರು– ತಲಚೇರಿ ರೈಲು ಮಾರ್ಗ ನಿರ್ಮಾಣವಾದಲ್ಲಿ ಕೊಡಗಿನ ಪಶ್ವಿಮ ಘಟ್ಟಗಳ ಸುಮಾರು 325 ಪ್ರಭೇದಗಳಿಗೆ ಹಾನಿಯಾಗುವ ಅಪಾಯವಿದೆ.

ಕೊಡಗಿನ ಬಹುತೇಕ ಭಾಗ ಹಾಗೂ ಮೈಸೂರಿನ ಗಡಿಭಾಗದಲ್ಲಿ ಪಶ್ಚಿಮ ಘಟ್ಟವು ಹಬ್ಬಿದ್ದು ಸಾವಿರಕ್ಕೂ ಹೆಚ್ಚು ಜೀವ‍ಪ್ರಭೇದ ಇಲ್ಲಿವೆ. ಸಸ್ಯ, ಪ್ರಾಣಿ–ಪಕ್ಷಿಗಳು ಈ ಸಂಖ್ಯೆಯನ್ನು ಹಂಚಿಕೊಳ್ಳುತ್ತವೆ. ಜೀವ‍ಪ್ರಭೇದಗಳ ಅಳಿವಿನ ಕುರಿತು ಸಂಶೋಧನೆ ನಡೆಸುವ ‘ಯುನೆಸ್ಕೊ’ ಪಶ್ಚಿಮ ಘಟ್ಟಗಳು ಈಗಾಗಲೇ ನಾಶದ ಕಡೆಗೆ ಮುಖಮಾಡಿವೆ; ಇಲ್ಲಿನ ಜಲಮೂಲಕ್ಕೂ ಸಾಕಷ್ಟು ಧಕ್ಕೆಯಾಗಿದೆ ಎಂದು ವರದಿ ನೀಡಿದೆ.

ಪಶ್ಚಿಮಘಟ್ಟವೇ ಇಬ್ಭಾಗ!: ತಲಚೇರಿಯಿಂದ ಮಡಿಕೇರಿಗೆ ನಿರ್ಮಿಸಲು ಉದ್ದೇಶಿಸಿರುವ ರೈಲುಮಾರ್ಗವು ಪಶ್ಚಿಮ ಘಟ್ಟವನ್ನು ಸರಿಯಾಗಿ ಇಬ್ಭಾಗ ಮಾಡಲಿದೆ. ಕೊಡಗಿನ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದ ಮೂಲಕ ಮಾರ್ಗ ಸಾಗಲಿದೆ. ಅಲ್ಲದೇ, ಈ ಅಭಯಾರಣ್ಯಕ್ಕೆ ಅಕ್ಕಪಕ್ಕದಲ್ಲಿ ತಲಕಾವೇರಿ ಹಾಗೂ ಪುಷ್ಪಗಿರಿ ಸಂರಕ್ಷಿತ ಅಭಯಾರಣ್ಯ ಮತ್ತು ನಾಗರಹೊಳೆ ಅಭಯಾರಣ್ಯವಿದೆ. ಈ ಅರಣ್ಯಭಾಗದ ಮಧ್ಯದಲ್ಲಿ ರೈಲು ಮಾರ್ಗ ಹಾದುಹೋದರೆ, ಸುಮಾರು 80 ಕಿಲೋ ಮೀಟರ್‌ ಉದ್ದದ ಮಾರ್ಗದಲ್ಲಿ ಮರಗಳನ್ನು ಕಡಿಯಬೇಕಾಗುತ್ತದೆ. ಈ ಭಾಗದಲ್ಲಿ ಅರಣ್ಯ ನಾಶವಾದರೆ, ಕೊಡಗಿನ ಇಡೀ ಜೀವಪರಿಸರಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗುತ್ತದೆ ಎಂದು ಪರಿಸರ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಇದೇ ಅರಣ್ಯ ಭಾಗದಲ್ಲಿ ಭಾರತದಲ್ಲೇ ವಿಶೇಷ ಎನ್ನಬಹುದಾದ ಜೀವಿಗಳಿವೆ. ಏಷ್ಯನ್‌ ಆನೆ, ಹುಲಿ, ಚಿರತೆ, ಕಾಡುಹಂದಿ ಹಾಗೂ ಜಿಂಕೆಗಳು ಇವೆ. ಕೊಡಗಿಗೇ ಅತಿ ವಿಶಿಷ್ಟವಾದ 300ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಇಲ್ಲಿವೆ. ಇವಿಷ್ಟೂ ಜೀವಿಗಳಿಗೆ ಈ ರೈಲು ಯೋಜನೆಯು ಮೂಲದಲ್ಲೇ ಪೆಟ್ಟು ಕೊಡಲಿವೆ ಎನ್ನುವುದು ವಾದ.

