ADVERTISEMENT

ಮೈಸೂರು: ಬೆಟ್ಟದಲ್ಲಿ ಭಕ್ತ ಸಾಗರ, ಮೊಳಗಿದ ಜೈಕಾರ

ಶಕ್ತಿ ದೇವತೆ ಕಣ್ತುಂಬಿಕೊಂಡವರಿಗೆ ಪ್ರಸಾದದ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 12:39 IST
Last Updated 1 ಜುಲೈ 2022, 12:39 IST
ಆಷಾಢ ಮಾಸದ ಮೊದಲ ಶುಕ್ರವಾರದ ಅಂಗವಾಗಿ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದರ್ಶನ ಪಡೆಯಲು ಭಕ್ತರು ಅಪಾರ ಸಂಖ್ಯೆಯಲ್ಲಿ ಕ್ಯೂನಲ್ಲಿ ಬಂದರು/ ಪ್ರಜಾವಾಣಿ ಚಿತ್ರ
ಆಷಾಢ ಮಾಸದ ಮೊದಲ ಶುಕ್ರವಾರದ ಅಂಗವಾಗಿ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದರ್ಶನ ಪಡೆಯಲು ಭಕ್ತರು ಅಪಾರ ಸಂಖ್ಯೆಯಲ್ಲಿ ಕ್ಯೂನಲ್ಲಿ ಬಂದರು/ ಪ್ರಜಾವಾಣಿ ಚಿತ್ರ   

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರದ ಅಂಗವಾಗಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ಭಕ್ತಸಾಗರವೇ ಹರಿದುಬಂತು. ದೇವಿಗೆ ಜೈಕಾರದ ಘೋಷಣೆಗಳು ಮೊಳಗಿದವು.

‘ಈ ದಿನದಂದು ಶಕ್ತಿದೇವತೆಯ ದರ್ಶನ ಪಡೆದರೆ–ಪೂಜಿಸಿದರೆ ಒಳಿತಾಗುತ್ತದೆ’ ಎಂಬ ನಂಬಿಕೆಯಿಂದಾಗಿ, ನಸುಕಿನಿಂದ ರಾತ್ರಿವರೆಗೂ ಅಪಾರ ಸಂಖ್ಯೆಯ ಜನರು ಬೆಟ್ಟಕ್ಕೆ ಬಂದಿದ್ದರು. ವಿಶೇಷ ಪೂಜೆ ಸಲ್ಲಿಸಿ, ದೇವಿಯ ದರ್ಶನ ಪಡೆದು ಪುನೀತ ಭಾವ ತಳೆದರು.

ದೇಗುಲದ ಆವರಣವನ್ನು ವಿವಿಧ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಮೂರ್ತಿಗೆ ಲಕ್ಷ್ಮಿ ಅಲಂಕಾರ ಮಾಡಿದ್ದು, ಕಂಗೊಳಿಸಿತು. ಮುಂಜಾನೆ 5.30ರಿಂದ ರಾತ್ರಿ 9.30ರವರೆಗೆ ದರ್ಶನಕ್ಕೆ ಅವಕಾಶ ಕೊಡಲಾಗಿತ್ತು.

ADVERTISEMENT

ಕೋವಿಡ್–19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹಿಂದಿನ 2 ವರ್ಷಗಳಲ್ಲಿ ಆಷಾಢ ಶುಕ್ರವಾರಗಳಂದು ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಬಾರಿ ಅವಕಾಶ ಸಿಕ್ಕಿದ್ದರಿಂದ ಭಕ್ತರು ಹರ್ಷ ವ್ಯಕ್ತಪಡಿಸಿದರು. ಕೆಲವರು, ಕುಟುಂಬಸಮೇತ ಬೆಟ್ಟಕ್ಕೆ ಬಂದಿದ್ದರು.

