ADVERTISEMENT

ಜಿ.ಪಂ. ಚುನಾವಣೆಗೆ ಬೆತ್ತನಗೆರೆ ಶಂಕರ ಯತ್ನ

ಹೆಸರು ಬದಲಿಸಿಕೊಂಡು ಬಿಜೆಪಿ ಸೇರಿರುವ ರೌಡಿಶೀಟರ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 15:14 IST
Last Updated 4 ಡಿಸೆಂಬರ್ 2022, 15:14 IST
ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ಮೊದಲಾದವರ ಸಮ್ಮುಖದಲ್ಲಿ ಮೇ 8ರಂದು ಬಿಜೆಪಿ ಸೇರಿದ್ದ ಬೆತ್ತನಗೆರೆ ಶಂಕರ. (ನಿಂತವರಲ್ಲಿ ಬಲದಿಂದ 4ನೇಯವ). ಮುಖಂಡ ಎಂ.ರಾಜೇಂದ್ರ, ಎಂ.ಅಪ್ಪಣ್ಣ, ಟಿ.ಎಸ್‌.ಶ್ರೀವತ್ಸ, ಸಿದ್ದರಾಜು, ಕೇಬಲ್‌ ಮಹೇಶ್‌ ಇದ್ದರು–ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ಮೊದಲಾದವರ ಸಮ್ಮುಖದಲ್ಲಿ ಮೇ 8ರಂದು ಬಿಜೆಪಿ ಸೇರಿದ್ದ ಬೆತ್ತನಗೆರೆ ಶಂಕರ. (ನಿಂತವರಲ್ಲಿ ಬಲದಿಂದ 4ನೇಯವ). ಮುಖಂಡ ಎಂ.ರಾಜೇಂದ್ರ, ಎಂ.ಅಪ್ಪಣ್ಣ, ಟಿ.ಎಸ್‌.ಶ್ರೀವತ್ಸ, ಸಿದ್ದರಾಜು, ಕೇಬಲ್‌ ಮಹೇಶ್‌ ಇದ್ದರು–ಪ್ರಜಾವಾಣಿ ಚಿತ್ರ   

ಮೈಸೂರು: ನಲ್ಲೂರು ಶಂಕರೇಗೌಡ ಎಂದು ಹೆಸರು ಬದಲಿಸಿಕೊಂಡು ಬಿಜೆಪಿ ಸೇರ್ಪಡೆಯಾಗಿರುವ ರೌಡಿ ಶೀಟರ್‌ ಬೆತ್ತನಗೆರೆ ಶಂಕರ, ಮುಂಬರಲಿರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಎಚ್‌.ಡಿ.ಕೋಟೆ ತಾಲ್ಲೂಕು ಅಂತರಸಂತೆ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬೆತ್ತನಗೆರೆ ಶಂಕರ ಸಂಸದ ಪ್ರತಾಪಸಿಂಹ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮುಖಂಡ ಅಪ್ಪಣ್ಣ ಸಮ್ಮಖದಲ್ಲಿ ಮೇ 8ರಂದು ಇಲ್ಲಿ ಪಕ್ಷ ಸೇರ್ಪಡೆಯಾಗಿದ್ದರು.

ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ಗ್ರಾಮವಾಸ್ತವ್ಯಕ್ಕೆಂದು ಈಚೆಗೆ ಬಂದಿದ್ದ ಕಂದಾಯ ಸಚಿವ ಆರ್‌.ಅಶೋಕ್‌ ಅವರನ್ನು ಸ್ವಾಗತಿಸಿಕೊಂಡವರಲ್ಲಿ ಬೆತ್ತನಗೆರೆ ಶಂಕರ ಕೂಡ ಒಬ್ಬರಾಗಿದ್ದರು. ಆ ತಾಲ್ಲೂಕಿನಲ್ಲಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಹಲವರಿಗೆ ನೆರವು ನೀಡುತ್ತಿದ್ದಾನೆ ಹಾಗೂ ಹಳೇ ಮೈಸೂರು ಭಾಗದ ಪ್ರಮುಖ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದಾನೆ.

ADVERTISEMENT

ಶಂಕರನ ವಿರುದ್ಧ 26 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 23 ಪ್ರಕರಣಗಳು ಖುಲಾಸೆಯಾಗಿದ್ದು, ಮೂರು ಕೊಲೆ ಪ್ರಕರಣಗಳಿವೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಜಿಲ್ಲಾ ಪೊಲೀಸರು ಆತನನ್ನು ಜಿಲ್ಲೆಯಿಂದ ಗಡೀಪಾರು ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷ ಭರವಸೆ ನೀಡಿಲ್ಲ:

‘ನಲ್ಲೂರು ಶಂಕರೇಗೌಡ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆದಿಲ್ಲ. ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಾಗ ನಾನು ಹಾಜರಿರಲಿಲ್ಲ. ಅವರು ಟಿಕೆಟ್ ಅಕಾಂಕ್ಷಿ ಆಗಿರಬಹುದು. ಆದರೆ, ಪಕ್ಷದಿಂದ ಯಾವುದೇ ಭರವಸೆ ನೀಡಿಲ್ಲ’ ಎಂದುಬಿಜೆಪಿಯ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷೆಮಂಗಳಾ ಸೋಮಶೇಖರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.