ADVERTISEMENT

32 ಚರ್ಚುಗಳ ಜೀರ್ಣೋದ್ಧಾರಕ್ಕೆ 15 ಕೋಟಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2018, 6:40 IST
Last Updated 12 ಫೆಬ್ರುವರಿ 2018, 6:40 IST
ಕರುಣಾಪುರದ ಯೇಸು ಕರುಣಾಲಯದಲ್ಲಿ ಭಾನುವಾರ ನಡೆದ ಚರ್ಚ್‌ನ 118ನೇ ವಾರ್ಷಿಕೋತ್ಸವ ಹಾಗೂ ಪುನರ್‌ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮೈಸೂರು ಪ್ರಾದೇಶಿಕ ಪರಿಷತ್ತಿನ ಉಪಾಧ್ಯಕ್ಷ ಎಜೆಕೀಲ್‌ ಅವರು ಸಂದೇಶ ನೀಡಿದರು
ಕರುಣಾಪುರದ ಯೇಸು ಕರುಣಾಲಯದಲ್ಲಿ ಭಾನುವಾರ ನಡೆದ ಚರ್ಚ್‌ನ 118ನೇ ವಾರ್ಷಿಕೋತ್ಸವ ಹಾಗೂ ಪುನರ್‌ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮೈಸೂರು ಪ್ರಾದೇಶಿಕ ಪರಿಷತ್ತಿನ ಉಪಾಧ್ಯಕ್ಷ ಎಜೆಕೀಲ್‌ ಅವರು ಸಂದೇಶ ನೀಡಿದರು   

ಮೈಸೂರು: ರಾಜ್ಯ ಸರ್ಕಾರದಿಂದ 32 ಚರ್ಚ್‌ಗಳ ಜೀರ್ಣೋದ್ಧಾರಕ್ಕೆ ₹ 15 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಎಲ್ಲ ಚರ್ಚ್‌ಗಳು ನವೀಕರಣಗೊಳ್ಳಲಿವೆ ಎಂದು ಬಿಷಪ್‌ ಮೋಹನ್‌ ಮನೋರಾಜ್‌ ತಿಳಿಸಿದರು.

ಇಲ್ಲಿನ ವೆಸ್ಲಿ ಚರ್ಚ್‌ನ 148ನೇ ವಾರ್ಷಿಕೋತ್ಸವ, ಕರುಣಾಪುರದ ಯೇಸು ಕರುಣಾಲಯ ಪುನರ್‌ ಪ್ರತಿಷ್ಠಾಪನೆ ಹಾಗೂ 118ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

ಕರ್ನಾಟಕ ದಕ್ಷಿಣ ಸಭಾಪ್ರಾಂತ್ಯದ ಚರ್ಚುಗಳ ಜೀರ್ಣೋದ್ಧಾರಕ್ಕೆ ಸರ್ಕಾರದ ಕೊಡುಗೆ ಅಪಾರವಾಗಿದೆ. ಮಂಗಳೂರಿನಲ್ಲಿ ನಾಲ್ಕು ಸಮುದಾಯ ಭವನ ಕಟ್ಟಲು ಹಣ ಬಿಡುಗಡೆಯಾಗಿದೆ. ವೆಸ್ಲಿ ಹಾಗೂ ಯೇಸು ಕರುಣಾಲಯ ನವೀಕರಣಕ್ಕೆ ತಲಾ ₹ 30 ಲಕ್ಷ ನೆರವು ಸಿಕ್ಕಿದೆ ಎಂದರು.

ADVERTISEMENT

ಸಭಾ ಕಾರ್ಯಕ್ರಮದಲ್ಲಿ ರೆವರೆಂಡ್‌ ದೇವಕುಮಾರ್‌, ರೆವರೆಂಡ್‌ ಜಯಶೇಖರ್‌, ವಿನ್ಸೆಂಟ್‌ ಪಾಲಣ್ಣ, ಸಿಸ್ಟರ್‌ ಸುಜಾತ, ಸಿಎಸ್‌ಐ ಕೆಎಸ್‌ಡಿ ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮಾ ಸರೋಜಿನಿ, ಪಾಲಿಕೆ ಸದಸ್ಯರಾದ ಆರ್‌.ಕಮಲಾ ಉದಯಕುಮಾರ್‌, ಎಸ್‌.ಸ್ವಾಮಿ ಇದ್ದರು. ವೆಸ್ಲಿ ಚರ್ಚ್‌ನಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ 8 ಗಂಟೆಯಿಂದ ಯೇಸು ಆರಾಧನೆ ನಡೆಯಿತು. ಜತೆಗೆ, ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಯೇಸು ಕರುಣಾಲಯದಲ್ಲಿ ಬೆಳಿಗ್ಗೆ 11ರಿಂದ ಪ್ರಾರ್ಥನೆ ಸಲ್ಲಿಸಲಾಯಿತು. ಬಿಷಪ್‌ ಮೋಹನ್‌ ಮನೋರಾಜ್‌ ಅವರು ದೈವ ಸಂದೇಶ ನೀಡಿದರು. ಚರ್ಚ್‌ ಹೊರಾಂಗಣದಲ್ಲೂ ಕುಳಿತು ಭಕ್ತರು ಸಂದೇಶ ಆಲಿಸಿದ್ದು ವಿಶೇಷವಾಗಿತ್ತು.

ಚರ್ಚ್‌ ವಿಶೇಷ: ನವೀಕರಣಗೊಂಡ ಯೇಸು ಕರುಣಾಲಯದ ಒಳಗೆ ಮೂರು ಏಸು ಕ್ರಿಸ್ತನ ಭಾವಚಿತ್ರಗಳು, 65 ಅಡಿ ಎತ್ತರ ಗಂಟೆ ಗೋಪುರ, 60 ಕೆ.ಜಿ. ತೂಕದ ಗಂಟೆಯನ್ನು ಅಳವಡಿಸಲಾಗಿದೆ. ಚರ್ಚ್‌ ಒಳ ಭಾಗವನ್ನು 5 ಅಡಿ ವಿಸ್ತಾರ ಮಾಡಲಾಗಿದೆ. ಬಾಗಿಲುಗಳು ದುರಸ್ತಿ ಮಾಡಿಸಿದ್ದು ಆರ್ಕಷರ್ಣೀಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.