ಸಾರಿಗೆ ಬಸ್‌ಗಳಲ್ಲಿ:

ಖಾಸಗಿ ವಾಹನಗಳಿಗೆ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ಜನರು ಖಾಸಗಿ ವಾಹನಗಳನ್ನು ಲಲಿತಮಹಲ್‌ ಅರಮನೆ ಸಮೀಪದ ಜಾಗದಲ್ಲಿ ನಿಲ್ಲಿಸಿ, ಅಲ್ಲಿಂದ ಸಾರಿಗೆ ಬಸ್‌ಗಳಲ್ಲಿ ಬೆಟ್ಟಕ್ಕೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಯಿತು. ಇದರಿಂದಾಗಿ, ಬೆಟ್ಟದಲ್ಲಿ–ಆ ರಸ್ತೆಯಲ್ಲಿ ವಾಹನಗಳ ಭರಾಟೆ ಎಂದಿಗಿಂತ ಕಡಿಮೆ ಇತ್ತು. ಮೆಟ್ಟಿಲುಗಳ ಮೂಲಕವೂ ಅಪಾರ ಸಂಖ್ಯೆಯ ಭಕ್ತರು ಬೆಟ್ಟವನ್ನೇರಿದರು.

ದೇವಿಯ ದರ್ಶನ ಪಡೆಯುವುದಕ್ಕಾಗಿ ಸಾಮಾನ್ಯವಾಗಿ ಇರುವ ಕ್ಯೂಗಳೊಂದಿಗೆ ಹೆಚ್ಚುವರಿಯಾಗಿ ಮತ್ತಷ್ಟು ಕ್ಯೂಗಳನ್ನು ಮಾಡಲಾಗಿತ್ತು. ಮಳೆಯಿಂದ ರಕ್ಷಣೆಗೆ ಪೆಂಡಾಲ್ ಹಾಕಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.

‘ಆಷಾಢ ಮಾಸವು ಬಹಳ ವಿಶೇಷವಾದ ಮಾಸ. ಶಕ್ತಿದೇವತೆಗೆ ಹೆಚ್ಚಿನ ಒತ್ತು ಕೊಡುವ ಸಮಯವಿದು. ಇಷ್ಟಾರ್ಥ ಸಿದ್ಧಿಗೆ ಆಷಾಢದಲ್ಲಿ ಶಕ್ತಿದೇವತೆ ಆರಾಧಿಸಬೇಕು ಎಂದು ಪುರಾಣದಲ್ಲಿ ಹೇಳಲಾಗಿದೆ. ಹೀಗಾಗಿ, ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇಗುಲದಲ್ಲಿ ಬೆಳಿಗ್ಗೆ 3.30ರಿಂದಲೇ ವಿವಿಧ ಅಭಿಷೇಕ ಪೂಜೆ–ಪುನಸ್ಕಾರ, ಹೂವುಗಳಿಂದ ವಿಶೇಷವಾಗಿ ಅಲಂಕಾರ ಮೊದಲಾದವು ನೆರವೇರಿದವು’ ಎಂದು ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಮಾಹಿತಿ ನೀಡಿದರು.

ಪಾಲನೆಯಾಗದ ನಿಯಮ!

ಕೋವಿಡ್ ಹಿನ್ನೆಲೆಯಲ್ಲಿ ಕೆಲವು ನಿಯಮಗಳನ್ನು ಜಿಲ್ಲಾಡಳಿತ ಹೇರಿತ್ತು. ಆದರೆ, ಅದ್ಯಾವುದೂ ಪಾಲನೆಯಾಗಿದ್ದಾಗಲಿ, ಮೇಲ್ವಿಚಾರಣೆ ನಡೆಸಿದ್ದಾಗಲಿ ಕಂಡುಬರಲಿಲ್ಲ!

