ADVERTISEMENT

ಉತ್ತರ ಪತ್ರಿಕೆ ಬದಲು ಪ್ರಕರಣ; ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 3:34 IST
Last Updated 17 ಜೂನ್ 2021, 3:34 IST

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆ ಉತ್ತರ ಪತ್ರಿಕೆ ಬದಲು ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಅಪರಾಧ ಪತ್ತೆ ವಿಭಾಗದ ಪೊಲೀಸರು ಚಂದನ್ ಮತ್ತು ಚೇತನ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.‌

ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಉತ್ತರ ಪತ್ರಿಕೆಯನ್ನು ಹೇಗೆ ಹೊರ ತರಲಾಯಿತು ಎಂಬ ಅಂಶ ಇವರಿಂದ ಗೊತ್ತಾಗಿಲ್ಲ. ‍

ಪ್ರಮುಖ ಆರೋಪಿ ಮಹಮ್ಮದ್ ನಿಸಾರ್‌ಗಾಗಿ ಪೊಲೀಸರ ಹುಡುಕಾಟ ಮುಂದುವರಿದಿದೆ. ಈತ ಸಿಕ್ಕಿದ ನಂತರವಷ್ಟೇ ಉತ್ತರ ಪತ್ರಿಕೆ ಹೊರಗೆ ಬಂದ ಕುರಿತು ಮಾಹಿತಿ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.‌

ADVERTISEMENT

ಮೈಸೂರು ವಿಶ್ವವಿದ್ಯಾಲಯ ವತಿಯಿಂದ ಏ.15 ಮತ್ತು 17ರಂದು ನಡೆಸಿದ ಬಿ.ಎಸ್ಸಿ ರಸಾಯನ ವಿಜ್ಞಾನದ ಪರೀಕ್ಷೆ ಬಳಿಕ ಉತ್ತರ ಪತ್ರಿಕೆಯನ್ನು ಅದಲು ಬದಲು ಮಾಡಲು ಮಹಾರಾಣಿ ಕಾಲೇಜಿನ ಸಿಬ್ಬಂದಿಯೊಬ್ಬರು ಕೆಲ ವಿದ್ಯಾರ್ಥಿಗಳೊಂದಿಗೆ ಸೇರಿ ಲಾಡ್ಜ್‌ವೊಂದರಲ್ಲಿ ಬೇರೆ ಉತ್ತರ ಪತ್ರಿಕೆ ಸಿದ್ಧಪಡಿಸುತ್ತಿದ್ದ ವೇಳೆ ಮಂಡಿ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಆರೋಪಿಗಳ ಮೇಲೆ ಪ್ರಕರಣ ದಾಖಲಿಸದ ಕುರಿತು ಮಂಡಿ ಠಾಣೆಯ ಇನ್‌ಸ್ಪೆಕ್ಟರ್ ಸೇರಿ ನಾಲ್ವರನ್ನು ಅಮಾನತುಗೊಳಿಸಿದ ನಗರ ಪೊಲೀಸ್ ಕಮಿಷನರ್ ಚಂದ್ರಗುಪ್ತ ಪ್ರಕರಣದ ವಿಚಾರಣೆಯನ್ನು ನಗರ ಅಪರಾಧ ಪತ್ತೆ ವಿಭಾಗಕ್ಕೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.