ನದಿ ಬರಿದಾಗುವ ಅಪಾಯ: ಕೊಡಗಿನಲ್ಲೇ ಹುಟ್ಟುವ ಕಾವೇರಿಯು ಪಶ್ವಿಮ ಘಟ್ಟಗಳಲ್ಲಿ ಸುತ್ತಿ ಹರಿಯುತ್ತದೆ. ರೈಲು ಮಾರ್ಗಕ್ಕಾಗಿ ಪಶ್ಚಿಮ ಘಟ್ಟಗಳ ಹೊಟ್ಟೆ ಕೊರೆದು, ಸುರಂಗಗಳನ್ನು ನಿರ್ಮಿಸಿದರೆ ನೀರಿನ ಕಣ್ಣುಗಳು ಹಾಳಾಗುತ್ತವೆ ಎಂದು ಪರಿಸರ ತಜ್ಞರು ಹೇಳಿದ್ದಾರೆ.

ಅಲ್ಲದೇ, ಯುನೆಸ್ಕೊ ವರದಿಯಲ್ಲಿ ಈಗಾಗಲೇ ಕೊಡಗಿನಲ್ಲಿ ಮಳೆಯ ಪ್ರಮಾಣ ಕುಸಿದಿರುವ ಬಗ್ಗೆ ವರದಿ ನೀಡಿದೆ. 2004ರಲ್ಲಿ 243 ಸೆಂಟಿಮೀಟರ್ ಮಳೆಯಾಗುತ್ತಿದ್ದದ್ದು ಈಗ ಅದು 180 ಸೆಂಟಿಮಿಟರ್‌ಗೆ ಕುಸಿದಿದೆ. ಇದಕ್ಕೆ ನದಿ ಬಳಿಯ ಅರಣ್ಯ ನಾಶವೇ ಮುಖ್ಯ ಕಾರಣ ಎಂದೂ ಹೇಳಿದೆ. ಕೊಡಗಿನ ಪರಿಸರ ಅತಿ ಸೂಕ್ಷ್ಮವಾಗಿದ್ದು, ಇಲ್ಲಿನ ಬೆಟ್ಟಗುಡ್ಡಗಳು ಮುಂಗಾರು ಮಾರುತಗಳನ್ನು ತಡೆದು ಮಳೆಯಾಗುವಂತೆ ನೋಡಿಕೊಳ್ಳುತ್ತವೆ. ಬೆಟ್ಟಗಳಲ್ಲಿನ ವೃಕ್ಷರಾಶಿ ನೀರು ಇಂಗಿ ಅಂತರ್ಜಲ ಹೆಚ್ಚುವಂತೆಯೂ ನೋಡಿಕೊಳ್ಳುತ್ತವೆ. ಇದರಿಂದ ಸಹಜವಾಗಿಯೇ ನದಿಗಳೂ ತುಂಬಿ ಹರಿಯುತ್ತವೆ. ರೈಲು ಮಾರ್ಗಕ್ಕಾಗಿ ನೂರಾರು ಎಕರೆ ಅರಣ್ಯ ಭಾಗ ನಾಶವಾಗುವ ಕಾರಣ, ನದಿಯಲ್ಲಿ ನೀರಿನ ಪ್ರವಾಹ ಕಡಿಮೆಯಾಗಲಿದೆ ಎಂದು ಪರಿಸರ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.