ಕೋವಿಡ್ ಲಸಿಕೆಯ 2 ಡೋಸ್‌ ಪಡೆದವರು, ಇಲ್ಲದಿದ್ದರೆ ಕೋವಿಡ್ ನೆಗೆಟಿವ್ ವರದಿ ಹೊಂದಿದವರಿಗೆ ಮಾತ್ರ ಅವಕಾಶ ಇರುತ್ತದೆ ಎಂದು ತಿಳಿಸಲಾಗಿತ್ತು. ಆದರೆ, ಯಾರೊಬ್ಬರೂ ಪರಿಶೀಲಿಸಲಿಲ್ಲ. ಸಾಮಾಜಿಕ ಅಂತರವೂ ಕಾಪಾಡಿಕೊಂಡಿದ್ದೂ ಕಾಣಿಸಲಿಲ್ಲ. ಬಹುತೇಕರು ಮಾಸ್ಕ್‌ ಕೂಡ ಧರಿಸಿರಲಿಲ್ಲ.

ಪ್ರಸಾದದ ವ್ಯವಸ್ಥೆ ಅಚ್ಚುಕಟ್ಟು

ಚಾಮುಂಡೇಶ್ವರಿ ಸೇವಾ ಸಮಿತಿಯವರು ಬೆಟ್ಟದಲ್ಲಿ ಭಕ್ತರಿಗೆ ಪ್ರಸಾದವಾಗಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟ ಹಾಗೂ ಸಂಜೆ ಉಪಾಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದರು.

ಬಹುಮಹಡಿ ಪಾರ್ಕಿಂಗ್‌ ಸ್ಥಳದಲ್ಲಿ ಸುತ್ತಲೂ ಶಾಮಿಯಾನ ಹಾಕಿ, ಕುಳಿತು ಊಟ ಮಾಡಲು ಟೇಬಲ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಧ್ಯಾಹ್ನದ ಊಟಕ್ಕೆ ಬಿಸಿಬೇಳೆಬಾತ್, ಉಪ್ಪಿನಕಾಯಿ, ಹಪ್ಪಳ, ಮೈಸೂರು ಪಾಕ್‌, ಅನ್ನ– ಸಾಂಬಾರ್, ಅನ್ನ–ಮೊಸರು ಬಡಿಸಲಾಯಿತು. ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

‘37 ವರ್ಷಗಳಿಂದ ಆಷಾಢ ಮಾಸದ ಶುಕ್ರವಾರಗಳಂದು, ಅಮ್ಮನ ವರ್ಧಂತಿಯಂದು ಪ್ರಸಾದದ ವ್ಯವಸ್ಥೆ ಮಾಡುತ್ತಿದ್ದೇವೆ. ನೂರಾರು ಮಂದಿ ಇದಕ್ಕಾಗಿ ಕೆಲಸ ಮಾಡುತ್ತಾರೆ. ಈ ಬಾರಿ ‘ಹಾರ್ಲಿಕ್ಸ್‌ ಸ್ವಾದಭರಿತ ಮೈಸೂರು ಪಾಕ್‌’ ಬಡಿಸಿದ್ದೇವೆ. ಸಂಜೆವರೆಗೆ 30ಸಾವಿರಕ್ಕೂ ಹೆಚ್ಚಿನ ಮಂದಿ ಊಟ–ಉಪಹಾರ ಮಾಡಿದರು’ ಎಂದು ಮುಖಂಡ ಮಲ್ಲೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಭಕ್ತರ ಸಂಖ್ಯೆ ಕಡಿಮೆ

ಹಿಂದಿನ ಆಷಾಢದ ಶುಕ್ರವಾರಗಳಿಗೆ ಹೋಲಿಸಿದರೆ, ಈ ಬಾರಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ಕೋವಿಡ್‌ ಕಾರಣದಿಂದಾಗಿ, ನಿಯಮಗಳಿಂದಾಗಿ ಹಿಂದೆ ಸರಿದಿರಬಹುದು.

–ಶಶಿಶೇಖರ ದೀಕ್ಷಿತ್, ಪ್ರಧಾನ ಅರ್ಚಕ, ಚಾಮುಂಡೇಶ್ವರಿ ದೇವಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.